ಸರ್ಕಾರಿ ಬಸ್ ದರ ಏರಿಕೆ ಶಾಕ್..!?
– ಟಿಕೆಟ್ ದರ ಏರಿಕೆ ಸುಳಿವು ನೀಡಿದ ಕೆಎಸ್ ಆರ್ ಟಿಸಿ ಅಧ್ಯಕ್ಷ
– ಕಳೆದ ವಾರವೇ ಹೆಚ್ಚಳ ಆಗಿದ್ಯಾ?: ಶೇ.15-20 ರಷ್ಟು ದರ ಏರಿಕೆ?
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಾರಿಗೆ ಬಸ್ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಶಾಕ್ ನೀಡಲು ಮುಂದಾಗಿದೆ. ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಸುಳಿವು ನೀಡಿದ್ದು, ಇದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇನ್ನು ಕೆಲವು ಬಸ್ ಅಲ್ಲಿ ಟಿಕೆಟ್ ದರ ಕಳೆದ ವಾರ ದಿಂದಲೇ ಹೆಚ್ಚಿಸಲಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಅವರು ಮಾತನಾಡಿ , ಇಂಧನ ದರ, ವಾಹನ ಬಿಡಿ ಭಾಗಗಳ ಬೆಲೆ ಏರಿಕೆ ಹಾಗೂ ಸಿಬ್ಬಂದಿ ವೇತನ ವೆಚ್ಚದಿಂದ ಕೆಎಸ್ಆರ್ಟಿಸಿ ನಷ್ಟ ಅನುಭವಿಸುತ್ತಿದೆ. ಹೀಗಾಗಿ ನಷ್ಟ ಸರಿದೂಗಿಸಲು ಟಿಕೆಟ್ ದರ ಏರಿಕೆ ಅನಿವಾರ್ಯ ಎಂದು ಹೇಳುವ ಮೂಲಕ ಬಸ್ ಟಿಕೆಟ್ ದರ ಖಚಿತ ಎಂಬ ಸುಳಿವನ್ನು ನೀಡಿದ್ದಾರೆ. ಮೂಲಗಳ ಪ್ರಕಾರ ಶೇ. 15-20 ರಷ್ಟು ಟಿಕೆಟ್ ದರ ಏರಿಕೆಗೆ ನಿಗಮ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಬಸ್ ಟಿಕೆಟ್ ದರ ಏರಿಕೆ ವಿಚಾರ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಗುಬ್ಬಿ ಶ್ರೀನಿವಾಸ್ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ದರ ಏರಿಕೆ ವಿಚಾರವಾಗಿ ಸ್ಪಷ್ಟನೆ ನೀಡಲು ನಿರಾಕರಿಸಿರುವ ರಾಮಲಿಂಗಾರೆಡ್ಡಿ ಅವರು, ದರ ಏರಿಕೆ ಬಗ್ಗೆ ಗುಬ್ಬಿ ಶ್ರೀನಿವಾಸ್ರನ್ನೇ ಕೇಳಿಕೊಳ್ಳಿ ಎಂದು ಹೇಳಿದ್ದಾರೆ. ಹೀಗಾಗಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರ ಶಕ್ತಿ ಯೋಜನೆ ಆರಂಭಿಸಿ ಒಂದು ವರ್ಷವಾಗಿದೆ. ಇದರಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಾರೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಷ್ಟದಲ್ಲಿದೆ. ಹೀಗಾಗಿ ಬಸ್ ಟಿಕೆಟ್ ದರವನ್ನು ಹೆಚ್ಚಿಸಲು ಚಿಂತನೆ ನಡೆಸಿದ್ದೇವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ತಿಳಿಸಿದ್ದಾರೆ.
ಕಾಗವಾಡದಲ್ಲಿ ಮಾತನಾಡಿರುವ ಅವರು, ಶಕ್ತಿ ಯೋಜನೆಯಿಂದ ಸಂಸ್ಥೆ ನಷ್ಟ ಅನುಭವಿಸಿದೆ. ಡೀಸೆಲ್ ಮತ್ತು ಬಸ್ ಬಿಡಿ ಭಾಗಗಳ ಬೆಲೆಯೂ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಬಸ್ ದರ ಏರಿಕೆ ಮಾಡಿಲ್ಲ. ಹೀಗಾಗಿ ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.