ನಕ್ಸಲ್ ವಿಕ್ರಂ ಗೌಡ ಶೂಟ್ ಮಾಡಿದ್ದು ಹೇಗೆ?
– ರಾಜ್ಯದಲ್ಲಿ 20 ವರ್ಷದ ಬಳಿಕ ಮತ್ತೊಂದು ಎನ್ಕೌಂಟರ್
– ಶರಣಾಗಲು ಹೇಳಿದ್ದೆವು ಆದ್ರೆ ಆಗಲಿಲ್ಲ ಎಂದ ಸಿಎಂ
NAMMUR EXPRESS NEWS
ಉಡುಪಿ/ಬೆಂಗಳೂರು: ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಎಎನ್ಎಫ್ ಪೊಲೀಸರರಿಗೆ ಕೇರಳ ಮತ್ತು ಕರ್ನಾಟಕ ಸರ್ಕಾರ 30 ಲಕ್ಷ ಬಹುಮಾನ ಘೋಷಣೆ ಮಾಡಿದೆ.
ನ.18 ರಂದು ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಬಳಿ ಎನ್ಕೌಂಟರ್ ಮಾಡಿ ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಇನ್ನು ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ವಿಕ್ರಂ ಗೌಡ ಸಿಕ್ಕಿ ಬಿದ್ದಿದ್ದು ಹೇಗೆ?
ನ.18ರ ಸಂಜೆ 6.30ರ ವೇಳೆಗೆ ಕಬ್ಬಿನಾಲೆಯ ಪಿತ್ತಬೈಲ್ನಲ್ಲಿರುವ ಮನೆಗೆ ವಿಕ್ರಂ ಹಾಗೂ ತಂಡ ಬಂದಿತ್ತು. ಪಿತ್ತಬೈಲ್ನಲ್ಲಿ ಮೂರು ಕುಟುಂಬಗಳು ವಾಸವಾಗಿವೆ. ಈ ಪೈಕಿ ಸುಧಾಕರ್ ಗೌಡ ಎಂಬುವವರ ಮನೆಗೆ ವಿಕ್ರಂ ಗೌಡ ಹಾಗೂ ತಂಡ ಬಂದಿತ್ತು. ದಿನಸಿ ಸಾಮಗ್ರಿ ಪಡೆಯುವುದಕ್ಕೆಂದು ಅವರು ಬಂದಿದ್ದರು. ಮೂರು ದಿನಗಳ ಹಿಂದೆಯೇ ಮನೆ ಖಾಲಿ ಮಾಡಿಸಿದ್ದ ಎಎನ್ಎಫ್
ಸುಧಾಕರ್ ಗೌಡ ಮನೆಗೆ ವಿಕ್ರಂ ಗೌಡ ಬರಬಹುದು ಎಂಬ ಸುಳಿವಿದ್ದ ಎಎನ್ಎಫ್ ಸಿಬ್ಬಂದಿ ಮೂರು ದಿನಗಳ ಹಿಂದೆಯೇ ಸುಧಾಕರ್ ಕುಟುಂಬವನ್ನು ಅಲ್ಲಿಂದ ಖಾಲಿ ಮಾಡಿಸಿದ್ದರು. ಬಳಿಕ ಎಎನ್ಎಫ್ ಸಿಬ್ಬಂದಿಯೇ ಮನೆಯಲ್ಲಿ ತಂಗಿದ್ದರು. ಆದರೆ, ಮನೆಯೊಳಗೆ ಎಎನ್ಎಫ್ ಪಡೆ ಇರುವುದರ ಸಣ್ಣ ಸುಳಿವು ಕೂಡ ಇಲ್ಲದ ವಿಕ್ರಂ ಗೌಡ ಮನೆಯೊಳಗೆ ಹೊಕ್ಕಿದ್ದಾನೆ. ತಕ್ಷಣವೇ ಎಎನ್ಎಫ್ ಸಿಬ್ಬಂದಿ ಎದುರಾಗಿದ್ದಾರೆ. ಕೂಡಲೇ ವಿಕ್ರಂ ಗೌಡ ತಪ್ಪಿಸಿಕೊಂಡು ಓಡಿಹೋಗಲು ಅಂಗಳಕ್ಕೆ ಓಡಿ ಬಂದಿದ್ದ. ಆದರೆ ಅಂಗಳದಲ್ಲೇ ವಿಕ್ರಂ ಗೌಡನನ್ನು ಎಎನ್ಎಫ್ ಸಿಬ್ಬಂದಿ ಸುತ್ತುವರೆದಿದ್ದರು. ವಿಕ್ರಂ ಗೌಡನನ್ನು ಸುತ್ತುವರೆದ ಎಎನ್ಎಫ್ ಸಿಬ್ಬಂದಿ, ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಆತ, ‘ಪ್ರಾಣ ಕೊಟ್ಟರೂ ಶರಣಾಗಲ್ಲ’ ಎಂದಿದ್ದಲ್ಲದೆ, ತನ್ನ ನಾಡಬಂದೂಕಿನಿಂದ ದಾಳಿನಡೆಸಲು ಮುಂದಾಗಿದ್ದಾನೆ. ಈ ವೇಳೆ, ಮನೆಯ ಸುತ್ತಲೂ ಕವರ್ ಅಪ್ ಆಗಿದ್ದ ಎಎನ್ಎಫ್ ಸಿಬ್ಬಂದಿ ಪ್ರತಿ ದಾಳಿ ನಡೆಸಿದ್ದಾರೆ. ಮೂರೂ ಕಡೆಯಿಂದ ವಿಕ್ರಂ ಗೌಡನಿಗೆ ಗುಂಡು ಹೊಡೆದಿದ್ದಾರೆ. ಹೀಗಾಗಿ ಮನೆಯ ಅಂಗಳದಲ್ಲೇ ಆತ ಅಸುನೀಗಿದ್ದಾನೆ.
ಎಎನ್ಎಫ್ ಸಿಬ್ಬಂದಿಯ ಎಕೆ 47ನಿಂದ ಹೊರಬಿದ್ದ ಆ ಮೂರು ಗುಂಡುಗಳು ಆತನ ಬಲಿಪಡೆದವು. ಎರಡು ಗುಂಡುಗಳು ಪಕ್ಕೆಲುಬು, ಒಂದು ಗುಂಡು ತೊಡೆಗೆ ತಗುಲಿತ್ತು.
ತನ್ನ ಊರಿನ ಬಳಿಯೇ ಪ್ರಾಣ ಬಿಟ್ಟ!
ಪಿತಬೈಲ್ ಪಕ್ಕದ ಗ್ರಾಮದಲ್ಲಿಯೇ ವಾಸವಾಗಿದ್ದ ವಿಕ್ರಂ ಗೌಡ
ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್ಕೌಂಟರ್ ನಡೆದ ಪಕ್ಕದ ಗ್ರಾಮದಲ್ಲಿಯೇ ವಾಸವಾಗಿದ್ದ. ಪಿತಬೈಲ್ನ ಪಕ್ಕದ ಗ್ರಾಮ ಕೂಡ್ಲೂವಿನ ನಾಡ್ಪಾಲಿನಲ್ಲಿ ವಾಸವಾಗಿದ್ದ. 20 ವರ್ಷದ ಹಿಂದೆ ಕೂಡ್ಲುವಿನ ಮನೆಯಲ್ಲಿ ಮನೆಯವರ ಜೊತೆ ವಾಸವಾಗಿದ್ದ. ಕಳೆದ 7 ವರ್ಷಗಳ ಹಿಂದೆ ಆತನ ಸಹೋದರಿ ಸುಗುಣ ಮನೆ ಕಟ್ಟಲು ತಯಾರಿ ನಡೆಸುತ್ತಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದ ಅರ್ಧದಲ್ಲಿಯೇ ಮನೆಯ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ, ವಿಕ್ರಂ ಗೌಡ ಮಾತ್ರ 20 ವರ್ಷಗಳಿಂದ ಮನೆ ಕಡೆ ಮುಖ ಮಾಡಿರಲಿಲ್ಲ.
ಸಿಎಂ ಹೇಳಿದ್ದೇನು?
ಬೆಂಗಳೂರು: ವಿಕ್ರಂಗೌಡ ಹಲವು ನಕ್ಸಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದು, ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸಲು ಆತನನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ನಕ್ಸಲ್ ಚಟುವಟಿಕೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ ವಿಕ್ರಂ ಗೌಡ ಅವರು ಎನ್ ಕೌಂಟರ್ ನಲ್ಲಿ ಹತನಾಗಿರುವ ಬಗ್ಗೆ ಪ್ರಗತಿಪರ ಚಿಂತಕರು ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಕ್ರಂಗೌಡ ಅವರಿಗೆ ಶರಣಾಗುವಂತೆ ಆದೇಶ ನೀಡಲಾಗಿತ್ತು. ಆದರೆ ಅವರು ಶರಣಾಗಿರಲಿಲ್ಲ. ವಿಕ್ರಂಗೌಡ ಅವರನ್ನು ಹಿಡಿದವರಿಗೆ ಕೇರಳ ಸರ್ಕಾರ 25 ಲಕ್ಷ ಹಾಗೂ ಕರ್ನಾಟಕ ಸರ್ಕಾರ 5 ಲಕ್ಷ ಬಹುಮಾನವನ್ನು ಘೋಷಿಸಿತ್ತು ಎಂದು ವಿವರಿಸಿದರು.