ಪುನೀತ್ ಹೃದಯ ಜ್ಯೋತಿ ಯೋಜನೆ ಜಾರಿ
– ತೀವ್ರ ಹೃದಯಾಘಾತ ತಡೆಯಲು ಉಚಿತ ಇಂಜೆಕ್ಷನ್!
– ಶೀಘ್ರ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆ ಅನುಷ್ಠಾನ
NAMMUR EXPRESS NEWS
ಧಾರವಾಡ : ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರವು ಡಾ.ಪುನೀತ್ ರಾಜಕುಮಾರ ನೆನಪಿಗಾಗಿ ಹೃದಯಜ್ಯೋತಿ ಯೋಜನೆ ಅನುಷ್ಠಾನಗೊಳಿಸುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಇಲ್ಲಿಯ ಸತ್ತೂರಿನ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರೋಗ್ಯ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಈ ಯೋಜನೆಗೆ ಚಾಲನೆ ನೀಡಿದ ಅವರು, ಅನೇಕ ಸಂದರ್ಭಗಳಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ತುರ್ತಾಗಿ ಸರಿಯಾದ ಚಿಕಿತ್ಸೆ ಲಭಿಸದೆ ಸಾವು ಸಂಭವಿಸುತ್ತವೆ. ಇದನ್ನು ತಡೆಗಟ್ಟಲು ತಾಲೂಕು ಆಸ್ಪತ್ರೆಗಳಿಗೂ ಹೃದಯ ಸಂಬಂಧಿ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಹೃದಯ ಜ್ಯೋತಿ ಯೋಜನೆ ಜಾರಿಗೊಳಿಸಿದೆ ಎಂದರು.
ಈ ಯೋಜನೆಯನ್ನು ಮೊದಲ ಹಂತದಲ್ಲಿ ರಾಜ್ಯದ 71 ತಾಲೂಕು ಆಸ್ಪತ್ರೆ ಮತ್ತು 15 ಜಿಲ್ಲಾ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಿದ್ದು, ಬರುವ ವರ್ಷ ರಾಜ್ಯದ ಎಲ್ಲ ತಾಲೂಕು ಆಸತ್ರೆಗಳಿಗೆ ಯೋಜನೆ ವಿಸ್ತರಿಸಲಾಗುತ್ತದೆ. ವಿವಿಧ ಜಿಲ್ಲಾಸ್ಪತ್ರೆಗಳ 65 ಹೃದಯತಜ್ಞ ವೈದ್ಯರು ಈ ಸೇವೆ ಅನುಷ್ಠಾನದಲ್ಲಿ ಆನ್ಲೈನ್ ಸಂಪರ್ಕದಲ್ಲಿದ್ದು ರೋಗಿಯ ಆರೋಗ್ಯ ಮತ್ತು ಜೀವ ರಕ್ಷಣೆಗೆ ತಮ್ಮ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಯಾವುದೇ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದರೆ ತಕ್ಷಣ ಈ 30 ಸಾವಿರ ಮೊತ್ತದ ಇಂಜೆಕ್ಷನ್ ಉಚಿತವಾಗಿ ನೀಡಲಾಗುತ್ತದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅತೀ ಜನನಿಬಿಡ ಪ್ರದೇಶಗಳಲ್ಲಿನ ಜನರಿಗೆ ಹೃದಯ ಸಂಬಂಧಿ ಕಾಯಿಲೆ ಕಂಡುಬಂದಾಗ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲು ಸರ್ಕಾರ ಕ್ರಮವಹಿಸಲಿದೆ ಎಂದು ಹೇಳಿದರು.
ಹೃದಯ ಜ್ಯೋತಿ ಯೋಜನೆಯ ತರಬೇತಿ ಪುಸ್ತಕ ಬಿಡುಗಡೆ ಮಾಡಿದೆ ಕಾರ್ಮಿಕ ಸಚಿವ ಸಂತೋಷ ಲಾಡ್. ಇದೊಂದು ರಾಷ್ಟ್ರ ಮಾದರಿ ಯೋಜನೆ. ಅಸಹಾಯಕರ, ಬಡವರ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.