ಕನ್ನಡದ ಮೇರು ಸಾಹಿತಿ ತೇಜಸ್ವಿ ನೆನಪು!
– ಏ.5, 2007ರಂದು ಮರೆಯಾದ ಸಾಹಿತ್ಯ ಲೋಕದ ನಕ್ಷತ್ರ
– ಲಕ್ಷ ಲಕ್ಷ ಅಭಿಮಾನಿಗಳ ನುಡಿ ನಮನ
NAMMUR EXPRESS NEWS
ಕನ್ನಡ ಸಾಹಿತ್ಯ ಲೋಕ ಕಂಡ ಅಪ್ರತಿಮ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ. ಕುವೆಂಪು ಅವರ ಪುತ್ರರಾದ ತೇಜಸ್ವಿ ಕನ್ನಡದ ಮೇರು ಲೇಖಕ. ಅವರು ಏ.5ರ 2007ರಂದು ನಿಧನರಾಗಿದ್ದು ಅವರ ಸಾಹಿತ್ಯ ಸೇವೆ ಎಂದಿಗೂ ಜೀವಂತವಾಗಿದೆ.
ಸೆ.8, 1938ರಲ್ಲಿ ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿ ಜನಿಸಿದ ತೇಜಸ್ವಿ ಏ.5, 2007ರಂದು ಮೂಡಿಗೆರೆಯಲ್ಲಿ ನಿಧನರಾದರು. ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.
ತಂದೆ ಪುಟ್ಟಪ್ಪ ಮತ್ತು ತಾಯಿ ಹೇಮಾವತಿ. ಕುಪ್ಪಳಿಯಲ್ಲಿ ತೇಜಸ್ವಿ ಸ್ಮಾರಕವನ್ನು ಅವರ ನೆನಪಿಗಾಗಿ ನಿರ್ಮಿಸಲಾಗಿದೆ.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.
ಬಹುಮುಖ ಪ್ರತಿಭೆ ತೇಜಸ್ವಿ
ತೇಜಸ್ವಿ ಅವರ ಮೊದಲ ಕಥೆ ಲಿಂಗ ಬಂದ. ಈ ಕಥೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೋತ್ತರ ಪದವಿಯ ನಂತರ ಓರಗೆ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ,ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕೃಷಿ ಜತೆಗೆ ಸಾಹಿತ್ಯ, ಕುಟುಂಬ
ಪತ್ನಿ ರಾಜೇಶ್ವರಿ. ಇವರು ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ ‘ನಿರುತ್ತರ’ದಲ್ಲಿ ವಾಸಿಸುತ್ತಿದ್ದರು, ಈಗ ಮರಣಿಸಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು.
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ ‘ನಿರುತ್ತರ’ದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅಸಂಖ್ಯಾತ ಸಾಹಿತ್ಯ ಅಭಿಮಾನಿಗಳನ್ನು ಅವರು ಹೊಂದಿದ್ದು ಕನ್ನಡದ ಸಾಹಿತ್ಯದ ಮರೆಯಲಾಗದ ನಕ್ಷತ್ರ ತೇಜಸ್ವಿ.
ಸಾಹಿತ್ಯದ ಎಲ್ಲಾ ಕ್ಷೇತ್ರದಲ್ಲೂ ಸೇವೆ
ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. “ಕರ್ವಾಲೋ” ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ. ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.
ತೇಜಸ್ವಿ ಅವರ ನಮ್ಮನ್ನು ಅಗಲಿದರೂ ಅವರ ಸಾಹಿತ್ಯ ಸೇವೆ ಅಮರ
ತೇಜಸ್ವಿ ಅವರಿಗೆ ಗೌರವ ಪೂರ್ವಕ ನಮನಗಳು