ಕರ್ನಾಟಕ ಟಾಪ್ 3 ನ್ಯೂಸ್…!
ದೇವಸ್ಥಾನದಲ್ಲಿ ಕಾಲು ಜಾರಿಬಿದ್ದು ಪಕ್ಕೆಲುಬಿಗೆ ಪೆಟ್ಟು!
– ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲು
ವಾಲ್ಮೀಕಿ ನಿಗಮ ಹಗರಣ..!
– ಮಾಜಿ ಸಚಿವ ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ
ಅನ್ನದಾತನಿಗೆ ಅವಮಾನ..!
– ಜಿಟಿ ಮಾಲ್ ಮುಂದೆ ಪಂಚೆ ಉಟ್ಟು ಪ್ರತಿಭಟನೆ
NAMMUR EXPRESS NEWS
ಹಾಸನ: ದೇವಸ್ಥಾನಕ್ಕೆ ತೆರಳಿದ್ದಂತ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಪಕ್ಕೆಲುಬಿಗೆ ಪೆಟ್ಟಾಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಸನದ ಹೊಳೆನರಸೀಪುರದಲ್ಲಿ ದೇವಸ್ಥಾನಕ್ಕೆ ತೆರಳಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಾಲು ಜಾರಿ ಬಿದ್ದಿದ್ದಾರೆ. ಇದರಿಂದಾಗಿ ಹೆಚ್.ಡಿ ರೇವಣ್ಣ ಅವರ ಪಕ್ಕೆಲುಬಿಗೆ ಪೆಟ್ಟಾಗಿರೋದು ಪರೀಕ್ಷೆಯಿಂದ ತಿಳಿದು ಬಂದಿದೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಇದೀಗ ಹೊಳೆನರಸೀಪುರದಲ್ಲಿನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಷಾಡ ಏಕಾದಶಿ ಪ್ರಯುಕ್ತ ಅವರು ಉಪವಾಸವಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ:
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರ ಸದ್ಯ ಇಡಿ ಅಧಿಕಾರಿಗಳ ವಶದಲ್ಲಿದ್ದಾರೆ. ಇದೀಗ ಅವರ ಪತ್ನಿ ಮಂಜುಳಾ ಅವರನ್ನೂ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಿಂದ ವಶಕ್ಕೆ ಪಡೆದ ಅಧಿಕಾರಿಗಳು ಅವರನ್ನು ಇಡಿ ಕಚೇರಿ ಕರೆ ತಂದಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮಂಜುಳಾ ಅವರಿಂದ ಮಾಹಿತಿ ಕಲೆ ಹಾಕಲಿದ್ದಾರೆ. ಮಂಜುಳಾ ಅವರ ಹೆಸರಲ್ಲಿ ಹಣದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವ್ಯವಹಾರ ನಡೆದ ಸಮಯದಲ್ಲಿ ಮಂಜುಳಾ ಅವರ ಬ್ಯಾಂಕ್ ಖಾತೆಗಳಿಗೂ ಹಣ ಬಂದಿರುವ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಇದರ ಮೂಲವನ್ನು ಪ್ರಶ್ನಿಸಲಿದ್ದಾರೆ.
ಜುಲೈ 13ರಂದು ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಯಲಹಂಕದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು 5 ದಿನಗಳ ಕಾಲ ಕಸ್ಟಡಿಗೆ ನೀಡಿದ್ದರು. 18ನೇ ತಾರೀಖಿನಂದು ಬೆಳಿಗ್ಗೆ 11ಕ್ಕೆ ಮತ್ತೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದರು.
ಏನಿದು ಪ್ರಕರಣ?: ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಎಂಬಾತ ಮೇ 26ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದ 187 ಕೋಟಿ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ, ಇದರಲ್ಲಿ 88 ಕೋಟಿ ಹಣ ದುರುಪಯೋಗವಾಗಿದೆ ಎಂದು ಅವರು ಡೆತ್ನೋಟ್ನಲ್ಲಿ ಬರೆದಿದ್ದರು. ಹೀಗಾಗಿ ನಿಗಮದ ಎಂಡಿ ಮತ್ತು ಲೆಕ್ಕಾಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ನಂತರ ಅಧಿಕಾರಿಗಳ ಬಂಧನವಾಗಿತ್ತು. ಚಂದ್ರಶೇಖರ್ ಬರೆದಿರುವ ಡೆತ್ ನೋಟ್ನಲ್ಲಿ ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಹಾಗೂ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತಾ ಅವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದರು. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ವಾಲ್ಮೀಕಿ ನಿಗಮಕ್ಕೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ. ಆರ್. ರಾಜ್ ಕುಮಾರ್ ಅವರನ್ನು ನೇಮಿಸಿತ್ತು.
ಪ್ರಕರಣದಲ್ಲಿ ಸರ್ಕಾರದ ಪೂರ್ವ ಅನುಮತಿ ಪಡೆದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಡಿ & ಸಿಇಒ ಹಾಗೂ ಎಲ್ಲಾ ನಿರ್ದೇಶಕರು ಸೇರಿ 6 ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. ಇನ್ನು 88 ಕೋಟಿ ದುರುಪಯೋಗ ಹಣವನ್ನು ಈಗಾಗಲೇ ಮುಖ್ಯ ಖಾತೆಗೆ ಅಧಿಕಾರಿಗಳು ವಾಪಸ್ ಪಡೆದಿದ್ದರು. ಬಳಿಕ ಹಗರಣದಲ್ಲಿ ಸಚಿವ ನಾಗೇಂದ್ರ ಹೆಸರು ಕೇಳಿ ಬಂದ ಹಿನ್ನೆಲೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ರಾಜಭವನ ಚಲೋ ನಡೆಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಕೇಸ್ಗೆ ಸಂಬಂಧಿಸಿ ಮತ್ತೊಬ್ಬನನ್ನು ಎಸ್ಐಟಿ ಬಂಧಿಸಿದೆ. ಆಂಧ್ರ ಮೂಲದ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಈತ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.
ಅನ್ನದಾತನಿಗೆ ಅವಮಾನ: ಜಿಟಿ ಮಾಲ್ ಮುಂದೆ ಪಂಚೆ ಉಟ್ಟು ಪ್ರತಿಭಟನೆ, ಕ್ಷಮೆ ಕೇಳಿದ ಮಾಲೀಕ!
ಬೆಂಗಳೂರು: ಹಾವೇರಿ ಮೂಲದ ರೈತರನ್ನು ಪಂಚೆ ಉಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಮಾಲ್ ಒಳಗೆ ಬಿಡದೆ ಅವಮಾನ ಮಾಡಿದ ಜಿಟಿ ವರ್ಲ್ಡ್ ಮಾಲ್ ಮುಂದೆ ಇಂದು ರೈತ ಸಂಘಟನೆಗಳ ಹಾಗೂ ಕನ್ನಡ ಸಂಘಟನೆಗಳ ಸದಸ್ಯರು ಪಂಚೆ ಉಟ್ಟು ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕರ ಮುಂದೆ ಮಾಲ್ ಮಾಲಿಕರು ಕ್ಷಮೆ ಯಾಚಿಸಿದರು. ಮಾಲ್ ಆಡಳಿತದ ವರ್ತನೆಯ ಬಗ್ಗೆ ಸ್ಪಷ್ಟನೆ ಕೇಳಿ ನೋಟೀಸ್ ನೀಡಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ
ಘಟನೆಯನ್ನು ವಿರೋಧಿಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು ರೈತರ ಗೆಟಪ್ನಲ್ಲಿ ಬೆಳಗ್ಗೆ ಮಾಲ್ ಮುಂದೆ ಜಮಾಯಿಸಿದರು. ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಆಯಂಡ್ ಟೀಂ ಪಂಚೆ ಧರಿಸಿ ಮಾಲ್ ಮುಂದೆ ಸೇರಿದ್ದು, ಪ್ರತಿಭಟನೆಗೆ ಮುಂದಾದರು. ಇಂದು ಪ್ರತಿಭಟನೆ ಹಿನ್ನೆಲೆಯಲ್ಲಿ ಮಾಲ್ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕೈಮುಗಿದು ಒಳಗೆ ಬಿಟ್ಟ ಸೆಕ್ಯುರಿಟಿ: ನಿನ್ನೆ ಪಂಚೆ ಉಟ್ಟ ರೈತರನ್ನು ಒಳಗೆ ಬಿಡದ ಜಿಟಿ ಮಾಲ್ ಸೆಕ್ಯುರಿಟಿ ಸಿಬ್ಬಂದಿ ಇಂದು ಮೆತ್ತಗಾಗಿದ್ದಾರೆ. ನಿನ್ನೆಯ ಅವಾಂತರದ ನಂತರ ಎಚ್ಚೆತ್ತುಕೊಂಡ ಮಾಲ್ ಸಿಬ್ಬಂದಿ ಇಂದು ಪಂಚೆ ಉಟ್ಟವರನ್ನು ಒಳಗೆ ಬಿಡುತ್ತಿರುವುದಷ್ಟೇ ಅಲ್ಲ, ಪಂಚೆ ಉಟ್ಟವರಿಗೆ ಕೈಮುಗಿದು ಬರಮಾಡಿಕೊಳ್ಳುತ್ತಿದ್ದಾರೆ! ಇಂದು ಪ್ರತಿಭಟನೆಯ ಸಂದರ್ಭದಲ್ಲಿ ಲುಂಗಿ ಉಟ್ಟ ವೃದ್ಧರೊಬ್ಬರು ಒಳಗೆ ಹೋಗಿದ್ದು, ಸಿಬ್ಬಂದಿ ಅವರಿಗೆ ಕೈಮುಗಿದು ಸೆಕ್ಯುರಿಟಿ ಚೆಕ್ ಕೂಡ ಮಾಡದೆ ಒಳಬಿಟ್ಟಿದ್ದಾರೆ.