ಹುಣಸೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ
-ಕೇರಳಕ್ಕೆ ನುಗ್ಗಿದ ಗಜರಾಜ ಬಂಡೀಪುರದ ಆನೆ ಶಿಬಿರದಲ್ಲಿ ಸಾವು
-ಮೈಸೂರಿನ ಕೋಳಿ ಫಾರಂನಲ್ಲಿ ಬೋನಿಗೆ ಬಿದ್ದ ಚಿರತೆ
NAMMUR EXPRESS NEWS
ಮೈಸೂರು: ಮೈಸೂರಿನಲ್ಲಿ ಮಾನವ ಕಾಡು ಪ್ರಾಣಿ ಸಂಘರ್ಷ ಮುಂದುವರಿದೆ. ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ನಡೆಸಿದ್ದು, ರೈತರೊಬ್ಬರು ಬಲಿಯಾಗಿದ್ದಾರೆ. ಚಲುವಯ್ಯ (65) ಮೃತ ರೈತ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಕಾಡಾನೆ ದಾಳಿಯಿಂದ ಸ್ಥಳದಲ್ಲೇ ರೈತ ಚಲುವಯ್ಯ ಮೃತಪಟ್ಟಿದ್ದಾರೆ.
ನಿರಂತರ ಕಾಡು ಪ್ರಾಣಿ ಹಾವಳಿಯಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು, ರೈತರ ಒತ್ತಾಯ ಮಾಡಿದ್ದಾರೆ. ಕಾಡಾನೆಗಳ ಸಹಿತ ಕಾಡು ಪ್ರಾಣಿಗಳ ಹಾವಳಿಯಿಂದ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮೆಲ್ಲರ ರಕ್ಷಣೆಗೆ ಬರಬೇಕು. ಜೀವ ಹೋದ ಮೇಲೆ ಬಂದು ಏನು ಹೇಳಿದರೂ, ಪರಿಹಾರ ಕೊಟ್ಟರೂ ಹೋದ ಜೀವ ಮರಳಿ ಬಾರದು. ಹೀಗಾಗಿ ಪ್ರಾಣಿಗಳ ದಾಳಿಯಿಂದ ರಕ್ಷಣೆ ನೀಡಲು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದೌಡಾಯಿಸಿದ್ದಾರೆ.
ಕೇರಳಕ್ಕೆ ನುಗ್ಗಿದ ಗಜರಾಜ ಬಂಡೀಪುರದ ಆನೆ ಶಿಬಿರದಲ್ಲಿ ಸಾವು.
ಚಾಮರಾಜನಗರ: ಕೇರಳಕ್ಕೆ ನುಗ್ಗಿ ದಾಂಧಲೆ ಮಾಡಿ ಸೆರೆ ಸಿಕ್ಕಿದ್ದ ಆನೆ ಬಂಡೀಪುರದ ರಾಮಾಪುರ ಆನೆ ಶಿಬಿರದಲ್ಲಿ ಮೃತಪಟ್ಟಿದೆ. ಇದಕ್ಕೆ ಪರಿಸರವಾದಿಗಳು ತೀವ್ರ ಬೇಸರವನ್ನು ಹೊರಹಾಕಿದ್ದಾರೆ. ಆನೆ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ವ್ಯಾಪ್ತಿಯಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ರಾಮಾಪುರ ಆನೆ ಶಿಬಿರದಲ್ಲಿ ಮೃತಪಟ್ಟಿದೆ. ಹಾಸನದ ಬೇಲೂರು ಸಮೀಪ ಸೆರೆ ಹಿಡಿದು ಬಂಡೀಪುರ ಅರಣ್ಯಕ್ಕೆ ಈ ಆನೆಯನ್ನು ಬಿಡಲಾಗಿತ್ತು. ಕೊನೆಗೆ ಅದೇ ಆನೆಯನ್ನು ಪುನಃ ಬಂಡೀಪುರದ ರಾಮಾಪುರ ಅನೆ ಶಿಬಿರಕ್ಕೆ ಕರೆತಂದು ಬಿಡಲಾಗಿತ್ತು. ಇದೀಗ ಆನೆ ಸವಾಗಿದ್ದು, ಆನೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೈಸೂರಿನ ಕೋಳಿ ಫಾರಂನಲ್ಲಿ ಬೋನಿಗೆ ಬಿದ್ದ ಚಿರತೆ
ಮೈಸೂರಿನ ದಾರಿಪುರ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಮೈಸೂರಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು.ದಾರಿಪುರದಲ್ಲಿ ಚಿರತೆ ಕಾಣಿಸಿಕೊಂಡು, ಆತಂಕವನ್ನು ಹೆಚ್ಚಿಸಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ದಾರಿಪುರದ ಕೋಳಿ ಫಾರಂನಲ್ಲಿ ಬೋನು ಇರಿಸಿದ್ದರು. ಕೋಳಿ ಬೇಟೆಯಾಡಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ. ಸ್ಥಳಕ್ಕೆ ಆರ್ಎಫ್ಓ ಸುರೇಂದ್ರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಕ್ಕೆ ಸುರಕ್ಷಿತವಾಗಿ ರವಾನಿಸಿದ್ದಾರೆ.