ಮದ್ಯ ಪ್ರಿಯರಿಗೆ ಮೊದಲ ಬಾರಿ ಸಿಹಿ ಸುದ್ದಿ!
– ಪ್ರೀಮಿಯಂ ಮದ್ಯ ಪ್ರಿಯರಿಗೆ ಬೆಲೆ ಇಳಿಕೆ ಕಿಕ್
– ಜುಲೈ 1ರಿಂದ ಮದ್ಯದ ದರದಲ್ಲಿ ಇಳಿಕೆ
NAMMUR EXPRESS NEWS
ಬೆಂಗಳೂರು: ಮದ್ಯ ಪ್ರಿಯರಿಗೆ ಕಿಕ್ ಏರಿಸುವ ಸುದ್ದಿಯನ್ನು ರಾಜ್ಯ ಸರಕಾರ ನೀಡಿದೆ. ಜುಲೈ 1ರಿಂದ ಮದ್ಯದ ದರಗಳನ್ನು ಸರ್ಕಾರ ಕಡಿಮೆ ಮಾಡುತ್ತಿದೆ. ಭಾರಿ ಬೆಲೆಯ ಪ್ರೀಮಿಯಂ ಬ್ರಾಂಡ್ಗಳು ಇಳಿಕೆಯಾಗಲಿವೆ.
ರಾಜ್ಯದಲ್ಲಿ ಸೆಮಿ ಪ್ರೀಮಿಯಂ, ಪ್ರೀಮಿಯಂ ಮದ್ಯದ ದರ ದುಬಾರಿಯಾಗಿತ್ತು. ಹೀಗಾಗಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿರುವುದೂ ಕಂಡುಬರುತ್ತಿತ್ತು. ಅಷ್ಟೇ ಅಲ್ಲದೇ ಗಡಿ ಭಾಗದ ಜಿಲ್ಲೆಗಳ ಜನರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದರು. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅಬಕಾರಿ ತೆರಿಗೆ ನಷ್ಟವಾಗುತ್ತಿತ್ತು. ಇನ್ನೂ ಇತರ ರಾಜ್ಯಗಳ ಮದ್ಯದ ದರಗಳಿಗೆ ಸಮೀಪಿಸುವಂತೆ ರಾಜ್ಯದ ದರ ಪರಿಷ್ಕರಿಸುವುದಾಗಿ ಸಿಎಂ ಸಿದ್ದರಾಮಯ್ಯ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ ಹೇಳಿದ್ದರು. ಈ ಘೋಷಣೆಯು ಇದೇ ಜುಲೈ 1 ರಿಂದ ಜಾರಿಯಾಗ್ತಿದೆ.
ಈಗ 750 ಎಂ.ಎಲ್. ಗಾತ್ರದ ಬಾಟಲಿಗೆ ₹2,000 ದರ ಇರುವ ಬ್ರಾಂಡ್ಗಳ ಮದ್ಯದ ದರವು ಜುಲೈ 1ರಿಂದ ₹1,700ರಿಂದ ₹1,800ಕ್ಕೆ ಇಳಿಕೆಯಾಗಲಿದೆ. ಪ್ರತಿ ಬಾಟಲಿಗೆ ₹5,000 ದರ ಇರುವ ಬ್ರಾಂಡ್ ಮದ್ಯಗಳ ದರ ₹3,700ಕ್ಕೆ ಇಳಿಯಲಿದೆ. ಪ್ರತಿ ಬಾಟಲಿಗೆ 7,100 ಇರುವ ಮದ್ಯದ ದರ 5,200ರ ಅಸುಪಾಸಿಗೆ ಕಡಿಮೆಯಾಗುವ ಸಾಧ್ಯತೆಯೂ ಇದೆ. ಅದರೆ ಎಷ್ಟು ಕಡಿಮೆಯಾಗಿದೆ ಅನ್ನೋದ್ರ ಖಚಿತ ಮಾಹಿತಿ ಜುಲೈ 1 ರ ಬಳಿಕವೇ ಗೊತ್ತಾಗಲಿದೆ. ಮದ್ಯ ಮಾರಾಟ ಹೆಚ್ಚಿಸಿ, ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಮೊದಲ ಐದು ಸ್ಲಾಬ್ಗಳಲ್ಲಿ ಈಗ ಇರುವ ಹೆಚ್ಚುವರಿ ಅಬಕಾರಿ ತೆರಿಗೆ ವ್ಯತ್ಯಾಸವಾಗುತ್ತಿಲ್ಲ. ಆದರೆ, 6ರಿಂದ 16ನೇ ಸ್ಲಾಬ್ಗಳಲ್ಲಿ ಹೆಚ್ಚುವರಿ ಅಬಕಾರಿ ತೆರಿಗೆ ದರ ಗಣನೀಯವಾಗಿ ಇಳಿಕೆಯಾಗಲಿದೆ. ಈ ಬಗ್ಗೆ ಅಬಕಾರಿ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಸ್ಪ್ಯಾಬ್ಗಳ ಮದ್ಯದ ದರ ಸಾಕಷ್ಟು ದುಬಾರಿಯಾಗಿ ಇತ್ತು. ಈ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ, ಜುಲೈ 1ರಿಂದ ಪರಿಷ್ಕೃತ ಮದ್ಯ ದರ ಅನ್ವಯಿಸಲಿದೆ ಎಂದು ಗೊತ್ತಾಗಿದೆ.