ಅಧಿಕಾರಿಗಳಿಗೆ ಸರ್ಕಾರದ ವಾರ್ನಿಂಗ್!
– ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು
– ಚುರುಕಿನ ಆಡಳಿತಕ್ಕೆ 3 ತಿಂಗಳ ಗಡುವು
– ಸರ್ಕಾರಿ ನೌಕರರು ನಿಯಮ ಪಾಲನೆ ಮಾಡಲೇಬೇಕು!
NAMMUR EXPRESS NEWS
ಬೆಂಗಳೂರು: ಅಧಿಕಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಈ ಮೂಲಕ ಚುರುಕಿನ ಆಡಳಿತಕ್ಕೆ 3 ತಿಂಗಳ ಗಡುವು ನೀಡಲಾಗಿದೆ. ಸರ್ಕಾರಿ ನೌಕರರು ನಿಯಮ ಪಾಲನೆ ಮಾಡಲೇಬೇಕು ಎಂಬ ಆದೇಶ ಹೊರಡಿಸಲಾಗಿದೆ.
ಜುಲೈ 8 ಹಾಗೂ 9 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಮಂಗಳವಾರ ರಾತ್ರಿ ಮುಕ್ತಾಯವಾಯಿತು. ಎರಡು ದಿನಗಳ ಸುದೀರ್ಘ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಅವರು, ಅಧಿಕಾರಿಗಳಿಗೆ ಲೋಪ ದೋಷ ಸರಿಪಡಿಸಿಕೊಂಡು ಆಡಳಿತ ಸುಧಾರಣೆ ಮಾಡಲು 3 ತಿಂಗಳು ಗಡುವು ಕೊಟ್ಟು, 10 ಖಡಕ್ ಸೂಚನೆಗಳನ್ನು ನೀಡಿದ್ದಾರೆ.
– ಮುಖ್ಯಮಂತ್ರಿಯವರ ಪ್ರಮುಖ ಸೂಚನೆಗಳು
* ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ- ಸಿಇಒ- ಎಸ್ಪಿ ಸಮನ್ವಯದಿಂದ, ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ.
* ಸರ್ಕಾರ ಸಮಾಜದ ಅಸಮಾನತೆ ತೊಡೆದು ಹಾಕುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಸರ್ಕಾರದ ಹಣ ದುರುಪಯೋಗ ಆಗದಂತೆ ಕೆಲಸ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಬೇಕು. ಚರ್ಚೆ ಸಂದರ್ಭದಲ್ಲಿ ಹಲವು ಲೋಪದೋಷಗಳ ಕುರಿತು ಪ್ರಸ್ತಾಪಿಸಲಾಗಿದ್ದು, ಇವುಗಳನ್ನು ಸರಿಪಡಿಸಿಕೊಂಡು ಹೋಗಬೇಕು.
* ಉದ್ದೇಶಪೂರ್ವಕವಾಗಿ ಇಂತಹ ಲೋಪ ದೋಷಗಳನ್ನು ಮುಂದುವರಿಸಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು.
* ನಾವೆಲ್ಲರೂ ಸರ್ಕಾರದ ಸೇವಕರು. ಅದಕ್ಕೆ ವಿಧಾನಸೌಧದಲ್ಲಿ ಕೆಂಗಲ್ ಹನುಮಂತಯ್ಯನವರು ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ದಾರೆ.
* ನಾವು ಸಮಾಜವನ್ನು, ಸಮಾಜದಲ್ಲಿರುವ ಅಸಮಾನತೆಯ ಕಾರಣವನ್ನು ಅರ್ಥ ಮಾಡಿಕೊಂಡು, ನಮ್ಮ ಜನಪರ ಯೋಜನೆಗಳನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕು. ಉದಾಹರಣೆಗೆ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ಜಾರಿಯಾಗಿವೆ.
* ಇತರ ಕೆಲವು ಕಾರ್ಯಕ್ರಮಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು.
*ಈಗಾಗಲೇ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ. ನೀವೆಲ್ಲರೂ ಸೇರಿ ಜಿಲ್ಲೆ ಅಭಿವೃದ್ಧೀ ಕುರಿತು ಚಿಂತನೆ ನಡೆಸಬೇಕು.
* ಜನಪರ ಕಾರ್ಯಕ್ರಮಗಳನ್ನು ನಾವು – ನೀವು ಎಲ್ಲಾ ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕು. ಏಕೆಂದರೆ ಜನರ ತೆರಿಗೆ ಹಣದಿಂದ ನಾವೆಲ್ಲರೂ ಇದ್ದೇವೆ. ಅವರ ಋಣ ತೀರಿಸಬೇಕು.
* ಸಮಾಜದ ಋಣ ನಮ್ಮ ಮೇಲಿದೆ ಎಂಬುದನ್ನು ಅರಿತು ಕೆಲಸ ಮಾಡಬೇಕು.
* ಮೂರು ತಿಂಗಳ ನಂತರ ಮತ್ತೆ ಸಭೆ ನಡೆಸಲಾಗುವುದು. ಆಗ ಸುಧಾರಣೆಯಾಗದಿದ್ದರೆ ಸಹಿಸಲಾಗದು.