ಕರ್ನಾಟಕ ಮೂರು ಸುದ್ದಿಗಳು
ದರ್ಶನ್ & ಗ್ಯಾಂಗ್ 14 ದಿನಗಳ ಜೈಲು ಅಂತ್ಯ!: ಮುಂದೇನು?
– ಅಶ್ಲೀಲ ಚಿತ್ರ ವೀಕ್ಷಣ ಅಪರಾಧವಲ್ಲ!: ಕೋರ್ಟ್
– ಮಾಜಿ ಸಚಿವ ನಾಗೇಂದ್ರ ಕಸ್ಟಡಿ ಅಂತ್ಯ, ಇಂದು ಕೋರ್ಟ್ಗೆ ಹಾಜರು
NAMMUR EXPRESS NEWS
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಹಾಗೂ ಅವರ ಸಹಚರರ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಪೂರ್ಣಗೊಳ್ಳಲಿದೆ. ಆದರೆ ಈ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗುವ ಸಾಧ್ಯತೆ ಇದೆ. ಯಾಕೆಂದರೆ, ದರ್ಶನ್ಹಾಗೂ ಇತರ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಪಟ್ಟಿಯನ್ನ ಪೊಲೀಸರು ಸಿದ್ಧ ಪಡಿಸಿದ್ದಾರೆ. ನ್ಯಾಯಾಲಯಕ್ಕೆ ರಿಮಾಂಡ್ ಅರ್ಜಿಯನ್ನು ಸಲ್ಲಿಸಲಿದ್ದಾರೆ.
ನಟ ದರ್ಶನ್ ಹಾಗೂ ಇತರರು ಜೂನ್ 11ರಂದು ಬಂಧನಕ್ಕೆ ಒಳಗಾದರು. ಬಂಧನದ ಬಳಿಕ ಒಂದೊಂದೇ ಸತ್ಯ ಹೊರ ಬರುತ್ತಿದೆ. ಇನ್ನೂ ಚಾರ್ಜ್ಶೀಟ್ ಸಲ್ಲಿಕೆ ಮಾಡಿಲ್ಲ. ಇದೇ ಕಾರಣ ಇಟ್ಟುಕೊಂಡು ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೆ ಕೋರಲು ನಿರ್ಧರಿಸಲಾಗಿದೆ. ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕರೆ ಹೊರ ಬಂದು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಪೊಲೀಸರು ಕೋರ್ಟ್ ಎದುರು ಆತಂಕ ಹೊರಹಾಕಲಿದ್ದಾರೆ. ವಿದೇಶಕ್ಕೆ ತೆರಳುವ ಭಯವೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನೂ ಇವತ್ತು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ರನ್ನ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. 24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಮತ್ತೊಂದು ಕಡೆ ಜೈಲು ಊಟಕ್ಕೆ ಬೇಸತ್ತು, ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ದರ್ಶನ್ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಕೂಡ ಇಂದೇ ನಡೆಯಲಿದೆ. ದರ್ಶನ್ ಬಂಧನವಾಗಿ 36 ದಿನಗಳಾಗಿವೆ. ಆದರೆ ಇಲ್ಲಿಯವರೆಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಆಗಲಿ ಎಂದು ದರ್ಶನ್ ಪರ ವಕೀಲರು ಕಾಯುತ್ತಿದ್ದಾರೆ.
– ನಾಗೇಂದ್ರ ಕಸ್ಟಡಿ ಅಂತ್ಯ, ಇಂದು ಕೋರ್ಟ್ಗೆ ಹಾಜರು
ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ ಕಸ್ಟಡಿ ಬುಧವಾರ ಅಂತ್ಯವಾಗುತ್ತಿದ್ದು, ಅವರನ್ನು ಮತ್ತೆ ಕೋರ್ಟ್ ಮುಂದೆ ಇಡಿ ಹಾಜರ್ ಪಡಿಸಲಿದೆ. ತನಿಖೆ ಇನ್ನಷ್ಟು ನಡೆಯಬೇಕಿರುವುದರಿಂದ ಮತ್ತೆ ಕಸ್ಟಡಿಗೆ ಕೇಳಲಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಂದು ಮಧ್ಯಾಹ್ನ 2 ಗಂಟೆಗೆ ನಾಗೇಂದ್ರ ಅವರನ್ನು ಇಡಿ ಹಾಜರು ಪಡಿಸಲಿದೆ. ಮತ್ತೆ ಮೂರರಿಂದ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ನಾಗೇಂದ್ರರವರ ಇಬ್ಬರು ಪಿಎಗಳು, ನಾಗೇಂದ್ರರ ಪತ್ನಿ ಎಲ್ಲರ ಹೇಳಿಕೆಯನ್ನು ಪಡೆದಿರುವ ಇಡಿ, ಇನ್ನಷ್ಟು ವಿಚಾರಗಳನ್ನು ಹೊರತೆಗೆಯುವ ಅಗತ್ಯದಲ್ಲಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ. ಅಕೌಂಟ್ಸ್ ವ್ಯವಹಾರ, ಹಣ ಎಲ್ಲೆಲ್ಲಿ ವ್ಯವಹಾರವಾಗಿದೆ, ಇನ್ನೂ ಯಾರು ಯಾರು ಇದ್ದಾರೆ ಹೀಗೆ ಅನೇಕ ಮಾಹಿತಿಗಳು ಇಡಿಗೆ ಬೇಕಾಗಿವೆ.ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ತೆಗೆದುಕೊಂಡು ಇಡಿ ವಿಚಾರಣೆ ಮಾಡಿತ್ತು. ಅಧಿಕಾರಿಗಳು 7ರಿಂದ 8 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ಮಾಡಿದ್ದರು. ಸಾಕಷ್ಟು ವಿಚಾರಗಳನ್ನು ಹೊರ ತೆಗೆದಿದ್ದಾರೆ. ಪತಿ ಪತ್ನಿಯನ್ನು ಮುಖಾಮುಖಿ ಕೂರಿಸಿ ಪ್ರಶ್ನೆ ಮಾಡಲಾಗಿದೆ. ಮಂಜುಳಾ ಅವರ ಹೆಸರಲ್ಲಿ ಹಣದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಅಶ್ಲೀಲ ಚಿತ್ರ ವೀಕ್ಷಣ ಅಪರಾಧವಲ್ಲ!: ಕೋರ್ಟ್
ಬೆಂಗಳೂರು: ಆನ್ಲೈನ್ ಅಲ್ಲಿ ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ದೃಶ್ಯ ವೀಕ್ಷಿಸಿದ ವ್ಯಕ್ತಿಯ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧ ಹೊರಿಸಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ.ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಅಪರಾಧವಲ್ಲ, ಅಪ್ ಲೋಡ್, ಪ್ರಸರಣ ಮಾಡುವುದು ಅಪರಾಧವೆಂದು ಹೇಳಿ ಪ್ರಕರಣ ರದ್ದುಪಡಿಸಲಾಗಿದೆ.
ವೆಬೈಟ್ನಲ್ಲಿ ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋ ವೀಕ್ಷಿಸಿದ ಆರೋಪದ ಮೇಲೆ ತನ್ನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ದಾಖಲಿಸಿದ ಎಫ್ಐಆರ್ ರದ್ದು ಮಾಡುವಂತೆ ಕೋರಿ ಬೆಂಗಳೂರು ಹೊಸಕೋಟೆಯ ಎನ್. ಇನಾಯತ್ ಉಲ್ಲಾ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ ಈ ಆದೇಶ ನೀಡಿದ್ದು, ಎಫ್ಐಆರ್ ರದ್ದು ಮಾಡಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67(ಬಿ) ಪ್ರಕಾರ ವಿದ್ಯುನ್ಮಾನ ರೂಪದಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ಪ್ರಸಾರ, ಪ್ರಕಟಣೆ, ರವಾನಿಸುವುದು ಅಪರಾಧವಾಗಿದೆ. ಆದರೆ ಈ ಪ್ರಕರಣದಲ್ಲಿ ಅರ್ಜಿದಾರರು ಅಶ್ಲೀಲ ದೃಶ್ಯ ನೋಡಿದ್ದಾರೆ. ಹಾಗಾಗಿ ಅದು ಆರೋಪಿಸಲಾದ ಐಟಿ ಕಾಯ್ದೆ ಸೆಕ್ಷನ್ 67(ಬಿ) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಅರ್ಜಿದಾರರು ಅಶ್ಲೀಲ ದೃಶ್ಯ ನೋಡುವ ಚಟಕ್ಕೆ ದಾಸರಾಗಿರಬಹುದು. ಅದನ್ನು ಬಿಟ್ಟರೆ ಅವರ ವಿರುದ್ಧ ಬೇರೆ ಆರೋಪಗಳಿಲ್ಲ. ಆದ್ದರಿಂದ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣ ಮುಂದುವರಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ.