ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿ ಅಂತ್ಯ ಸಂಸ್ಕಾರ!
– ದೇಶದ ಗಮನ ಸೆಳೆದಿದ್ದ ಪ್ರಕರಣ ಇತ್ಯರ್ಥ
– ಅಯ್ಯಂಗೇರಿಯ ಸಫಿಯಾ ಕೊಲೆ ಪ್ರಕರಣ
NAMMUR EXPRESS NEWS
ಕೊಡಗು: ಅಪರೂಪದ ಘಟನೆಯೊಂದರಲ್ಲಿ ಕೊಲೆಯಾದ ಬರೋಬ್ಬರಿ 18 ವರ್ಷಗಳ ಬಳಿಕ ಕೊಡಗಿನ ಅಯ್ಯಂಗೇರಿಯ ಬಾಲಕಿಯ ಅಂತ್ಯ ಸಂಸ್ಕಾರ ನ.11ರಂದು ನಡೆದಿದೆ. ಡಿಸೆಂಬರ್ 2006ರಲ್ಲಿ ಸಫಿಯಾ ಎಂಬ ಅಯ್ಯಂಗೇರಿಯ 13 ವರ್ಷದ ಬಾಲಕಿಯ ಕೊಲೆ ನಡೆದಿತ್ತು. ಜೂನ್ 5, 2008 ರಂದು ಆಕೆಯ ತಲೆಬುರುಡೆ ಮತ್ತು ಕೆಲವು ಮೂಳೆಯ ತುಣುಕುಗಳು ಪತ್ತೆಯಾಗಿತ್ತು. ಅದನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇರಿಸಲಾಗಿತ್ತು. ನ.11ರಂದು ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಫಿಯಾಳ ಅಸ್ಥಿ ಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಪೋಷಕರು, ಅಯ್ಯಂಗೇರಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ್ ಕಾರ್ಯ ನಡೆಸಿದ್ದಾರೆ.
ಏನಿದು ಪ್ರಕರಣದ ಹಿನ್ನೆಲೆ?
ಕೊಡಗಿನ ಅಯ್ಯಂಗೇರಿಯ 13 ವರ್ಷದ ಬಾಲಕಿ ಸಫಿಯಾಳನ್ನು ಕಾರಸಗೋಡಿನ ಮುಲಿಯಾರ್ ಮಸ್ತಿಕುಂದ್ನ ಸಿವಿಲ್ ಕಾಂಟ್ರಾಕ್ಟರ್ ಕೆ.ಸಿ ಹಂಝ ಮತ್ತು ಮೈಮೂನ ದಂಪತಿ 2006ರಲ್ಲಿ ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಬಳಿಕ ಉದ್ಯೋಗ ನಿಮಿತ್ತ ಹಂಝ ದಂಪತಿ ಗೋವಾಕ್ಕೆ ಶಿಫ್ಟ್ ಆಗಿದ್ದರು. ಈ ವೇಳೆ ಸಫಿಯಾಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು.
ಕೆಲ ತಿಂಗಳ ಬಳಿಕ ಸಫಿಯಾಳನ್ನು ಕಾಸರಗೋಡಿಗೆ ಕರೆದುಕೊಂಡು ಬರುತ್ತೇನೆ ಎಂದು ಹಂಝ ಅವರು ಬಾಲಕಿಯ ತಂದೆ ಮೊಯ್ದು ಅವರಿಗೆ ತಿಳಿಸಿದ್ದರು. ಮಗಳನ್ನು ಬರಮಾಡಿಕೊಳ್ಳಲು ಆಕೆಯ ಇಷ್ಟದ ನೆಲ್ಲಿಕಾಯಿಯ ಜೊತೆ ಮೊಯ್ದು ಅವರು ಕಾಸರಗೋಡಿಗೆ ತೆರಳಿದಾಗ, ಸಫಿಯಾ ಕಾಣೆಯಾಗಿದ್ದಾಳೆ ಎಂದು ಹಂಝ ಹೇಳಿದ್ದರು. ಬಳಿಕ ಬಾಲಕಿಯ ತಂದೆ ಮತ್ತು ಹಂಝ ಜೊತೆಯಾಗಿ ಆದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ಒಂದು ವರ್ಷಗಳ ಕಾಲ ಪ್ರಕರಣ ತನಿಖೆ ನಡೆಸಿದ್ದರು, ಸಫಿಯಾಳಿಗಾಗಿ ಹುಡುಕಾಡಿದ್ದರು. ಆದರೆ, ಆಕೆ ಪತ್ತೆಯಾಗಿರಲಿಲ್ಲ. ಈ ನಡುವೆ ಸಫಿಯಾ ಕ್ರಿಯಾ ಸಮಿತಿಯೊಂದನ್ನು ರಚಿಸಲಾಗಿತ್ತು. ಸಫಿಯಾಳ ತಾಯಿ ತನ್ನ ಮಗಳಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಕಾಸರಗೋಡು ಪಟ್ಟಣದಲ್ಲಿ 90 ದಿನಗಳ ಪ್ರತಿಭಟನೆಯನ್ನು ನಡೆಸಿದ್ದರು. ಒಂದೂವರೆ ವರ್ಷಗಳ ನಂತರ ಕೇರಳ ಕ್ರೈಂ ಬ್ರಾಂಚ್ ಪ್ರಕರಣವನ್ನು ಕೈಗೆತ್ತಿಕೊಂಡು ಸಫಿಯಾಳ ನಾಪತ್ತೆ ನಿಗೂಢವನ್ನು ಭೇದಿಸಿತ್ತು. ಕ್ರೈ ಬ್ರಾಂಚ್ ತನಿಖೆಯಲ್ಲಿ ಸಫಿಯಾಳನ್ನು ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ಹಂಝ ಅವರೇ ಕೊಲೆ ಮಾಡಿರುವುದು ಬಯಲಾಗಿತ್ತು. ಹಂಝ ಅವರ ಮನೆಯಲ್ಲಿ ಕೆಲಸ ಮಾಡುವಾಗ ಬಿಸಿ ಗಂಜಿ ಸಫಿಯಾಳ ಮೈಮೇಲೆ ಬಿದ್ದಿತ್ತು. ಇದರಿಂದ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಸಫಿಯಾಳನ್ನು, ಹಂಝ ಕ್ರೂರವಾಗಿ ಹತ್ಯೆ ಮಾಡಿ, ದೇಹವನ್ನು ತುಂಡರಿಸಿ ನಂತರ ಗೋವಾದ ಅಣೆಕಟ್ಟೆಯೊಂದರ ಬಳಿ ಹೂತಿದ್ದ. ಮನೆ ಕೆಲಸ ಮಾಡುವಾಗ ಸಫಿಯಾ ಸುಟ್ಟ ಗಾಯಕ್ಕೆ ಒಳಗಾಗಿದ್ದಳು. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಆಕೆಯನ್ನು ಯಾರಾದರು ನೋಡಿದರೆ ಮನೆಯಲ್ಲಿ ಹಿಂಸಿಸಲಾಗಿದೆ ಅಂದುಕೊಳ್ಳುತ್ತಾರೆ. ಬಾಲ ಕಾರ್ಮಿಕ ಕೇಸ್ ಬೀಳುತ್ತದೆ ಎಂದು ಯೋಚಿಸಿದ ಹಂಝ, ಆಕೆಯನ್ನು ಕೊಲೆ ಮಾಡಿದ್ದ.
ಪ್ರಕರಣ ಸಂಬಂಧ 2008ರಲ್ಲಿ ಹಂಝ ಅವರನ್ನು ಬಂಧಿಸಲಾಗಿತ್ತು. ಜುಲೈ, 2015ರಲ್ಲಿ ಕಾಸರಗೋಡು ಸೆಷನ್ ನ್ಯಾಯಾಲಯ ಹಂಝಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಬಳಿಕ 2019ರಲ್ಲಿ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು. ಕೊಲೆ ಅಪರಾಧಿ ಹಂಝಗೆ ಶಿಕ್ಷೆಯಾದರೂ, ಸಫಿಯಾಳ ಅಸ್ತಿಪಂಜರ ಕಾಸರಗೋಡು ನ್ಯಾಯಾಲಯದಲ್ಲೇ ಉಳಿದಿತ್ತು. ಅದನ್ನು ಇಸ್ಲಾಂ ಧರ್ಮದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ ಶುಕೂರ್ ಮೂಲಕ ಪೋಷಕರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ನ್ಯಾಯಾಧೀಶ ಸಾನು ಎಸ್ ಪಣಿಕ್ಕರ್ ಅವರು ಅಸ್ತಿ ಪಂಜರ ಹಸ್ತಾಂತರಕ್ಕೆ ಆದೇಶಿಸಿದ್ದರು. ನ್ಯಾಯಾಲಯದಿಂದ ಪೋಷಕರಿಗೆ ಹಸ್ತಾಂತರಿಸಿದ ಸಫಿಯಾಳ ಅಸ್ತಿ ಪಂಜವರನ್ನು ಕಾಸರಗೋಡಿನ ಮುಹಿಮ್ಮಾತ್ನಲ್ಲಿ ಶುದ್ದಿಗೊಳಿಸಿ (ಸ್ನಾನ) ಬಳಿಕ ಅಯ್ಯಂಗೇರಿ ಮಸೀದಿಯಲ್ಲಿ ರಾತ್ರಿ ದಫನ್ ಮಾಡಲಾಗಿದೆ. ಈ ಮೂಲಕ ದೇಶದ ಗಮನ ಸೆಳೆದಿದ್ದ ಪ್ರಕರಣವೊಂದು ಇತ್ಯರ್ಥಗೊಂಡಂತಾಗಿದೆ.