ಚೀನಾದಲ್ಲಿ ಎಳೆ ಅಡಿಕೆಗೆ ಭಾರೀ ಡಿಮ್ಯಾಂಡ್!
– ಶುಂಠಿ ಕ್ಯಾಂಡಿಯಂತೆ ಸಿಹಿಯಾದ,ಸ್ವಲ್ಪ ಮಸಾಲೆಯುಕ್ತ ಅಡಿಕೆ ಬಳಕೆ
– ವಿದೇಶದಲ್ಲಿ ಜನಪ್ರಿಯತೆ ಹೆಚ್ಚಿಸುತ್ತಿರುವ ಅಡಿಕೆ ಕ್ಯಾಂಡಿ..!
– ಚೀನಾದಲ್ಲಿ ಔಷಧಿಯಾಗಿ ಅಡಿಕೆ ಬಳಕೆ!… ರೈತರಿಗೆ ಗುಡ್ ನ್ಯೂಸ್
NAMMUR EXPRESS NEWS
ಮಲೆನಾಡ ಬೆಳೆ ಅಡಿಕೆ ವಿಶ್ವದ ಹಲವು ಕಡೆ ಉಪಯೋಗ ಈಗಲೂ ಇದೆ. ಅದರಲ್ಲೂ ಚೀನಾದಲ್ಲಿ ಅಡಿಕೆಯಿಂದ ವಿವಿಧ ಬಗೆಯ ಉತ್ಪನ್ನ ತಯಾರಿಸುತ್ತಾರೆ. ಈಗ ಅಡಿಕೆ ಕ್ಯಾಂಡಿ ಜನಪ್ರಿಯವಾಗುತ್ತಿದೆ. ಚೀನಾದ ಅಡಿಕೆ ಮಾತ್ರವಲ್ಲ ವಿಯೆಟ್ನಾಂನಿಂದಲೂ ಹಸಿ ಅಡಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಕೆಲವು ಸಮಯಗಳಿಂದ ಚೀನಾದ ಅಡಿಕೆ ವ್ಯಾಪಾರಿಗಳು ವಿಯೆಟ್ನಾಂನಿಂದ ಸಾಕಷ್ಟು ಪ್ರಮಾಣದಲ್ಲಿ ಹಸಿ ಅಡಿಕೆಯನ್ನು ಖರೀದಿ ಮಾಡುತ್ತಿದ್ದರು. ಏಕೆ ಎಂಬುದರ ಬಗ್ಗೆ ಅರಿವು ಇರಲಿಲ್ಲ. ಅದರ ಹಿಂದೆಯೇ ಹೋದಾಗ ಚೀನಾದಲ್ಲಿ ಅಡಿಕೆ ಕ್ಯಾಂಡಿ ಜನಪ್ರಿಯವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಹಸಿ ಅಡಿಕೆ ದರವೂ ಅಲ್ಲಿ ಏರಿಕೆಯಾಗಿದೆ. ಚೀನಾದ ವ್ಯಾಪಾರಿಗಳು ಅಡಿಕೆ ಕ್ಯಾಂಡಿ ಮಾಡಲು ವಿಯೆಟ್ನಾಂನಿಂದ ಎಳೆಯ ವೀಳ್ಯದೆಲೆಗಳನ್ನು ಖರೀದಿಸುತ್ತಿದ್ದಾರೆ. ಎಳೆಯ ವೀಳ್ಯದೆಲೆಗಳನ್ನು ಕುದಿಸಿ, ನಂತರ ಒಣಗಿಸಿ ಚೀಲಗಳಲ್ಲಿ ಪ್ಯಾಕ್ ಮಾಡಿ ಚೀನೀ ಮಾರುಕಟ್ಟೆಗೆ ಕ್ಯಾಂಡಿ ಮಾಡಲು ರಫ್ತು ಮಾಡಲಾಗುತ್ತದೆ. ಈ ಕ್ಯಾಂಡಿ ಶುಂಠಿ ಕ್ಯಾಂಡಿಯಂತೆ ಸಿಹಿಯಾದ, ಸ್ವಲ್ಪ ಮಸಾಲೆಯುಕ್ತ ರುಚಿಯನ್ನು ಹೊಂದಿರುತ್ತದೆ. ಇದು ಗಂಟಲು ನೋವು ಶಮನಕಾರಿಯಾಗುತ್ತದೆ ಮತ್ತು ದೇಹವನ್ನು ಬೆಚ್ಚಗಾಗಿಸುತ್ತದೆ. ಆದ್ದರಿಂದ ಇದು ಚೀನಾದಲ್ಲಿ ಬಹಳ ಜನಪ್ರಿಯವಾಗಿದೆ.
ಈಚೆಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿಯೆಟ್ನಾಂನ ಅಡಿಕೆ ವ್ಯಾಪಾರಿ ಅನ್ಹಾ ಅವರು, ಹಸಿ ಅಡಿಕೆಯನ್ನು ಒಣಗಿಸಿ ಚೀನಾಕ್ಕೆ ರಪ್ತು ಮಾಡುವ ಬಗ್ಗೆ ಹೇಳಿದ್ದರು , ಈ ಅಡಿಕೆಯನ್ನು ಕ್ಯಾಂಡಿ ಉತ್ಪಾದನೆಗಾಗಿ ಬಳಕೆ ಮಾಡುತ್ತಾರೆ ಎಂದೂ ಹೇಳಿದ್ದರು. ಈ ವ್ಯಾಪಾರಿ ಪ್ರತಿದಿನ 12-15 ಟನ್ವರೆಗೂ ಎಳೆ ಅಡಿಕೆಯನ್ನು ಖರೀದಿಸಿ ಒಣಗಿಸುತ್ತಾರೆ. 5-6 ಕಿಲೋಗ್ರಾಂ ಹಸಿ ಅಡಿಕೆಗೆ 1 ಕೆಜಿಯಷ್ಟು ಒಣ ಅಡಿಕೆ ಲಭ್ಯವಾಗುತ್ತದೆ. ಇವರ ಸಂಸ್ಥೆಯು ದಿನಕ್ಕೆ ಸುಮಾರು 2 ಟನ್ಗಳಷ್ಟು ಒಣಗಿದ ಅಡಿಕೆಯನ್ನು ಉತ್ಪಾದಿಸುತ್ತದೆ. ಒಂದು ಬ್ಯಾಚ್ ಒಣಗಲು 5 ದಿನ ಬೇಕಾಗುತ್ತದೆ. ಚೀನಾದ ಬೇಡಿಕೆ ಸಾಕಷ್ಟಿದೆ, ಆದರೆ ನಮಗೆ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅಡಿಕೆ ಕ್ಯಾಂಡಿ ತಯಾರಿಕೆಗೆ ಸಣ್ಣ ಅಡಿಕೆಗಳು ಹೆಚ್ಚು ಉತ್ತಮವಾಗಿದೆ. ಅಂತಹ ಅಡಿಕೆ ಅಡಿಕೆಗೆ ಬೇಡಿಕೆಗಳೂ ಇವೆ. ಬೆಳೆದ ಅಡಿಕೆಯು ಕ್ಯಾಂಡಿ ತಯಾರಿಕೆಗೆ ಬೇಡಿಕೆ ಹಾಗೂ ಬೆಲೆಯೂ ಕಡಿಮೆಯಾಗಿರುತ್ತದೆ. ಒಂದು ಕ್ಯಾಂಡಿ ತಯಾರಿಕೆಗೆ ಅಂದರೆ 50 ಗ್ರಾಂನ ಕ್ಯಾಂಡಿಗೆ ಸುಮಾರು 10 ಒಣಗಿದ ಅಡಿಕೆ ಬೇಕಾಗಿದೆ. ಹಸಿ ಅಡಿಕೆಯಿಂದ ತಯಾರಿಸಿದ ಕ್ಯಾಂಡಿ ಉತ್ತಮ ಬೆಲೆಗೂ ಮಾರಾಟವಾಗುತ್ತದೆ. ಇದರಿಂದ ಯಾವುದೇ ಹಾನಿಯೂ ಇರುವುದಿಲ್ಲ ಎನ್ನುವುದು ಈಗ ಬಹಿರಂಗವಾಗುತ್ತಿದೆ. ಈ ಕಾರಣದಿಂದಲೇ ಚೀನಾದಲ್ಲಿ ಅಡಿಕೆ ಕ್ಯಾಂಡಿ ಜನಪ್ರಿಯವಾಗುತ್ತಿದೆ. ವಿಶೇಷವಾಗಿ ಶೀತಪ್ರದೇಶಗಳಲ್ಲಿ ಗಂಟಲು ನೋವು ನಿವಾರಣೆ ಹಾಗೂ ದೇಹವನ್ನು ಬೆಚ್ಚಗಿರಿಸಲು ಇದು ಸಹಕಾರಿಯಾಗಿದೆ.
ಅಡಿಕೆ ಕ್ಯಾಂಡಿಯು ಗಟ್ಟಿಯಾದ ಹೊರ ಕವಚವನ್ನು ಹೊಂದಿದ್ದು ಅದು ಅಗಿಯುತ್ತಲೇ ನಿಧಾನದಲ್ಲಿ ಮೆತ್ತಗಾಗುತ್ತದೆ. ದೀರ್ಘ ಕಾಲ ಬಾಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಲ್ಪ ಕಹಿಯಾದ ನಂತರದ ರುಚಿಯೊಂದಿಗೆ ಅದು ಸಿಹಿಯಾಗಿರುತ್ತದೆ. ಚೂಯಿಂಗ್ ಗಮ್ ನಂತಹ ತಾಜಾತನವನ್ನು ಹೊಂದಿದೆ. ಜಗಿಯಿದ ನಂತರ, ಇದು ಅಡಿಕೆ ಹುಡಿಯಂತೆಯೇ ಬಾಯಿಯೂ ಸ್ವಲ್ಪ ಕೆಂಪಾಗುತ್ತದೆ. ಗ್ರಾ ಹಕರು ಸಾಮಾನ್ಯವಾಗಿ ಈ ಕ್ಯಾಂಡಿಯನ್ನು ಚಹಾದ ನಂತರ ಸುವಾಸನೆಯ ಅನುಭವಕ್ಕಾಗಿ ಜಗಿಯುತ್ತಾರೆ. ಚೀನಾದಲ್ಲಿ ವಿವಿಧ ಖಾದ್ಯಗಳ ಜೊತೆಗೆ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ.
ಈಚೆಗೆ ಅಡಿಕೆ ಧಾರಣೆಯಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ಹಸಿ ಅಡಿಕೆ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಅಡಿಕೆ ಉತ್ಪಾದನೆಯೂ ಇಳಿಕೆಯಾಗುತ್ತಿದೆ. ವಾತಾವರಣದ ಕಾರಣದಿಂದ ಇಡೀ ಪ್ರಪಂಚದಲ್ಲಿಯೇ ಅಡಿಕೆ ಬೆಳೆಯುವ ಪ್ರದೇಶದ ಎಲ್ಲಾ ಕಡೆಯೂ ಹವಾಮಾನದ ಕಾರಣದಿಂದ ಇಳುವರಿಯಲ್ಲಿ ಕೊರತೆಯಾಗಿದೆ. ವಿಯೆಟ್ನಾಂ, ಚೀನಾದಲ್ಲೂ ಅದೇ ಸಮಸ್ಯೆ. ತೀವ್ರವಾದ ಚಂಡಮಾರುತಗಳು ಮತ್ತು ಪ್ರವಾಹಗಳು ಕೃಷಿ ಪ್ರದೇಶಗಳನ್ನು ಹಾನಿಗೊಳಿಸಿದವು, ಇದರಿಂದಾಗಿ ಕ್ಯಾಂಡಿ ಉತ್ಪಾದನೆಗೆ ಕಚ್ಚಾ ವಸ್ತುಗಳ ಕೊರತೆ ಉಂಟಾಗುತ್ತದೆ. ಈ ಕಾರಣದಿಂದ ಅಡಿಕೆ ಧಾರಣೆಯೂ ಅಲ್ಲಿ ಏರಿಕೆ ಕಂಡಿದೆ.
ಭಾರತದಲ್ಲೂ ಅಡಿಕೆ ಬೆಳೆ ವಿಸ್ತರಣೆಗೆ ಸಂಬಂಧಿಸಿ ಈಗಾಗಲೇ ಚರ್ಚೆ ನಡೆಯುತ್ತಿದೆ. ಚೀನಾ ಮಾದರಿಯಲ್ಲಿ ಭಾರತದಲ್ಲಿ ಅಡಿಕೆ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ತಯಾರಾಗುತ್ತಿಲ್ಲ. ಸದ್ಯ ಗುಟ್ಕಾ ಹಾಗೂ ಪಾನ್ಗಳಲ್ಲಿ ಮಾತ್ರವೇ ಭಾರತದಲ್ಲಿ ಅಡಿಕೆ ಬಳಕೆಯಾಗುತ್ತಿದೆ. ಉಳಿದ ಎಲ್ಲಾ ಉತ್ಪನ್ನಗಳಲ್ಲೂ ಅಡಿಕೆ ಸಣ್ಣ ಪ್ರಮಾಣದಲ್ಲಿ ಮಾತ್ರಾ ಬಳಕೆಯಾಗುತ್ತಿದೆ. ಹೀಗಾಗಿ ಭಾರತದಲ್ಲೂ ಅಡಿಕೆಯ ಪರ್ಯಾಯ ಉಪಯೋಗಗಳ ಬಗ್ಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕಿದೆ.