ರಾಜ್ಯದಲ್ಲಿ ಮಹಾಮಳೆಗೆ ಎಲ್ಲೆಡೆ ಘೋರ ದುರಂತ.!
– ಎಲ್ಲೆಡೆ ಸಾವು, ನೋವು, ಅವಾಂತರ: ಉಕ್ಕಿದ ನದಿಗಳು
– ಉಡುಪಿ: ಭಾರೀ ಮಳೆಗೆ ಕುಸಿದು ಬಿದ್ದ ಮನೆ!
– ಬಳ್ಳಾರಿ: ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್ ಟವರ್
– ಉಕ್ಕಿ ಹರಿದ ನದಿಗಳು: ಬೆಳ್ತಂಗಡಿ ಸಮೀಪ ಕುಸಿದ ಗುಡ್ಡ
– ಮೂಡಿಗೆರೆ : ಉಕ್ಕಿ ಹರಿದ ಶಿಶಿಲ ಕಪಿಲ ನದಿ!
NAMMUR EXPRESS NEWS
ರಾಜ್ಯದಲ್ಲಿ ಮಳೆ ಭಾರೀ ಅನಾಹುತ ಉಂಟು ಮಾಡಿದೆ. ಒಂದೇ ದಿನ ಮಳೆಗೆ 10ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಉಡುಪಿ: ಭಾರೀ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಉಡುಪಿಯ ಕಟ್ಟೆಗುಡ್ಡೆಯಲ್ಲಿ ಜು.18ರಂದು ನಡೆದಿದೆ. ಕಡೆಕಾರು ಪಂಚಾಯಿತಿಯ ಶಾರದ ಪೂಜಾರಿ ಎಂಬುವರಿಗೆ ಸೇರಿದ ಮನೆ. ಘಟನೆ ವೇಳೆ ಮನೆಯಲ್ಲಿ 10 ಮಂದಿ ವಾಸವಿದ್ದರು.
ಮನೆ ಸಂಪೂರ್ಣ ಕುಸಿದು ಬೀಳುವ ಕೇವಲ ಹತ್ತು ನಿಮಿಷಗಳ ಮೊದಲು ಕುಟುಂಬವು ಆವರಣವನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ. 30 ವರ್ಷಗಳಷ್ಟು ಹಳೆಯದಾದ ಈ ಮನೆಯು ಮಣ್ಣಿನ ಗೋಡೆಗಳಿಂದ ನಿರ್ಮಾಣವಾಗಿದ್ದು, ಮಳೆಗೆ ಕುಸಿತಗೊಂಡಿದೆ. ಭಾರೀ ಮಳೆಗೆ ಮಣ್ಣಿನ ಗೋಡೆಯ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ಕುಸಿದು ಬೀಳುವ ಮುನ್ನವೇ ನಾಲ್ವರು ಮಕ್ಕಳು ಕೊಠಡಿಯೊಳಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಟಿಕೆಗಳು, ಬಟ್ಟೆಗಳು ಮತ್ತು ಇತರ ದಾಖಲೆಗಳು ಮಣ್ಣಿನ ಅಡಿಯಲ್ಲಿ ಹೂತುಹೋಗಿವೆ. ಮನೆಯಲ್ಲಿ ವಾಸವಿದ್ದ ಕುಟುಂಬ ಇದೀಗ ಉಡುಪಿಯ ಕಡೆಕಾರ್ ನಲ್ಲಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದೆ.
ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್ ಟವರ್; ತಪ್ಪಿದ ಅನಾಹುತ!
ಬಳ್ಳಾರಿ: ಭಾರೀ ಗಾಳಿಗೆ ಬೃಹತ್ ಗಾತ್ರದ ಮೊಬೈಲ್ ಟವರ್ ರಸ್ತೆಗೆ ಅಡ್ಡಲಾಗಿ ನೆಲಕ್ಕೆ ಉರುಳಿ ಬಿದ್ದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಇಂದು (ಗುರುವಾರ) ಸಂಜೆ ಏಕಾಏಕಿ ಬೀಸಿದ ಭಾರಿ ಗಾಳಿಗೆ ಟವರ್ವೊಂದು ಅಂಗಡಿಗಳ ಮೇಲೆ ಬಿದ್ದಿದ್ದು, ಅಂಗಡಿ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಈ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ್ದರಿಂದ ಅವಘಡ ತಪ್ಪಿದೆ. ಟವರ್ ಕಂಬ ತೆರವು ಗೊಳಿಸಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಮಳೆಗಾಲ ಹಿನ್ನಲೆ ಆದಷ್ಟು ಜಾಗೃತವಾಗಿರುವುದು ಉಳಿತು.
ಉಕ್ಕಿ ಹರಿದ ನದಿಗಳು: ದಿಡುಪೆ ಮಲ್ಲ ಸಮೀಪ ಕುಸಿದ ಗುಡ್ಡ
ಬೆಳ್ತಂಗಡಿ: ದಿನವಿಡಿ ಗುರುವಾರ ಸುರಿದ ಮಳೆಗೆ ನೇತ್ರಾವತಿ, ಮೃತ್ಯುಂಜಯ, ಕಪಿಲ, ಸೋಮಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿದ ಪರಿಣಾಮ ಶಿಶಿಲ ದೇವಸ್ಥಾನ ಆವರಣಕ್ಕೆ ನೀರು ನುಗ್ಗಿದೆ. ದಿಡುಪೆ ಮಲ್ಲ ಸಮೀಪ ರಸ್ತೆಗೆ ಗುಡ್ಡ ಕುಸಿದು ಸಂಪರ್ಕ ಕಡಿತಗೊಂಡ ಘಟನೆ ನಡೆದಿದೆ. ಮಲವಂತಿಗೆ ಗ್ರಾಮದ ದಿಡುಪೆ ಸಮೀಪದ ಮಲ್ಲ-ಪರಂಬೇರು ರಸ್ತೆಗೆ ಗುಡ್ಡ ಕುಸಿದು ಬಿದ್ದ ಘಟನೆ ಗುರುವಾರ ನಡೆದಿದೆ. ಸುಮಾರು 20 ಮನೆಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಸ್ಥಳೀಯರು ಸೇರಿ ರಾತ್ರಿವರೆಗೂ ಶ್ರಮಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ದಿಡುಪೆ ಗಣೇಶ ನಗರದ ನಿವಾಸಿಗಳು ಮಳೆಗೆ ಭಯಭೀತರಾಗಿದ್ದಾರೆ. ತಾಲೂಕು ಆಡಳಿತದಿಂದ ಇಲ್ಲಿ ಗಂಜಿ ಕೇಂದ್ರ ತೆರೆದಿದ್ದರೂ ಅಪಾಯದಂಚಿನ ಮನೆಗಳ ಮಂದಿಯನ್ನು ಸ್ಥಳಾಂತರಿ ಸುವ ಕೆಲಸವಾಗಿಲ್ಲ. ಈ ಪ್ರದೇಶದ ಮನೆಮಂದಿಯನ್ನು ತಾಲೂಕು ಆಡಳಿತ ಇನ್ನೂ ಸಂಪರ್ಕಿಲ್ಲ ಎಂದು ಸ್ಥಳೀಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಉಕ್ಕಿ ಹರಿದ ಶಿಶಿಲ ಕಪಿಲ ನದಿ!
ಮೂಡಿಗೆರೆ: ಮೂಡಿಗೆರೆ ಬೈರಾಪುರ ಘಾಟಿ ಸುತ್ತಮುತ್ತ ಉತ್ತಮ ಮಳೆ ಸುರಿದ ಪರಿಣಾಮ ಕಪಿಲ ನದಿಯಲ್ಲಿ ಮಧ್ಯಾಹ್ನದ ಬಳಿಕ ನದಿ ಪ್ರವಾಹದ ರೂಪ ಪಡೆದಿದ್ದು, ಸಂಜೆ ವೇಳೆ ಉಕ್ಕಿ ಹರಿದ ಪರಿಣಾಮ ಇತಿಹಾಸ ಪ್ರಸಿದ್ಧ ಮತ್ಯತೀರ್ಥ ಖ್ಯಾತಿಯ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಅಂಗಳಕ್ಕೆ ನೀರು ನುಗ್ಗಿದೆ. ಪರಿಸರದಲ್ಲಿ ಅನೇಕ ಮನೆಗಳಿದ್ದು, ಅಲ್ಲಿನ ನಿವಾಸಿಗಳು ಆತಂಕಿತರಾಗಿದ್ದಾರೆ. ಎರಡು ವರ್ಷಗಳ ಬಳಿಕ ತಾಲೂಕಿನ ನದಿಗಳು ಈ ಮಟ್ಟಿದಲ್ಲಿ ಉಕ್ಕಿ ಹರಿದಿದೆ.
ಮಲೆನಾಡಲ್ಲಿ ಗುಡ್ಡ ಕುಸಿತ
ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆ ಸೇರಿ ಮಲೆನಾಡು ಭಾಗದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನ ರಭಸಕ್ಕೆ ಹಲವೆಡೆ ಸೇತುವೆಗಳು ಕುಸಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಸಕಲೇಶಪುರ ಬಳಿ ಹೆದ್ದಾರಿಯ ತಡೆಗೋಡೆ ಕುಸಿತ
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಬಳಿ ಹೆದ್ದಾರಿಯ ತಡೆಗೋಡೆ ಕುಸಿದಿದೆ. ಸುಮಾರು 500 ಮೀಟರ್ ಉದ್ದಕ್ಕೂ ರಸ್ತೆಗೆ ಹೊಂದಿಕೊಂಡಿದ್ದ ತಡೆ ಗೋಡೆ ಕುಸಿಯುತ್ತಿದೆ. ಮಳೆ ಹೆಚ್ಚಾದರೆ ಚತುಷ್ಪಥ ರಸ್ತೆಯ ಒಂದು ಭಾಗದ ಕಾಂಕ್ರಿಟ್ ರಸ್ತೆಯೇ ಕೊಚ್ಚಿ ಹೋಗೋ ಆತಂಕ ಇದೆ. ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿತ ಆರೋಪ ಕೇಳಿಬಂದಿದೆ. ನೆನ್ನೆ ಕೂಡ ತಾಲೂಕಿನ ಗುಲಗಳಲೆ ಬಳಿ ಕುಸಿದಿದ್ದ ರಾಷ್ಟ್ರೀಯ ಹೆದ್ದಾರಿ ಕುಸಿದಿತ್ತು.
ಶೃಂಗೇರಿಯಲ್ಲಿ ನಿಲ್ಲದ ತುಂಗಾ ನದಿ ಆರ್ಭಟ!
ಚಿಕ್ಕಮಗಳೂರು: ಜಿಲ್ಲೆಯ ಕೆರೆಕಟ್ಟೆ, ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಶೃಂಗೇರಿಯಲ್ಲಿ ತುಂಗಾ ನದಿ ಆರ್ಭಟಿಸುತ್ತಿದೆ. ನದಿ ಅಬ್ಬರಕ್ಕೆ ಭಾರತಿ ತೀರ್ಥ ರಸ್ತೆ ಜಲಾವೃತವಾಗಿದ್ದು, ಪಟ್ಟಣದ ಗಾಂಧಿ ಮೈದಾನವು ಸಂಪೂರ್ಣ ಮುಳುಗಡೆಯಾಗಿದೆ. ನದಿ ಪಾತ್ರದ ಅಂಗಡಿ ಮುಂಗಟ್ಟು, ಮನೆಗಳು ಜಲಾವೃತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ಭಾರಿ ಮಳೆಗೆ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿದಿದೆ. ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲೂ ಗುಡ್ಡ ಕುಸಿತಿದ್ದು, ಐದರಿಂದ ಆರು ಕಡೆ ಗುಡ್ಡದ ಮಣ್ಣು ಕುಸಿದಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ ಪ್ರವಾಸಿ ತಾಣಗಳಾಗಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರ ವಾಹನಗಳಿಗೆ ನಿಷೇಧ ವಿಧಿಸಲಾಗಿದೆ.
ಹೊನ್ನಾಳಿ, ಹರಿಹರದಲ್ಲಿ ನದಿ ಪಾತ್ರದ ಪ್ರದೇಶಗಳು ಮುಳುಗಡೆ!
ದಾವಣಗೆರೆ: ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದ ದಾವಣಗೆರೆ ಜಿಲ್ಲೆಯ ಸಮೀಪ ತುಂಗಭದ್ರಾ ನದಿ ಮೈತುಂಬಿ ಹರಿಯುತ್ತಿದೆ. ತುಂಗಾ ನದಿಯಿಂದ 75 ಸಾವಿರ ಕ್ಯುಸೆಕ್ಗೂ ಹೆಚ್ಚು ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಹೊನ್ನಾಳಿ, ಹರಿಹರ ಸೇರಿದಂತೆ ನದಿ ಪಾತ್ರದ ಪ್ರದೇಶಗಳು ಮುಳುಗಡೆಯಾಗಿವೆ.
ಮಡಿಕೇರಿ ಸಮೀಪ ಬಿರುಕು ಬಿಟ್ಟ ಗುಡ್ಡ!
ಕೊಡಗು: ಮಡಿಕೇರಿ ಸಮೀಪದ ಮದೆನಾಡು ಸಮೀಪ ರಾಷ್ಟ್ರೀಯ 275ರಲ್ಲಿ ಗುಡ್ಡ ಕುಸಿಯುವ ಆತಂಕ ಉಂಟಾಗಿದೆ. ರಸ್ತೆ ಬದಿ ಇರೋ ಗುಡ್ಡದಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಯಾವ ಕ್ಷಣದಲ್ಲಾದರೂ ಗುಡ್ಡ ಕುಸಿದು ಬೀಳುವ ಸಾಧ್ಯತೆ ಇದೆ. ಮಂಜು ಮುಸುಕಿದ ವಾತಾವರಣದಿಂದ ವಾಹನ ಸವಾರರಿಗೆ ದಾರಿ ಸರಿಯಾಗಿ ಕಾಣುತ್ತಿಲ್ಲ. ಬಿರುಕು ಬಿಟ್ಟ ಸ್ಥಳಕ್ಕೆ ಮತ್ತಷ್ಟು ನೀರು ನುಗ್ಗಿದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ.
ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆ!
ಮೈಸೂರು: ಕಬಿನಿ ಜಲಾಶಯದಿಂದ 36 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ. ಕಬಿನಿ ಡ್ಯಾಂನಿಂದ ಕಪಿಲಾ ನದಿಗೆ ನೀರು ಬಿಡುಗಡೆ ಮಾಡಿದ್ದರಿಂದ ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ. ಇನ್ನು ಮನೆಗಳಿಗೆ ನೀರು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ನದಿ ಪಕ್ಕದ ನಿವಾಸಿಗಳು ಮನೆ ಖಾಲಿ ಮಾಡುತ್ತಿದ್ದು, ಪ್ರವಾಹದ ಭೀತಿ ಎದುರಿದುತ್ತಿದ್ದಾರೆ.