ವರ್ಷದ ನಂತರ ತೆರೆದ ಹಾಸನಾಂಬೆ ಬಾಗಿಲು!
– ಕಳೆದ ವರ್ಷ ಹಚ್ಚಿದ್ದ ಹಣತೆ, ಹೂವು ಹಾಗೆಯೇ ಇತ್ತು!
– ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರ ದರ್ಶನ
NAMMUR EXPRESS NEWS
ಹಾಸನ: ಹಾಸನದ ಅಧಿದೇವತೆ ಹಾಗೂ ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಗರ್ಭಗುಡಿ ಬಾಗಿಲು ಗುರುವಾರ ಮಧ್ಯಾಹ್ನ ೧೨.೧೦ಕ್ಕೆ ಶಾಸ್ತ್ರೋಕ್ತವಾಗಿ ತೆರೆಯಿತು. ಮೈಸೂರು ಅರಸು ವಂಶಸ್ಥ ನಂಜರಾಜ/ನಟೇಶ್ ಅರಸ್ ಅವರು ಗೊನೆಕಟ್ಟಿದ್ದ ಬಾಳೆ ಕಂಬ ಕಡಿದ ಕೂಡಲೇ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಯಿತು.ಈ ಅಪರೂಪದ ಸನ್ನಿವೇಶಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಾಸನ ಆದಿ ಚುಂಚನಗಿರಿ ಮಠದ ಶ್ರೀ ಶಂಭುನಾಥಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಹಾಗೂ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.
ದೇವಿಯ ಗರ್ಭಗುಡಿ ಬಾಗಿಲು ತೆರೆದಾಗ ಕಳೆದ ವರ್ಷ ಬಾಗಿಲು ಮುಚ್ಚುವ ವೇಳೆ ಹಚ್ಚಿಟ್ಟಿದ್ದ ಹಣತೆ ಹಾಗೆಯೇ ಉರಿಯುತ್ತಿತ್ತು. ಹೂ ಬಾಡಿರಲಿಲ್ಲ. ನೈವೇದ್ಯ ತಾಜಾ ರೂಪದಲ್ಲೇ ಇತ್ತು. ಈ ಅಪರೂಪದ ದೃಶ್ಯವನ್ನು ನೆರೆದಿದ್ದ ಪ್ರತಿಯೊಬ್ಬರೂ ಕಣ್ತುಂಬಿಕೊಂಡು ಭಕ್ತಿ ಪರವಶರಾದರು. ಈ ವೇಳೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ಹಾಸನದ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಸನ್ನಿವೇಶ, ವರ್ಷದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆದಿದೆ. ಇದಕ್ಕೆ ಪರಮಪೂಜ್ಯ ಮಠಾಧೀಶರು, ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ ಎಂದರು. ಕಳೆದ ವರ್ಷ ಹಾಸನಾಂಬೆ, ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ೧೪.೪೦ ಲಕ್ಷ ಭಕ್ತರು ಆಗಮಿಸಿದ್ದರು. ಈ ಬಾರಿ ೨೦ ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ. ಈ ವೇಳೆ ಯಾವುದೇ ಅವ್ಯವಸ್ಥೆ, ಲೋಪ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಎಂದು ಸಿಎಂ ಆದಿಯಾಗಿ ಎಲ್ಲವೂ ನನಗೆ, ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದಾರೆ ಎಂದರು.
ಬಂದ ಭಕ್ತರ ಮನಸ್ಸಿಗೆ ತೃಪ್ತಿ ಆಗುವ ರೀತಿಯಲ್ಲಿ ತಾಯಿ ದರ್ಶನ ಸಿಗಬೇಕು ಎಂದು ನಾವು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಹಿಂದಿನ ಸಲ ಆಗಿದ್ದ ಲೋಪ, ತಪ್ಪುಗಳನ್ನು ಸರಿಪಡಿಸಿಕೊಂಡಿದ್ದೇವೆ ಎಂದು ಹೇಳಿದರು.
ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವದ ಸಿದ್ಧತೆ ಜನಮೆಚ್ಚುಗೆ ಗಳಿಸಲು ಕಾರಣೀಭೂತರಾಗಿರುವ ಜಿಲ್ಲಾಡಳಿತಕ್ಕೆ ವಿಶೇಷವಾದ ಅಭಿನಂದನೆಗಳು. ನಮ್ಮ ಮನೆಯ ಕಾರ್ಯಕ್ರಮದ ರೀತಿಯಲ್ಲಿ ಎಲ್ಲರೂ ಶ್ರಮ ಹಾಕಿದ್ದಾರೆ. ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದರ ವೀಕ್ಷಣೆಗೆ ಡಬಲ್ ಡೆಕರ್ ಬಸ್ ಸಹ ಬಂದಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ದೇವಿಯ ದರ್ಶನಕ್ಕೆ ಸಿಎಂ, ಡಿಸಿಎಂ, ನ್ಯಾಯಾಮೂರ್ತಿಗಳಾದಿಯಾಗಿ ಹೊರ ರಾಜ್ಯಗಳಿಂದಲೂ ಅಪಾರ ಮಂದಿ ಬರುತ್ತಾರೆ. ಅವರಿಗೆ ಮೆಚ್ಚಿಗೆ ಆಗುವ ರೀತಿಯಲ್ಲಿ ನಮ್ಮ ನಡವಳಿಕೆ ಇರಲಿ. ಹಾಸನದ ಹಿರಿಮೆ ಹೆಚ್ಚಿಸುವ ರೀತಿ ನಡೆಸುಕೊಳ್ಳೋಣ ಎಂದರು.
ಶ್ರೀ ಸಿದ್ದಗಂಗಾ ಶ್ರೀ ಮಾತನಾಡಿ, ಇಂದಿನಿಂದ ಮುಂದಿನ ನ.೨ ರ ವರೆಗೆ ಹಾಸನವನ್ನು ಇಡೀ ಪ್ರಪಂಚ ನೋಡಲಿದೆ.
ದೇವಿಯ ಗರ್ಭಗುಡಿ ಬಾಗಿಲು ತೆರೆದಾಗ ಹಿಂದಿನ ವರ್ಷ ಇಟ್ಟಿದ್ದ ಎಲ್ಲವೂ ಹಾಗೆಯೇ ಇತ್ತು. ಇಡೀ ಹಾಸನಾಂಬೆಯ ಜವಾಬ್ದಾರಿ ವಹಿಸುವುದು ಸಚಿವ ರಾಜಣ್ಣ ಅವರಿಗೆ ನಿಜಕ್ಕೂ ಒಂದು ಪುಣ್ಯದ ಕೆಲಸ ಎಂದರು. ಯಾವುದೇ ಮನುಷ್ಯನಿಗೆ ಶಾಂತಿ, ನೆಮ್ಮದಿ, ತೃಪ್ತಿ, ಸಮಾಧಾನ ಬೇಕು ಎಂದ ಅವರು ದೇವಾಲಯಕ್ಕೆ ಹೋಗಬೇಕು. ಏಕೆಂದರೆ ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಕ್ಕೆ ಧೀ ಶಕ್ತಿ ಇದೆ. ಇಲ್ಲಿಗೆ ಬಂದರೆ ಮನಃಶಾಂತಿ ಸಿಗಲಿದೆ ಎಂದರು.
ಈ ವೇಳೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಪೂರ್ಣಿಮಾ, ಎಸ್ಪಿ ಮೊಹಮದ್ ಸುಜೀತಾ, ಎಡಿಸಿ ಕೆ.ಟಿ.ಶಾಂತಲಾ, ಎಸಿ ಮಾರುತಿ, ಎಲ್ಲಾ ತಾಲೂಕುಗಳ ತಹಸೀಲ್ದಾರರು. ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ವಿವಿಧ ಮಠಗಳ ಮಠಾಧೀಶರು ಹಾಗೂ ಮೈಸೂರು ಪ್ರಾದೇಶಕ ಆಯುಕ್ತ ರಮೇಶ್ ಮೊದಲಾದವರಿದ್ದರು. ಇದಕ್ಕೂ ಮುನ್ನ ಎಲ್ಲ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ತಾಯಿ ಹಾಸನಾಂಬೆ ಜಾತ್ರೆ ಆರಂಭವಾಗಿದೆ. ಮಹಾಲಕ್ಷ್ಮಿ, ಕಾಳಿ, ಸರಸ್ವತಿ ರೂಪದಲ್ಲಿ ಹಾಸನಾಂಬೆ ಇಲ್ಲಿ ನೆಲೆಸಿರುವ ಪವಿತ್ರ ಕ್ಷೇತ್ರ ಇದು. ಸರಸ್ವತಿ ಜ್ಞಾನದ ಶಕ್ತಿಯಾದರೆ, ಕಾಳಿ ಕ್ರಿಯಾಶಕ್ತಿ, ಲಕ್ಷ್ಮಿ ಸಂಪತ್ತಿನ ಸಂಕೇತ. ಈ ಮೂವರ ಆಶೀರ್ವಾದ ಸಿಕ್ಕರೆ ವ್ಯಕ್ತಿ ಎಲ್ಲಾ ರೀತಿಯಲ್ಲೂ ಪ್ರವರ್ಧ ಮಾನಕ್ಕೆ ಬರುತ್ತಾರೆ ಎಂದರು.
ಕಳೆದ ಬಾರಿ ಇದ್ದ ಸಚಿವರು, ಅಧಿಕಾರಿಗಳೇ ಈ ಬಾರಿಯೂ ಇದ್ದಾರೆ. ಅಂತೆಯೇ ವ್ಯವಸ್ಥೆ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಅಚ್ಚುಕಟ್ಟು ವ್ಯವಸ್ಥೆ ಮಾಡಿದೆ ಎಂದರು. ಇಂದು ಆಧುನೀಕತೆ ಬೆಳೆದಂತೆ ಅಂತರಂಗದ ಹೊಳವು ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಆಧ್ಯಾತ್ಮಿಕ ಆಚರಣೆ ಬೇಕು ಎಂದ ಸ್ವಾಮೀಜಿ, ಎಲ್ಲರಿಗೂ ಮಹಾನ್ ಶಕ್ತಿ ಕೊಟ್ಟು ತಾಯಿ ಹರಸಲಿ, ೧೦ ದಿನದ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲಿ ಎಂದು ಹರಸಿದರು.