ಕರ್ನಾಟಕ ಟಾಪ್ 5 ನ್ಯೂಸ್..!
– ಬೈಕ್ ಸವಾರಿ: ಅಪ್ರಾಪ್ತ ಬಾಲಕನ ತಂದೆಗೆ ದಂಡ..!
– ಬಾಗಲಕೋಟೆ : ಶವವನ್ನು ವಿದ್ಯುತ್ ಕಂಬಕ್ಕೆ ಕಟ್ಟಿದ ಗ್ರಾಮಸ್ಥರು!
– ಚಿತ್ರದುರ್ಗ: ದುಶ್ಯಾಸನ ದಾಂಧಲೆ, ಪತಿ ಸಾವು.!
– ಸಮುದ್ರಪಾಲಾಗುತ್ತಿದ್ದ ಮೂವರ ರಕ್ಷಣೆ, ಮಹಿಳೆ ಸಾವು
– ಒಂದೇ ಗ್ರಾಮದಲ್ಲಿ ನಾಲ್ವರ ಸಾವು ; ಸ್ಥಳೀಯರಲ್ಲಿ ಆತಂಕ
NAMMUR EXPRESS NEWS
ಶಿರಸಿ: ಅಪ್ರಾಪ್ತ ಬಾಲಕನಿಗೆ ಬೈಕ್ ಸವಾರಿ ಮಾಡಲು ಅವಕಾಶ ನೀಡಿದ ಅಪ್ಪನಿಗೆ 25,000 ದಂಡ ವಿಧಿಸಿ ನಗರದ ಸಿವಿಲ್ ಹಿರಿಯ ನ್ಯಾಯಾಧೀಶೆ ಶಾರದಾದೇವಿ ಮಹತ್ವ ತೀರ್ಪು ನೀಡಿ ಆದೇಶಿಸಿದ್ದಾರೆ. ಅಪ್ರಾಪ್ತ ಬಾಲಕ ತಂದೆ ಶಿವಮೊಗ್ಗ ಜಿಲ್ಲೆ ಸೊರಬದ ಕೇಶವ ನಿಂಗಪ್ಪ ರಾಡಗೇರ್ ಎಂಬುವವರಿಗೆ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಕಳೆದ ಮೇ 20ರಂದು ನಗರ ಐದು ರಸ್ತೆ ವೃತ್ತದಲ್ಲಿ ನಗರ ಠಾಣೆ ಪಿಎಸ್ಐ ನಾಗಪ್ಪ ಹಾಗೂ ಸಿಬ್ಬಂದಿ ವಾಹನ ತಪಾಸಣೆ ಕಾರ್ಯ ಕೈಗೊಂಡಿದ್ದ ಸಂದರ್ಭ ಅಪ್ರಾಪ್ತ ಬಾಲಕ ನೊಂದಣಿ ಯಾಗದೆ ಇರುವ ಬೈಕನ್ನು ಸವಾರಿ ಮಾಡಿಕೊಂಡು ಬಂದಿದ್ದರು. ಬಾಲಕನಿಗೆ ಬೈಕ್ ಸವಾರಿ ಅವಕಾಶಕೊಟ್ಟ ಕೇಶವ ನಿಂಗಪ್ಪ ರಾಡಗೇರ್ ವಿರುದ್ಧ ಇಲ್ಲಿಯ ಸಿವಿಲ್ ನ್ಯಾಯಾಲಯದಲ್ಲಿ ಪೊಲೀಸರು ದೋಷರೋಪ ಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದ್ದು ಅಪ್ರಾಪ್ತ ಬಾಲಕನ ತಂದೆಗೆ ದಂಡ ಹಾಕಿದೆ.
ಶವವನ್ನೇ ಕಂಬಕ್ಕೆ ಕಟ್ಟಿದ್ದರು..!
ಬಾಗಲಕೋಟೆ: ಶವವನ್ನು ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಕಟ್ಟಿ ಮನೆಯವರ ಮನವೊಲಿಸಿ ನಂತರ ಅಂತ್ಯಸಂಸ್ಕಾರ ಮಾಡಿದ ಘಟನೆ ಬನಹಟ್ಟಿ ನಗರದಲ್ಲಿ ಮಂಗಳವಾರ ನಡೆದಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬನಹಟ್ಟಿ ಪಟ್ಟಣದ ಗುರು ಕಿತ್ತೂರ (51) ರಸ್ತೆ ಬದಿಯಲ್ಲಿ ಮೃತಪಟ್ಟರು. ಓಣಿಯ ಜನ ಮನೆಗೆ ಶವವನ್ನು ತಂದಾಗ, ಗುರು ಸಂಬಂಧಿಕರು ಶವವನ್ನು ಮನೆಯೊಳಗೆ ತರಲು ವಿರೋಧ ವ್ಯಕ್ತಪಡಿಸಿದರು. ಆಗ ಜನರು ಶವವನ್ನು ವಿದ್ಯುತ್ ಕಂಬಕ್ಕೆ ಕಟ್ಟಿದರು. ಇದನ್ನು ಗಮನಿಸಿದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಹಿರಿಯರು ಕುಟುಂಬಸ್ಥರ ಮನವೊಲಿಸಿ ಕೆಲ ಹೊತ್ತಿನ ನಂತರ ಶವವನ್ನು ಮನೆಯೊಳಗೆ ತಂದು ಕೂರಿಸಿದರು. ನಂತರ ಅಂತ್ಯ ಸಂಸ್ಕಾರ ನಡೆಯಿತು. ಗುರು ಎರಡು ತಿಂಗಳಿಂದ ಹೆಂಡತಿಯ ಮನೆಯಲ್ಲಿದ್ದರೂ ಅವರಿಗೆ ಪುತ್ರ ಇದ್ದಾನೆ.
ಚಿತ್ರದುರ್ಗ: ದುಶ್ಯಾಸನ ದಾಂಧಲೆ, ಪತಿ ಸಾವು.!
ಚಿತ್ರದುರ್ಗ: ಪತ್ನಿಯ ಸೀರೆ ಹಿಡಿದು ಎಳೆಯಲು ಹೋದ ಕಿಡಿಗೇಡಿಯನ್ನು ತಡೆಯಲು ಹೋದ ಆಕೆಯ ಪತಿ ಮತ್ತು ಪುತ್ರನ ಮೇಲೆ ಕಿಡಿಗೇಡಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಮಹಿಳೆ ಪತಿ ಮೃತಪಟ್ಟ ಘಟನೆ ತಾಲೂಕಿನ ಗೋಪನಹಳ್ಳಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಮಹಿಳೆ ಒಬ್ಬರೇ ಇದ್ದ ಸಂದರ್ಭದಲ್ಲಿ ಅದೇ ಗ್ರಾಮದ ಶಶಿ ಎಂಬಾತ ಮನೆಗೆ ಏಕಾಏಕಿ ನುಗ್ಗಿ ಅವರ ಸೀರೆ ಎಳೆದಾಡಿದ. ಇದೇ ಸಮಯಕ್ಕೆ ಮಹಿಳೆಯ ಪತಿ ಮತ್ತು ಪುತ್ರ ಮನೆಗೆ ಬಂದರು. ತಾಯಿ ರಕ್ಷಣೆಗೆ ಮುಂದಾದ ಮಗನ ಮೇಲೆ ಶಶಿ ಬೆಂಬಲಿಗರಾದ ರಾಜ, ಅಶೋಕ, ಅಂಜಿನಪ್ಪ ಹಲ್ಲೆ ಮಾಡಿದರು. ಈ ಗಲಾಟೆಯಲ್ಲಿ ಮಹಿಳೆ ಪತಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮುದ್ರಪಾಲಾಗುತ್ತಿದ್ದ ಮೂವರ ರಕ್ಷಣೆ, ಮಹಿಳೆ ಸಾವು!
ಉಳ್ಳಾಲ: ಇಲ್ಲಿಗೆ ಸಮೀಪದ ಮೊಗವೀರಪಟ್ಣ ಬಳಿಯ ಕಡಲ ಕಿನಾರೆಗೆ ವಿಹಾರಕ್ಕೆ ಬಂದಿದ್ದ ನಾಲ್ವರು ಪ್ರವಾಸಿಗರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ಅವರಲ್ಲಿ ನಾಲ್ವರನ್ನು ಸ್ಥಳೀಯರು ಮತ್ತು ವಿಹಾರಕ್ಕೆ ಬಂದಿದ್ದ ಪ್ರವಾಸಿಗರು ರಕ್ಷಿಸಿದ್ದಾರೆ. ಸಮುದ್ರದಲ್ಲಿ ನೀರಿನಲ್ಲಿ ಮುಳುಗಿದ್ದ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ತೆಲಂಗಾಣದ ಕೊಂಡಾಪುರದ ಸೆರಿಲಿಂಗಪಲ್ಲಿ ನಿವಾಸಿ ಪಿ.ಎಲ್.ಪ್ರಸನ್ನ ಅವರ ಪತ್ನಿ ಪರಿಮೀ ರತ್ನ ಕುಮಾರಿ (57) ಎಂದು ಗುರುತಿಸಲಾಗಿದೆ. ನೀರುಪಾಲಾದ ಇತರ ಮೂವರು ಪ್ರಥಮ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಸಂಬಂಧಿಕರು ಮಂಗಳವಾರ ತೆಲಂಗಾಣಕ್ಕೆ ಕೊಂಡೊಯ್ದರು.
ಒಂದೇ ಗ್ರಾಮದಲ್ಲಿ ನಾಲ್ವರ ಸರಣಿ ಸಾವು ; ಸ್ಥಳೀಯರಲ್ಲಿ ಆತಂಕ
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ವೀರಪ್ಪಲ್ಲಿ ಗ್ರಾಮದಲ್ಲಿ ಒಂದೇ ವಯಸ್ಸಿನ ನಾಲ್ವರು ಮೃತಪಟ್ಟಿರುವ ಘಟನೆ ಸ್ಥಳೀಯರ ಆತಂತಕ್ಕೆ ಕಾರಣವಾಗಿದೆ. ಮೃತಪಟ್ಟವರೆಲ್ಲರೂ 70 ವರ್ಷ ದಾಟಿದವರಾಗಿದ್ದಾರೆ. ಹೀಗಾಗಿ ವಯೋವೃದ್ಧರಿಗೆ ಆತಂಕ ಹೆಚ್ಚಾಗಿದೆ. ಆದರೆ, ಸಾಂಕ್ರಾಮಿಕ ರೋಗದಿಂದ ಅವರ ಮೃತಪಟ್ಟಿರಬಹುದು ಎಂದು ಆರೋಗ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಆರೋಗ್ಯ ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟು ಹಿರಿಯ ವಯಸ್ಸಿನವರ ಬಗ್ಗೆ ಕಾಳಜಿ ವಹಿಸಿದ್ದಾರೆ.
ಗಂಗಮ್ಮ,(70), ಮುನಿನಾರಾಯಣಮ್ಮ(74), ಲಕ್ಷ್ಮಮ್ಮ (70), ನರಸಿಂಹಪ್ಪ (75) ಮೃತಪಟ್ಟವರು. ಎಲ್ಲರೂ ವಾಂತಿ, ಭೇದಿಯಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಆದರೆ, ಎಲ್ಲರೂ ಒಂದೇ ವಯಸ್ಸಿನವರು ಮೃತಪಡುತ್ತಿರುವುದು ಸ್ಥಳೀಯರ ಪಾಲಿಗೆ ವಿಶೇಷ ಎನಿಸಿದೆ. ಒಂದೇ ವಯಸ್ಸಿನವರು ಅನಾರೋಗ್ಯಕ್ಕೆ ಒಳಗಾಗುಗುವುದು ಯಾಕೆ. ಏನಾದರೂ ಸಮಸ್ಯೆ ಇದೆಯೇ ಎಂಬುದಾಗಿ ಅವರೆಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
ಮೃತಪಟ್ಟವರೆಲ್ಲರೂ ಕಲುಷಿತ ನೀರು ಸೇವನೆ ಮಾಡಿ ಅಸ್ವಸ್ಥಗೊಂಡಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ಹೇಳುತ್ತಿದ್ದಾರೆ. ಗ್ರಾಮದ ಹಲವರಲ್ಲಿ ಅದೇ ಲಕ್ಷಣ ಕಂಡು ಬಂದಿದೆ. ಆದರೆ ಅವರೆಲ್ಲರೂ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ, ಹೆಚ್ಚು ವಯಸ್ಸಿನವರು ಬದುಕುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ. ಆದರೆ ವೈದ್ಯರ ಮಾತನ್ನು ತಕ್ಷಣಕ್ಕೆ ಗ್ರಾಮಸ್ಥರು ನಂಬುತ್ತಿಲ್ಲ.
ಅರಿವು ಮೂಡಿಸಿದ ವೈದ್ಯರು : ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೂ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಸ್ಥಳಕ್ಕೆ ಡಿಎಚ್ಒ ,ಇಒ ,ಟಿಎಚ್ ಒ, ಡಿ ಎಸ್ ಒ , ಡಿಎಂಒ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅವರೆಲ್ಲರೂ ಹೆದರಿದ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ್ಯ ತುಂಬುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಗ್ರಾಮದ ಸರ್ಕಾರಿ ಶಾಲೆಯಲ್ಲೇ ಬೀಡು ಬಿಟ್ಟಿರುವ ವೈದ್ಯಕೀಯ ಸಿಬ್ಬಂದಿ ಪ್ರಕರಣಗಳ ಬಗ್ಗೆ ಗಮನ ಹರಿಸಿದ್ದಾರೆ.