ರಾಜ್ಯದಲ್ಲಿ 17 ಸಾವಿರ ಗಡಿ ದಾಟಿದ ಡೆಂಘೀ!
– ನೂರಾರು ಮಂದಿ ಸಾವು: ಮಳೆ ಬಂದ್ರು ಇಳಿಯದ ಸೋಂಕು
– ಸ್ವಚ್ಛತೆ ಒಂದೇ ರೋಗ ತಡೆಯುವ ಮಾರ್ಗ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಸೋಂಕಿನ ಅಬ್ಬರ ಮುಂದುವರೆದಿದೆ. ಭಾನುವಾರವೂ 320 ಮಂದಿಗೆ ಡೆಂಘೀ ದೃಢಪಟ್ಟಿದ್ದು ಒಟ್ಟು ಡೆಂಘೀ ಪ್ರಕರಣ 17 ಸಾವಿರ ಗಡಿ ದಾಟಿದೆ. ನಿತ್ಯ ಸರಾಸರಿ 2,500 ಪರೀಕ್ಷೆ ನಡೆಸುತ್ತಿದ್ದ ಆರೋಗ್ಯ ಇಲಾಖೆಯು ಭಾನುವಾರ 1,630 ಮಂದಿಗೆ ಮಾತ್ರ ಪರೀಕ್ಷೆ ನಡೆಸಿದೆ. ಈ ಪೈಕಿ 320 ಮಂದಿಗೆ ಡೆಂಘೀ ಖಚಿತಪಟ್ಟಿದ್ದು, ಒಟ್ಟು ಡೆಂಘೀ ಪ್ರಕರಣಗಳ ಸಂಖ್ಯೆ 17,227ಕ್ಕೆ ಏರಿಕೆಯಾಗಿದೆ. ಭಾನುವಾರದ ಪ್ರಕರಣ ಸೇರಿ 3,004 ಮಂದಿ ಸಕ್ರಿಯ ಡೆಂಘೀ ರೋಗಿಗಳು ಚಿಕಿತ್ಸೆ ಯಲ್ಲಿದ್ದಾರೆ. ಈ ಪೈ 2,539 ಮಂದಿ ಮನೆಯಲ್ಲೇ ಚಿಕಿತ್ಸೆಯಲ್ಲಿದ್ದಾರೆ. 465 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 9 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಭಾನುವಾರ ಬೆಂಗಳೂರು ನಗರದಲ್ಲಿ 142, ಬೆಳಗಾವಿ 21, ಹಾವೇರಿ, ದಾವಣಗೆರೆ ತಲಾ 17, ರಾಮನಗರ 15, ಕಲಬುರಗಿ 13 ಪ್ರಕರಣ ದೃಢಪಟ್ಟಿವೆ. ತುಮಕೂರು 9, ದಕ್ಷಿಣ ಕನ್ನಡ 7, ಮಂಡ್ಯ 6, ಚಿಕ್ಕಬಳ್ಳಾಪುರ 5, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ತಲಾ 4, ಚಾಮರಾಜನಗರ, ಬಾಗಲ ಕೋಟೆ, ವಿಜಯಪುರ ತಲಾ 3, ಧಾರವಾಡ, ಯಾದಗಿರಿ, ಬೀದರ್, ರಾಯಚೂರು ತಲಾ 2, ಕೊಡಗು, ಚಿಕ್ಕಮಗಳೂರು, ಕೊಪ್ಪಳ, ಉತ್ತರ ಕನ್ನಡ, ಗದಗ, ಕೋಲಾರ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ದೃಢಪಟ್ಟಿದೆ.
ಸ್ವಚ್ಛತೆ ಕಾಪಾಡೋದು ರೋಗ ನಿಯಂತ್ರಣಕ್ಕೆ ಸಾಧ್ಯ
ಡೆಂಘೀಜ್ವರ ತಡೆಗಟ್ಟುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಳು, ಜಾಲಿ ಗಿಡಗಳನ್ನು, ತ್ಯಾಜ್ಯವನ್ನು ತೆರವುಗೊಳಿಸಬೇಕು. ಮನಬಂದಂತೆ ತ್ಯಾಜ್ಯ ವಿಲೇವಾರಿ ಮಾಡಬಾರದು.ಇದರಿಂದ ಕೊಳಚೆ ನೀರು ಸೃಷ್ಟಿಯಾಗಿ, ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಈಗ ಮಳೆಗಾಲವಾಗಿದ್ದು, ಕೊಳಕು ನೀರು ನಿಂತು ಡೆಂಘೀಜ್ವರ, ಮಲೇರಿಯಾ, ಚಿಕನ್ ಗುನ್ಯಾದಂಥ ರೋಗಗಳಿಂದ ಜನರನ್ನು ಕಾಡುತ್ತಿವೆ.