ತಿರುಪತಿ ಭೀಕರ ಕಾಲ್ತುಳಿತದಲ್ಲಿ 7 ಜನ ಸಾವು
– 40ಕ್ಕೂ ಹೆಚ್ಚು ಮಂದಿಗೆ ಗಾಯ: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ
– ಗೇಟ್ ತೆಗೆದ ಕಾರಣ ಏಕಾಏಕಿ ನೂಕುನುಗ್ಗಲು ಆಗಿ ಘಟನೆ
NAMMUR EXPRESS NEWS
ತಿರುಪತಿ : ತಿರುಪತಿಯಲ್ಲಿರುವ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ 7 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಭೀಕರ ಕಾಲ್ತುಳಿತದಲ್ಲಿ ನರಸೀಪಟ್ಟಣದ ಬಿ.ನಾಯ್ಡು ಬಾಬು (51), ರಜಿನಿ (47), ಲಾವಣ್ಯ (40), ವಿಶಾಖಪಟ್ಟಣದ ಶಾಂತಿ (34), ಕರ್ನಾಟಕದ ಬಳ್ಳಾರಿಯ ನಿರ್ಮಲಾ (50) ಮತ್ತು ತಮಿಳುನಾಡಿನ ಸೇಲಂ ಪ್ರದೇಶದ ಮಲ್ಲಿಗಾ (49) ಶವವಾಗಿ ಪತ್ತೆಯಾಗಿದ್ದಾರೆ.
ಇನ್ನೂ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಏನಿದು?: ವೈಕುಂಠ ದರ್ಶನಕ್ಕೆ ಬಂದ ಭಕ್ತರನ್ನು ಪದ್ಮಾವತಿ ಉದ್ಯಾನವನದಲ್ಲಿ ಇರಿಸಲಾಗಿತ್ತು. ಅಷ್ಟರಲ್ಲಿ ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿಬ್ಬಂದಿ ಗೇಟ್ ತೆರೆದಿದ್ದಾರೆ. ಆದರೆ ಟೋಕನ್ ನೀಡಲು ಗೇಟ್ ತೆರೆಯಲಾಗಿದೆ ಎಂದು ಭಾವಿಸಿದ ಭಕ್ತರು ಏಕಾಏಕಿ ಮುನ್ನುಗ್ಗಿದರು. ಇದರಿಂದ ಕಾಲ್ತುಳಿತ ಉಂಟಾಗಿತ್ತು. ಅಲ್ಲದೆ, ಸರತಿ ಸಾಲಿನಲ್ಲಿದ್ದ ಸಿಬ್ಬಂದಿಯ ಓವರ್ ಆಯಕ್ಷನ್ ಕೂಡ ಕಾಲ್ತುಳಿತಕ್ಕೆ ಕಾರಣ ಎಂದು ಕೆಲ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಸಂಜೆಯಿಂದಲೇ ಟಿಕೆಟ್ ಗಾಗಿ 9 ಕ್ಷೇತ್ರಗಳ 95 ಕೇಂದ್ರಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ಏತನ್ಮಧ್ಯೆ, ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡವರ ವಿವರಗಳು ಮತ್ತು ಇತರ ಮಾಹಿತಿಗಾಗಿ ತಿರುಪತಿಯಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.0877 – 2236007 ಸಂಖ್ಯೆಗೆ ಸಂಪರ್ಕಿಸಲು ಜಿಲ್ಲಾಧಿಕಾರಿ ವೆಂಕಟೇಶ್ವರ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ಸಂತಾಪ: ತಿರುಪತಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ”ಆಂಧ್ರಪ್ರದೇಶದ ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಿಂದ ದುಃಖಿತನಾಗಿದ್ದೇನೆ” ಎಂದು ಅವರು ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ನನ್ನ ಸಂತಾಪವಿದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಆಂಧ್ರಪ್ರದೇಶ ಸರ್ಕಾರವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದೆ ಎಂದು ಹೇಳಿದ್ದಾರೆ. ತಿರುಪತಿಯ ವಿಷ್ಣು ನಿವಾಸಂ ಬಳಿಯ ತಿರುಮಲ ಶ್ರೀವಾರಿ ವೈಕುಂಠ ದ್ವಾರದಲ್ಲಿ ದರ್ಶನಕ್ಕಾಗಿ ಟೋಕನ್ ಸಂಗ್ರಹಿಸುವಾಗ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಘಟನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.