ಕುಮಾರಸ್ವಾಮಿ, ನಿಖಿಲ್ ವಿರುದ್ದ ಕೇಸ್!
– ಬೆಳಗಾವಿ: ತಹಶೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು
– ಯಾದಗಿರಿ : ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿ ನೇಮಕವಾಗಿರುವ ರೌಡಿಶೀಟರ್
NAMMUR EXPRESS NEWS
ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ಗೆ ಬೆದರಿಕೆ ಆರೋಪದ ಹಿನ್ನೆಲೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪುತ್ರ ಚನ್ನಪಟ್ಟಣ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರು ತಮಗೆ ಬೆದರಿಕೆ ಹಾಕಿದ್ದಾರೆಂದು ಸುಳ್ಳು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅವರ ಅಪ್ತ ಸುರೇಶ್ ಬಾಬು ಮೇಲೆ ದೂರು ದಾಖಲಾಗಿತ್ತು. ಈ ಬಗ್ಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕುಮಾರಸ್ವಾಮಿ ವಿರುದ್ಧದ ಡಿ ನೋಟಿಫಿಕೇಷನ್ ಪ್ರಕರಣದ ತನಿಖೆ ವಿಚಾರಣೆ ನಂತರ ಪತ್ರಿಕಾಗೋಷ್ಠಿ ನಡೆಸಿ ಎಡಿಜಿಪಿ ವಿರುದ್ದ ಸುಳ್ಳು ಆರೋಪ ಮಾಡಿರುವುದಾಗಿ ದೂರು ನೀಡಲಾಗಿತ್ತು. ಎಸ್ಐಟಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಹೆಚ್ಚಿನ ಸಾಕ್ಷ್ಯಾಧಾರ ಕಲೆ ಹಾಕಲಾಗುತ್ತಿದೆ. ಸಾಕ್ಷ್ಯಾಧಾರ ಇರುವ ಹಿನ್ನೆಲೆ ರಾಜ್ಯಾಪಾಲರ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು. ಇದೇ ವಿಚಾರವಾಗಿ ಸುಳ್ಳು ಆರೋಪ ಮಾಡಿ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆ ಹೆಚ್ಡಿಕೆ, ನಿಖಿಲ್ ಹಾಗೂ ಆಪ್ತ ಸುರೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಪೊಲೀಸರು ಎನ್ಸಿಆರ್ ದಾಖಲಿಸಿದ್ದರು. ಹೀಗಾಗಿ ಎಡಿಜಿಪಿ ಚಂದ್ರಶೇಖರ್ ಕೋರ್ಟ್ನ ಮೊರೆ ಹೋಗಿದ್ದರು. ಕೋರ್ಟ್ ಸೂಚನೆಯ ಮೇರೆಗೆ ಎಫ್ಐಆರ್ ದಾಖಲಾಗಿದೆ
– ಯಾದಗಿರಿ : ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿ ರೌಡಿಶೀಟರ್
ಯಾದಗಿರಿ: ರೌಡಿಶೀಟರ್ ಓರ್ವ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿ ನೇಮಕಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಸರ್ಕಾರಿ ಶಾಲೆ ಅತಿಥಿ ಶಿಕ್ಷಕನಾಗಿ ರೌಡಿಶೀಟರ್ ಭಾಗಪ್ಪ ಎಂಬಾತ ನೇಮಕಗೊಂಡಿದ್ದು, ಕಳೆದ 5 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾನೆ. ಹಿಂದಿ ಭಾಷೆ ಶಿಕ್ಷಕನಾಗಿದ್ದಾನೆ. ರೌಡಿಶೀಟರ್ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿದ್ದರೂ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ರೌಡಿಶೀಟರ್ ಶಿಕ್ಷಕನ ಉಪಟಳಕ್ಕೆ ಬೇಸತ್ತು ಉಳಿದ ಶಿಕ್ಷಕರು ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. 2017ರಲ್ಲಿ ಭಾಗಪ್ಪ ವಿರುದ್ಧ ರೌಡಿಶೀಟರ್ ಓಪನ್ ಆಗಿದೆ. ಆದರೂ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಶಾಲೆಗೆ ಕುಡಿದು ಬಂದು ವಿದ್ಯಾರ್ಥಿಗಳು, ಶಿಕ್ಷಕರ ಜೊತೆ ಜಗಳ ಮಾಡುವುದು, ಅಸಭ್ಯವಾಗಿ ವರ್ತಿಸುವುದು ಮಾಡುತ್ತಿದ್ದಾನೆ. ಈ ಬಗ್ಗೆ ಸಾರ್ವಜನಿಕ ಗ್ರಂಥಾಲಯದ ಮೇಲ್ವಿಚಾರಕ ಶಿವಪ್ಪ ಎಂಬುವವರು ಯಾದಗಿರಿ ಡಿಸಿಗೆ ದೂರು ನೀಡಿದ್ದು, ಭಾಗಪ್ಪನನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.
– ಬೆಳಗಾವಿ: ತಹಶೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು
ಬೆಳಗಾವಿ: ಬೆಳಗಾವಿ ತಾಲ್ಲೂಕು ತಹಶೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ತಿಳಿದಿದ್ದೆ.
ತಹಶೀಲ್ದಾರ್ ಕಚೇರಿಯಲ್ಲಿ ಎಸ್ಡಿಸಿ ಆಗಿದ್ದ ರುದ್ರೇಶ ಯಾದಣ್ಣವರ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಸೋಮವಾರ ರಾತ್ರಿ ಆಗಿರಬಹುದು. ಮಂಗಳವಾರ ಬೆಳಿಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿಗೆ ಬಂದ ಮೇಲೆಯೇ ವಿಷಯ ಗೊತ್ತಾಗಿದೆ. ಮೇಲಧಿಕಾರಿಗಳ ಕಿರುಕುಳ ತಾಳದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಆರೋಪಿಸಿ ತಮ್ಮ ಮೊಬೈಲ್ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.