ವಿಷ ಬೇರೆತ ಮಟನ್ ತಿಂದು ಕುಟುಂಬದ ನಾಲ್ವರ ಸಾವು!
– ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ಘಟನೆ.. ಆಕಸ್ಮಿಕವೋ…? ಆತ್ಮಹತ್ಯೆಯೋ..?
– ಮೂವರು ಗಂಡರ ಮುದ್ದಿನ ಹೆಂಡತಿ ಮೇಲೆ 2ನೇ ಗಂಡನ ದೂರು
– ಸಾವಿನಲ್ಲೂ ಒಂದಾದ ಅಣ್ಣ ತಂಗಿ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ
– ಯುವತಿಯನ್ನು ಬೆತ್ತಲೆ ಮಾಡಿ ಖಾರದ ಪುಡಿ ಹಾಕಿ ಹಲ್ಲೆ: ಐವರು ಮಂಗಳಮುಖಿಯರು ಅರೆಸ್ಟ್!
– ಆಟವಾಡುತ್ತಾ ಮೆಟ್ರೋ ಟ್ರ್ಯಾಕ್ಗೆ ಜಿಗಿದ 4 ವರ್ಷದ ಮಗು!
NAMMUR EXPRESS NEWS
ರಾಯಚೂರು: ವಿಷ ಬೆರೆತ ಮಟನ್ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘೋರ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ನಡೆದಿದೆ. ಇನ್ನೊಬ್ಬ ಮಗಳ ಸ್ಥಿತಿ ಚಿಂತಾಜನಕವಾಗಿದೆ.
ಫುಡ್ ಪಾಯಿಸನ್ನಿಂದ ಹೀಗಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ ಆತ್ಮಹತ್ಯೆ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ಭೀಮಣ್ಣ (60), ಭೀಮಣ್ಣನ ಪತ್ನಿ ಈರಮ್ಮ (54), ಭೀಮಣ್ಣನ ಮಗ ಮಲ್ಲೇಶ್ (19), ಮಗಳು ಪಾರ್ವತಿ (17) ಸಾವಿಗೀಡಾದವರು. ಮತ್ತೊಬ್ಬ ಮಗಳು ಮಲ್ಲಮ್ಮ (18) ಎಂಬಾಕೆಯ ಸ್ಥಿತಿ ಗಂಭೀರವಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬುಧವಾರ ರಾತ್ರಿ ಇಡೀ ಕುಟುಂಬ ಮಟನ್ ಕೊಂಡು ತಂದು ಅಡುಗೆ ಮಾಡಿ ಜೊತೆಯಾಗಿ ಊಟ ಮಾಡಿತ್ತು. ಮಟನ್ ಮಾಡುವ ವೇಳೆ ಅಡುಗೆಯಲ್ಲಿ ಹಲ್ಲಿ ಬಿದ್ದಿರಬಹುದು ಎಂಬ ಶಂಕೆಯಿದೆ. ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಇದು ಫುಡ್ ಪಾಯ್ಸನ್ ಅಲ್ವ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೂ ಕೆಲವರು ತರ್ಕಿಸಿದ್ದಾರೆ. ಎಂಎಲ್ಸಿ ವರದಿ ಆಧರಿಸಿ ಫುಡ್ ಪಾಯ್ಸನ್ ಅಂತ ಪ್ರಾಥಮಿಕ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಆತ್ಮಹತ್ಯೆ ಆರೋಪದ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೂವರು ಗಂಡರ ಮುದ್ದಿನ ಹೆಂಡತಿ ಮೇಲೆ 2ನೇ ಗಂಡನ ದೂರು!
ಚಿಕ್ಕಬಳ್ಳಾಪುರ: ಇನ್ಸ್ಟಾಗ್ರಾಂನಲ್ಲಿ ಲವ್ ಆಗಿ ಓಡಿಹೋಗುವ, ಅಥವಾ ಇರುವ ಗಂಡನ ಅಥವಾ ಹೆಂಡತಿಯ ಬಿಟ್ಟು ಇನ್ನೊಬ್ಬರ ಜೊತೆ ಪರಾರಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಇದು ಅಂಥದೇ ಇನ್ನೊಂದು ಪ್ರಕರಣ. ಇದೂ ಕೂಡ ಇನ್ಸ್ಟಗ್ರಾಂನಲ್ಲಿ ಹುಟ್ಟಿಕೊಂಡ ಪ್ರೀತಿ ದಾಂಪತ್ಯವನ್ನು ಹಾಳು ಮಾಡಿದ ಕಥೆ. ಮೂವರು ಗಂಡರ ಮುದ್ದಿನ ಹೆಂಡತಿಯ ಪ್ರಕರಣದಲ್ಲಿ ಎರಡನೇ ಗಂಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಬೆಳಗಾವಿಯಲ್ಲಿ ಯುವತಿ ಇನ್ಸ್ಟಾಗ್ರಾಮ್ನಲ್ಲಿ ಲವ್ ಮಾಡಿ ಇನ್ನೊಬ್ಬನನ್ನು ಮದುವೆ ಆದ ಪ್ರಕರಣದಲ್ಲಿ ಇದೀಗ ಎರಡನೇ ಗಂಡನೇ ಪೋಲೀಸರಿಗೆ ದೂರು ನೀಡಿದ್ದಾನೆ. ಶಿಡ್ಲಘಟ್ಟದಲ್ಲಿ ದೂರು ದಾಖಲಾಗಿದೆ. ಯುವತಿ ಪ್ರಿಯಾಂಕ ಸುಳ್ಳು ಆರೋಪ
ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾಳೆ. ಆಕೆ ಕಾರು ಬಾಡಿಗೆ ಹೋಗಿದ್ದ ವೇಳೆ ಪರಿಚಯವಾಗಿದ್ದಳು. ಒಂದು ವಾರ ಫೋನ್ನಲ್ಲಿ ಮಾತನಾಡಿ ನಂತರ ನನ್ನ ಜೊತೆಯಲ್ಲಿ ಬಂದಳು. 8 ತಿಂಗಳಿನಿಂದ ನನ್ನ ಜೊತೆಯಲ್ಲಿ ಇದ್ದಳು ಎಂದು ಎರಡನೇ ಗಂಡ ದೂರಿದ್ದಾನೆ.
ಬೆಳಗಾವಿಗೆ ಸ್ನೇಹಿತೆಯ ಮದುವೆಯಿದೆ ಎಂದು ಹೇಳಿ ಹೋದಳು. ಸ್ವಂತ ಮಾವ ನನ್ನ ಕೂಡಿ ಹಾಕಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಮಾಡಿದ್ದಾಳೆ. ಆ ಆರೋಪ ಸುಳ್ಳು, ನಾನು ಅವರ ಸೋದರ ಮಾವ ಅಲ್ಲ. ನಮಗೂ ಅವರಿಗೂ ಯಾವುದೇ ರೀತಿ ಸಂಬಂಧ ಇಲ್ಲ. ನನ್ನ ಮದುವೆಗೂ ಮುನ್ನ ಆಕೆಯ ಮೊದಲೇ ಮದುವೆ ಆಗಿತ್ತು. ನನ್ನ ಜೊತೆಯಲ್ಲಿ ಬಂದಾಗ ಅವಳ ಮೊದಲನೇ ಗಂಡ ಮುನಿರಾಜು ಬಂದು ವಾಪಸ್ ಕರೆದುಕೊಂಡು ಹೋಗಿದ್ದರು. ಆಕೆ ಮತ್ತೆ ನಾನೇ ಬೇಕು ಎಂದು ವಾಪಸ್ ಬಂದಳು. ಆರೋಪ ಎಲ್ಲಾ ಸುಳ್ಳು ಎಂದು ಪ್ರಿಯಾಂಕ ವಿರುದ್ಧ ಎರಡನೇ ಗಂಡ ದೂರು ನೀಡಿದ್ದಾನೆ. ಈಕೆ ಮೊದಲು ಚಿಕ್ಕಬಳ್ಳಾಪುರದ ಮುನಿರಾಜು ಎಂಬವರನ್ನು ಮದುವೆಯಾಗಿದ್ದಳು. ನಂತರ ಶಿಡ್ಲಘಟ್ಟದ ಸುಧಾಕರ್ ಜೊತೆಗೆ ಎರಡನೇ ಮದುವೆಯಾಗಿದ್ದಳು. ಈತನ ಜೊತೆಗೆ ಪ್ರೀತಿ ಇನ್ಸ್ಟಗ್ರಾಂ ಮೂಲಕ ಹುಟ್ಟಿಕೊಂಡದ್ದು ಎನ್ನಲಾಗಿತ್ತು. ಇದೀಗ ಬೆಳಗಾವಿ ಮೂಲದ ರೋಹಿತ್ ಎಂಬಾತನ ಜೊತೆಗೆ ಮೂರನೇ ಮದುವೆಯಾಗಿದೆ ಎನ್ನಲಾಗಿದೆ. ಈ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರಿಗೆ ತಲೆ ಕೆಡುವ ಹಾಗೆ ಆಗುತ್ತಿದೆ.
ಸಾವಿನಲ್ಲೂ ಒಂದಾದ ಅಣ್ಣ ತಂಗಿ ; ರೈಲಿಗೆ ತಲೆ ಕೊಟ್ಟು ಇಬ್ಬರು ಆತ್ಮಹತ್ಯೆಗೆ ಶರಣು..!
ಚಿಕ್ಕಬಳ್ಳಾಪುರ : ರೈಲಿಗೆ ತಲೆ ಕೊಟ್ಟು ಅಣ್ಣ-ತಂಗಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ಮೃತರನ್ನು ಪ್ರಭು (25) ನವ್ಯ (23) ಎಂದು ಗುರುತಿಸಲಾಗಿದೆ. ಮೃತರನ್ನು ಶಿಡ್ಲಘಟ್ಟ ಪ್ರೇಮನಗರದವರು ಎಂದು ತಿಳಿದು ಬಂದಿದೆ. ಪ್ರಭು ಹಾಗೂ ನವ್ಯರ ತಾಯಿ ತೀರಿಕೊಂಡ ಹಿನ್ನೆಲೆ ಇಬ್ಬರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಶಿಡ್ಲಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವತಿಯನ್ನು ಬೆತ್ತಲೆ ಮಾಡಿ ಹಲ್ಲೆ ಕೇಸ್: ಐವರು ಮಂಗಳಮುಖಿಯರು ಅರೆಸ್ಟ್!
ವಿಜಯಪುರ : ಯುವತಿ ಬೆತ್ತಲೆ ಮಾಡಿ ಖಾಸಗಿ ಅಂಗಕ್ಕೆ ಖಾರದ ಪುಡಿ ಹಾಕಿ ಹಲ್ಲೆ ಮಾಡಿದ ಕೇಸ್ ಗೆ ಸಂಬಂಧಿಸಿದಂತೆ ಐವರು ಮಂಗಳಮುಖಿಯರನ್ನು ಅರೆಸ್ಟ್ ಮಾಡಲಾಗಿದೆ.
ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಜುಲೈ 21 ರಂದು ಯುವತಿಯನ್ನು ಸಂಪೂರ್ಣ ಬೆತ್ತಲೆ ಮಾಡಿ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು.
ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ, ವಿಡಿಯೋ ವೈರಲ್ ಆದ 24 ಗಂಟೆಗಳಲ್ಲಿ ಐವರು ಮಂಗಳಮುಖಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವತಿ (ರೇಖಾ ರೆಡ್ಡಿ ಉರ್ಪ್ ಸಚಿವ ರೆಡ್ಡಿ) ಅವರು 6 ಮಂಗಳಮುಖಿಯರ ಮೇಲೆ ನಗರದ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಸದ್ಯ ಮಂಗಳಮುಖಿಯರಾದ ಅಶ್ವಿನಿ, ಹುಲಿಗೆಮ್ಮಾ, ಕವಿತಾ, ದಾನಮ್ಮಾ ಹಾಗೂ ಮಾಹನಮ್ಮಾ ಅವರನ್ನು ಬಂಧಿಸಲಾಗಿದೆ. ಈ ಹಲ್ಲೆಯ ಕುರಿತು ತನಿಖೆ ಮಾಡಲಾಗುತ್ತಿದೆ, ತನಿಖೆ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ.
ಆಟವಾಡುತ್ತಾ ಮೆಟ್ರೋ ಟ್ರ್ಯಾಕ್ಗೆ ಜಿಗಿದ 4 ವರ್ಷದ ಮಗು!
ಬೆಂಗಳೂರು: ನಾಲ್ಕು ವರ್ಷದ ಮಗುವೊಂದು ಆಟವಾಡುತ್ತಾ ಮೆಟ್ರೋ ಟ್ರ್ಯಾಕ್ಗೆ ಜಿಗಿದಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ನಲ್ಲಿ ಘಟನೆ ನಡೆದಿದೆ. ಮೆಟ್ರೋ ರೈಲು ಬರಲು 5 ನಿಮಿಷಗಳು ಬಾಕಿ ಇದ್ದು. ಈ ವೇಳೆ ಆಟವಾಡುತ್ತಾ ಮಗು ಟ್ರ್ಯಾಕ್ ಮುಂದೆ ಬಂದಿದೆ. ಬಗ್ಗಿ ನೋಡುವಾಗ ಆಕಸ್ಮಿಕವಾಗಿ ಆಯತಪ್ಪಿ ಟ್ರ್ಯಾಕ್ಗೆ ಬಂದಿದೆ. ಮಗು ಟ್ರ್ಯಾಕ್ಗೆ ಬಿದ್ದ ತಕ್ಷಣ ಅಲರ್ಟ್ ಆದ ಮೆಟ್ರೋ ಸಿಬ್ಬಂದಿ, ಮೆಟ್ರೋ ಟ್ರ್ಯಾಕ್ನ ಪವರ್ ಕಟ್ ಮಾಡಿಸಿದ್ದಾರೆ.
ಕೂಡಲೇ ಟ್ರ್ಯಾಕ್ಗೆ ಇಳಿದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯವಾಗಿಲ್ಲ. ಇನ್ನೂ ಈ ಘಟನೆಯಿಂದ ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಇಬ್ಬರೂ ಮೆಟ್ರೋ ಸೆಕ್ಯುರಿಟಿ ಗಾರ್ಡ್ಗಳಿಂದ ಮಗುವಿನ ಪ್ರಾಣ ಉಳಿದಿದೆ. ಮಗುವಿಗೆ ಯಾವುದೇ ಗಾಯಗಳು ಆಗದ ರೀತಿಯಲ್ಲಿ ಮೆಟ್ರೋ ವಿದ್ಯುತ್ ಲೈನ್ ಆಫ್ ಮಾಡಿದ್ದಾರೆ. ಮೆಟ್ರೋ ಸೆಕ್ಯುರಿಟಿಗಳು, ಸಿಬ್ಬಂದಿ ಚೂರು ಯಾಮಾರಿದರೂ ಮಗುವಿನ ಪ್ರಾಣ ಹೋಗುತ್ತಿತ್ತು ಎಂಬ ಮಾಹಿತಿ ಇದೆ.