ಕರುನಾಡ ಪ್ರತಿ ಜಿಲ್ಲೆಯಲ್ಲಿ ದಸರಾ ಸಂಭ್ರಮ ಬಲು ಜೋರು!!
* ಮಡಿಕೇರಿ ವಿಶಿಷ್ಟ ದಸರಾಚರಣೆ: ಶೃಂಗೇರಿಯಲ್ಲಿ ನವರಾತ್ರಿ ಉತ್ಸವ
* ಮಂಗಳೂರಿನ ಕುದ್ರೋಳಿ, ಉಡುಪಿ ನವದುರ್ಗೆಯರ ವೈಭವ
* ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ: ದಾಂಡೇಲಿಯಲ್ಲಿ ರಾಮಲೀಲಾ ಉತ್ಸವದ ವೈಭವ
NAMMUR EXPRESS NEWS
ಮೈಸೂರಿನಲ್ಲಿ ಮಾತ್ರವಲ್ಲದೇ ಕರ್ನಾಟಕದ ಮಡಿಕೇರಿಯಲ್ಲಿಯೂ ವಿಭಿನ್ನವಾದ ನವರಾತ್ರಿ ಸಂಭ್ರಮವಿರುತ್ತದೆ. ಈ ಹಿಂದೆ ಹಾಲೇರಿ ವಂಶಸ್ಥರ ಆಳ್ವಿಕೆಯ ಸಂದರ್ಭದಲ್ಲಿ ಕೊಡಗಿನಲ್ಲಿ ವಿವಿಧ ಮಾರಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಸಾವು ನೋವುಗಳು ಉಂಟಾಗಿತ್ತು. ಹೀಗಾಗಿ ರಾಜರು ಶಕ್ತಿ ದೇವತೆ ಮಾರಿಯಮ್ಮ ದೇವರಿಗೆ ಮೊರೆ ಹೋಗಿ ಕರಗಗಳ ನಗರ ಪ್ರದಕ್ಷಿಣೆ ಮಾಡಿಸಿದ್ದು, ಆ ಬಳಿಕ ಈ ಸಾವು ನೋವುಗಳು ದೂರವಾದವು. ಅಂದಿನಿಂದ ಕೊಡಗನ್ನು ಆಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಿಸುತ್ತಿದ್ದರು. ಅಂದಿನ ಆ ದಸರಾವು ಮಡಿಕೇರಿಯಲ್ಲಿ ದಸರಾ ನಡೆಯಲು ಕಾರಣವಾಯಿತು. ಈ ದಸರಾದ ವೇಳೆಯ ಕಾರ್ನೀವಲ್ ಆಚರಣೆಯನ್ನು ಮರಿಯಮ್ಮ ಹಬ್ಬ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವಿಶಿಷ್ಟ ರೀತಿಯ ಜನಪದ ನೃತ್ಯಗಳು ಸೇರಿದಂತೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
* ಶೃಂಗೇರಿಯಲ್ಲಿ ನವರಾತ್ರಿಯ ಉತ್ಸವ!
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಮಾಡಲಾಗುತ್ತದೆ. ಈ ಒಂಬತ್ತು ದಿನಗಳ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆಗಳು ನಡೆಯುತ್ತದೆ. ಅದಲ್ಲದೇ ನವರಾತ್ರಿಯ ವೇಳೆ ಶೃಂಗೇರಿಯಲ್ಲಿ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ಈ ದರ್ಬಾರ್ ಆಚರಣೆಯು ನಡೆಯುತ್ತದೆ. ಶ್ರೀಮಠದ ಆವರಣದಲ್ಲಿ ವಿವಿಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನವರಾತ್ರಿ ವೈಭವಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ.
* ಮಂಗಳೂರಿನ ಕುದ್ರೋಳಿಯಲ್ಲಿ ನವದುರ್ಗೆಯರ ವೈಭವ !!
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಶಾರದ ದೇವಿಯ ವಿಗ್ರಹದೊಂದಿಗೆ ದಸರಾ ಹಬ್ಬದ ವಿಶೇಷ.
ಇಂದಿನವರೆಗೂ ಪ್ರತಿವರ್ಷ ಮಂಗಳೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನವರಾತ್ರಿ ಆರಂಭದಿಂದ ವಿಜಯದಶಮಿಯವರೆಗೆ ದೇವಾಲಯದಲ್ಲಿ ದುರ್ಗಾ ದೇವಿಯ ಒಂಬತ್ತು ರೂಪದ ಒಂಬತ್ತು ವಿಗ್ರಹಗಳನ್ನಿಟ್ಟು ಪೂಜಿಸಲಾಗುತ್ತದೆ. ವಿಜಯ ದಶಮಿ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ ದೇವಾಲಯದ ಆವರಣದಲ್ಲಿರುವ ಪುಷ್ಕರಿಣಿ ಕೊಳದಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ದಸರಾ ಉತ್ಸವವು ಮುಗಿಯುತ್ತದೆ.
* ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ!
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಮೈಸೂರಿನಂತೆ ಜಂಬೂ ಸವಾರಿ ಅದ್ದೂರಿ ನಡೆಯುತ್ತದೆ. ಮೈಸೂರಿನಂತೆಯೇ ಇಲ್ಲಿ ಕೂಡ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾಕ್ಕೆ ಚಾಲನೆ. ಒಂಬತ್ತು ದಿನಗಳ ಕಾಲ ನಡೆಯುವ ಆಚರಣೆಯ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ದಸರಾದ ರಂಗನ್ನು ಹೆಚ್ಚಿಸುತ್ತದೆ. ಶಿವಮೊಗ್ಗದಲ್ಲಿ ಕೊನೆಯ ದಿನವಾದ ವಿಜಯದಶಮಿಯಂದು ಅಂಬಾರಿಯ ಮೇಲೆ ದೇವಿಯ ಮೆರವಣಿಗೆ ಸಹಿತ ಜಂಬೂ ಸವಾರಿಯು, ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾಕ್ಕೆ ತೆರೆ ಬೀಳುತ್ತದೆ.
* ದಾಂಡೇಲಿಯಲ್ಲಿ ರಾಮಲೀಲಾ ಉತ್ಸವದ ವೈಭವ!
ರಾಜ್ಯದ ಒಂದೊಂದು ಕಡೆಯಲ್ಲೂ ಒಂದೊಂದು ರೀತಿಯ ಆಚರಣೆ. ಆದರೆ ಉತ್ತರ ಕನ್ನಡದ ದಾಂಡೇಲಿಯಲ್ಲಿ ಈ ವೇಳೆಯಲ್ಲಿ ರಾಮಲೀಲಾ ಉತ್ಸವವನ್ನು ಅದ್ದೂರಿಯಾಗಿ ಮಾಡಲಾಗುತ್ತದೆ. ಕಳೆದ ಆರು ದಶಕಗಳಿಂದ ದಸರಾ ಪ್ರಯುಕ್ತ ಈ ಆಚರಣೆಯು ಚಾಲ್ತಿಯಲ್ಲಿದ್ದು, ದುಷ್ಟಶಕ್ತಿಗಳ ಪ್ರತೀಕವಾದ ಅಸುರರ ಪ್ರತಿಕೃತಿಗಳನ್ನು ದಹಿಸುವುದು ಇಲ್ಲಿನ ವಿಶೇಷ. ಈ ಉತ್ಸವದ ವೇಳೆ ಸಿಡಿಮದ್ದುಗಳ ಪ್ರದರ್ಶನದೊಂದಿಗೆ ದಸರಾಕ್ಕೆ ತೆರೆ ಎಳೆಯಲಾಗುತ್ತದೆ.