ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ!
– ಬೋರ್ಡ್ ನಲ್ಲಿ ಕನ್ನಡ ಭಾಷೆ ಇಲ್ಲದಿದ್ದಲ್ಲಿ ದೂರು!
– ಕನ್ನಡ ಕಣ್ಗಾವಲು ಎಂಬ ಆ್ಯಪ್ ತಯಾರಿಕೆ!
– ಶಿವರಾಜ ತಂಗಡಗಿ ಮಾಹಿತಿ!
NAMMUR EXPRESS NEWS
ಬೆಂಗಳೂರು: ಕನ್ನಡ ಭಾಷೆಯ ಬಳಕೆಗಾಗಿ, ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡ ಕಡ್ಡಾಯ ಹೋರಾಟಗಳು ನಡೆಯುತ್ತಿದ್ದು ಇದೀಗ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿದೆ. ಒಂದು ವೇಳೆ ಸರ್ಕಾರಿ ಕಚೇರಿ ಸೇರಿದಂತೆ ಅಂಗಡಿ ಮುಂಗಟ್ಟಗಳ ಫಲಕದಲ್ಲಿ ಕನ್ನಡ ಬಳಕೆ ಇಲ್ಲವಾದದ್ದು ಕಂಡು ಬಂದರೆ ಜನರು ದೂರು ನೀಡಬಹುದಾಗಿದೆ. ಇಂದು ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024ವನ್ನು ಅಂಗೀಕರಿಸಲಾಯಿತು. ಕನ್ನಡ ಭಾಷೆಯ ಬಳಕೆ ಕುರಿತು ಯಾವುದೇ ವ್ಯಕ್ತಿ ದೂರು ನೀಡಲು ‘ಕನ್ನಡ ಕಣ್ಗಾವಲು’ ಎಂಬ ಆಪ್ ಅನ್ನು ರೂಪಿಸಲಾಗುತ್ತಿದೆ. ಇಲ್ಲಿಗೆ ಬರುವ ದೂರುಗಳನ್ನು ಸಂಬಂಧಪಟ್ಟ ಸಮಿತಿಗಳಿಗೆ ಕಳುಹಿಸಲಾಗುವುದು.
ಆ ದೂರುಗಳ ಬಗ್ಗೆ ಶೀಘ್ರವೇ ಕ್ರಮವಹಿಸುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಕರ್ನಾಟಕ ವಿಧಾನ ಸಭೆಯು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024 ವನ್ನು ಇಂದು ಅಂಗೀಕರಿಸಿತು. ಅದರಂತೆ ಇನ್ನು ಮುಂದೆ ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎಂಬ ನಿಯಮ ಕಡ್ಡಾಯವಾಗಿದೆ. ಈ ವಿಧೇಯಕದ ಸೂಚನೆಯಂತೆ, ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಬಾಗದಲ್ಲಿ ಶೇ.60 ರಷ್ಟು ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದೆ. ಶೇ.40 ರಷ್ಟು ಇತರ ಭಾಷೆಯನ್ನು ಕೆಳಭಾಗದಲ್ಲಿ ಬಳಸಬಹುದಾಗಿದೆ.