ಚಿನ್ನದ ಆಸೆಗೆ ಹೋಗಿ ಜೀವ ಕಳೆದುಕೊಂಡರೇ ಮೂವರು?
– ತುಮಕೂರಿನಲ್ಲಿ ಕಾರಿಗೆ ಬೆಂಕಿಹಚ್ಚಿ ಬೆಳ್ತಂಗಡಿಯ ಮೂವರ ಹತ್ಯೆಯ ರಹಸ್ಯ ಬಯಲು: ಆರು ಮಂದಿ ವಶಕ್ಕೆ
– ರಾಜ್ಯದಲ್ಲಿ ನಕಲಿ ಚಿನ್ನದ ದಂಧೆ ಸಕ್ರಿಯ..?
NAMMUR EXPRESS NEWS
ತುಮಕೂರು: ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿ ಮೂವರ ಹತ್ಯೆ ಮಾಡಿದ್ದ ಪ್ರಕರಣ ರಹಸ್ಯ ಬಯಲಾಗಿದ್ದು, ಪ್ರಾಥಮಿಕ ಮಾಹಿತಿಯಂತೆ ನಕಲಿ ಚಿನ್ನದ ದಂಧೆಗೆ ಮೂವರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ದಂಧೆಯ ಮಾಸ್ಟರ್ ಮೈಂಡ್ ತುಮಕೂರಿನ ಸ್ವಾಮಿ ಸೇರಿ ಆರು ಮಂದಿ ಈಗಾಗಲೇ ಪೊಲೀಸ್ ವಶದಲ್ಲಿದ್ದಾರೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ತುಮಕೂರಿಗೆ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು. ಆದರೆ ಬಳಿಕ ಇವರೆಲ್ಲರ ಮೃತದೇಹ ಸುಟ್ಟ ಕಾರಿನಲ್ಲಿ ಪತ್ತೆಯಾಗಿತ್ತು.
ಕಾರಿನ ಢಿಕ್ಕಿಯಲ್ಲಿ 2 ಮೃತದೇಹ ಹಿಂಬದಿಯ ಸೀಟಿನಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು. ಕಾರನ್ನು ಕೆರೆಯ ಮಧ್ಯಭಾಗಕ್ಕೆ ಕೊಂಡೊಯ್ದು ಪೊದೆಗಳ ಮದ್ಯೆ ನಿಲ್ಲಿಸಿ ಆರೋಪಿಗಳು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಮೃತ ಮೂವರು “ನಕಲಿ ಚಿನ್ನದ ದಂಧೆ”ಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ಈ ಪ್ರಕರಣ ಪ್ರಮುಖ ಆರೋಪಿ ತುಮಕೂರಿನ ಸ್ವಾಮಿ ಸೇರಿ ಆರು ಮಂದಿಯನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು, ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಬೆಲೆಗೆ ಬಂಗಾರ ಮಾರಾಟ ಮಾಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಅವರಲ್ಲಿದ್ದ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಆರು ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.