ಗೀತಾ, ರಾಘವೇಂದ್ರ ಇಬ್ಬರನ್ನು ಸೋಲಿಸ್ತೇನೆ!
– ಒಂದು ಕುಟುಂಬದ ಕೈಗೆ ಬಿಜೆಪಿ ಹೋಗಲು ಬಿಡಲ್ಲ
– ಯಡಿಯೂರಪ್ಪ ಕುಟುಂಬದ ವಿರುದ್ದ ಟೀಕಾಸ್ತ್ರ
– ಶಿವಮೊಗ್ಗ ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಈಶ್ವರಪ್ಪ ಇದೀಗ ಪ್ರಚಾರದ ಕಣಕ್ಕೆ ಇಳಿದಿದ್ದು, ಈ ಬಾರಿ ರಾಘವೇಂದ್ರ ಹಾಗೂ ಗೀತಾ ಶಿವರಾಜ್ ಕುಮಾರ್ ಇಬ್ಬರನ್ನು ಸೋಲಿಸುವುದಾಗಿ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಅಂಬುತೀರ್ಥ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಚುನಾವಣೆಯ ಪ್ರವಾಸ ಆರಂಭ ಮಾಡಿದ್ದೇನೆ. ಈ ಬಾರಿ ಅನ್ಯಾಯವಾಗಿರುವ ಹಿಂದುತ್ವವಾದಿಗಳ ಪರ ನೀವು ಹೋರಾಟ ಮಾಡುತ್ತಿದ್ದೀರಾ ನಿಮ್ಮ ಜೊತೆ ನಾವಿದ್ದೇವೆ ಎಂದು ಹಳ್ಳಿಯ ಜನರು ಕೂಡ ಆಶೀರ್ವಾದ ಮಾಡಿದ್ದಾರೆ. ಪ್ರತಿ ಊರಲ್ಲೂ ಒಳ್ಳೆ ಸ್ಪಂದನೆ ಇದೆ ಎಂದರು.
ಯಡಿಯೂರಪ್ಪ ಕುಟುಂಬದ ವಿರುದ್ಧ ಗುಡುಗು
ಕೇಂದ್ರದಲ್ಲಿ ಒಂದೇ ಕುಟುಂಬದಲ್ಲಿ ಕಾಂಗ್ರೆಸ್ ಪಕ್ಷ ಇದೆ. ಅದರ ವಿರುದ್ಧವಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಮೋದಿ ಹಾಗೂ ಅಮಿತ್ ಶಾ ಹೇಳುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ಸಂಸ್ಕೃತಿಯಲ್ಲಿದೆ ಎಂದು ಯಡಿಯೂರಪ್ಪ ಕುಟುಂಬದ ವಿರುದ್ದ ಗುಡುಗಿದ ಈಶ್ವರಪ್ಪ, ಅಪ್ಪ ಮಕ್ಕಳ ಕೈಯಲ್ಲಿ ಬಿಜೆಪಿ ಪಕ್ಷ ಇರುವುದನ್ನ ವಿರೋಧ ಮಾಡಿದ್ದಕ್ಕೆ ಇಡೀ ಕರ್ನಾಟಕದ ಜನತೆ ಮೆಚ್ಚಿ ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಸ್ಪರ್ಧೆ ಮಾಡಲೇಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಕರ್ನಾಟಕದಲ್ಲಿ ಯಡಿಯೂರಪ್ಪನವರೆ ಲಿಂಗಾಯತ ನಾಯಕರು, ಅವರೇ ಜನರ ನಾಯಕರು, ಅವರ ಕುಟುಂಬವನ್ನು ಬಿಟ್ಟರೆ ಬೇರೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಆಗುವುದಿಲ್ಲ ಎಂಬ ಭ್ರಮೆ ಹುಟ್ಟಿಸಿರುವುದರಿಂದ ನಮ್ಮ ರಾಜ್ಯಕ್ಕೆ ಈ ಪರಿಸ್ಥಿತಿ ಬಂದಿದೆ ಎಂದರು.
ದೆಹಲಿಗೆ ಹೋಗಿದ್ದೆ…ಬುದ್ದಿವಂತಿಕೆ ತೋರಿಸಿದ್ದಾರೆ!
ದೆಹಲಿಗೆ ಅಮಿತ್ ಶಾ ಕರೆದಿದ್ದರು, ನಾನು ಹೋಗಿದ್ದೆ, ಅವರು ಬುದ್ಧಿವಂತಿಕೆಯಿಂದ ನನ್ನನ್ನು ವಾಪಸ್ ಕಳಿಸಿದ್ದಾರೆ. ಚುನಾವಣೆಯಲ್ಲಿ ನಿಂತು ಗೆದ್ದು ಪುನಃ ಅವರ ಬಳಿ ಹೋಗುತ್ತೇನೆ. ಅವಮಾನ ಎಂದು ನಾನು ಭಾವಿಸುವುದಿಲ್ಲ. ದೊಡ್ಡವರು ಕರೆದಾಗ ಹೋಗಲಿಲ್ಲ ಎಂದರೆ ನನಗೆ ಸೊಕ್ಕು ಎನ್ನುತ್ತಾರೆ. ನನ್ನನ್ನು ಬೆಳೆಸಿರುವವರೆ ಅವರು. ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಹೇಳಿದಾಗ ಸಂಘದ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರ್ವಾಲ್ ಬಂದಿದ್ದರು. ಅವರಿಗೆ ಚುನಾವಣೆಗೆ ಯಾಕೆ ನಿಲ್ಲುತ್ತೇನೆ ಎಂದು ತಿಳಿಸಿದ್ದೇನೆ ಎಂದರು.
ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡಲ್ಲ
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ಇಬ್ಬರನ್ನು ಸೋಲಿಸುತ್ತೇನೆ. ಹೊಂದಾಣಿಕೆ ರಾಜಕಾರಣ ಹೇಗೆ ಮಾಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಹೊಂದಾಣಿಕೆ ರಾಜಕಾರಣಕ್ಕೆ ಜಿಲ್ಲೆಯ ಜನ ಬಲಿಯಾಗಲ್ಲ. ಸಿದ್ಧಾಂತದ ವಿಚಾರದಲ್ಲಿ ಹಿಂದುತ್ವದ ವಿಚಾರದಲ್ಲಿ ಸ್ಪರ್ಧೆ ಮಾಡಿರುವ ಈಶ್ವರಪ್ಪನವರಿಗೆ ಖಂಡಿತವಾಗಿ ಬೆಂಬಲ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಈಶ್ವರಪ್ಪ ಹೇಳಿದರು.
ಆರಗಗೆ ಮರಳು ಮಾಫಿಯಾ ಗೊತ್ತಿಲ್ವಾ?.. ಜ್ಞಾನೇಂದ್ರ ನಾನು ಬೆಳೆಸಿದ ಹುಡುಗ!
ಆರಗ ಜ್ಞಾನೇಂದ್ರರ ಈಶ್ವರಪ್ಪನವರ ಸ್ಪರ್ಧೆ ನಾಮಕಾವಸ್ಥೆ ಎಂಬ ಮಾತಿಗೆ ಉತ್ತರಿಸಿದ ಅವರು ಈ ಕ್ಷೇತ್ರದಲ್ಲಿ ಮರಳು ಮಾಫಿಯಾ ಎಷ್ಟು ನಡೆಯುತ್ತಿದೆ ಎಂದು ನನಗೆ ಮೊನ್ನೆ ಮೊನ್ನೆ ಗೊತ್ತಾಯಿತು. ಬಹಳ ಹಿರಿಯರು ನನಗೆ ಈ ವಿಷಯ ತಿಳಿಸಿದರು. ಜ್ಞಾನೇಂದ್ರರ ಕಣ್ಣಿಗೆ ಬಿದ್ದಿಲ್ಲವೇ? ಅವನ ರೋಲ್ ಎಷ್ಟು ಇದೆ ನನಗೆ ಗೊತ್ತಿಲ್ಲ, ಎಂ.ಪಿ ರೋಲ್ ಬಹಳ ಇದೆ ಎಂದು ಹೇಳುತ್ತಾರೆ. ನನಗೆ ಅದು ಕ್ಲಿಯರ್ ಇಲ್ಲ. ಈ ಚುನಾವಣೆ ಮುಗಿಯುತ್ತಿದ್ದಂತೆ ನಾಮಕಾವಸ್ತೆ ಯಾರು ಎಂದು ಜನ ತೋರಿಸುತ್ತಾರೆ. ಚುನಾವಣೆಯಲ್ಲಿ ಗೆದ್ದು ಈ ಮರಳು ಮಾಫಿಯಾವನ್ನು ಮಟ್ಟ ಹಾಕುತ್ತೇನೆ ಎಂದರು.
ನಾನು ಬೆಳಸಿದ ಹುಡುಗನೇ ಜ್ಞಾನೇಂದ್ರ, ನಮ್ಮ ಮನೆಯಲ್ಲೇ ಇದ್ದವನು, ಡಿಗ್ರಿ ಓದಿದ್ದು ನಮ್ಮ ಮನೆಯಲ್ಲೇ, ವೈಯಕ್ತಿಕವಾಗಿ ನಾನು ಅವನ ಬಗ್ಗೆ ಟೀಕೆ ಮಾಡುತ್ತಿಲ್ಲ. ಒಬ್ಬ ಎಂಎಲ್ಎ ಆದವನ ಡ್ಯೂಟಿ ಇದು, ಮರಳು ಮಾಫಿಯಾ ಆಗುತ್ತಿರುವ ಸಮಯದಲ್ಲಿ ಯಾಕೆ ಸುಮ್ಮನೆ ಕೂತಿದ್ದಾರೆ. ಹಿಂದುತ್ವಕ್ಕೆ ತೀರ್ಥಹಳ್ಳಿಯಲ್ಲಿ ಹೆಚ್ಚಿನ ಶಕ್ತಿ ಬರಬೇಕು. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಡೆಸುತ್ತೇನೆ ಎಂದರು.