ಕರ್ನಾಟಕ ಟಾಪ್ ನ್ಯೂಸ್
ರಾಜ್ಯದಲ್ಲಿ ಹೆಚ್ಚಾಯ್ತು ಕಿರಿಕ್ ಸ್ಟೋರಿ!
– ಚಿಕ್ಕಪ್ಪನಿಂದಲೇ ಅಣ್ಣನ ಮಗನ ಶೂಟ್ ಔಟ್ ಮಾಡಿ ಕೊಲೆ
– ಬೆಂಗಳೂರಿನ ಕೋರ್ಟ್ ಆವರಣದಲ್ಲೇ ಹರಿದ ನೆತ್ತರು!
– ಧಾರವಾಡದಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ!
– ರಾಮನಗರ: ಅತ್ಯಾಚಾರವೆಸಗಿ 4 ವರ್ಷದ ಬಾಲಕಿ ಕೊಂದ ದುಷ್ಟ!
– ಬೆಂಗಳೂರು: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆ!
– ಚಿತ್ರದುರ್ಗ: ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕ ಸಾವು!
– ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಮಾಸ್ಟರ್ ಪ್ಲಾನ್
NAMMUR EXPRESS NEWS
ಚಿಕ್ಕಬಳ್ಳಾಪುರ: ಬೆಳ್ಳಂಬೆಳಿಗ್ಗೆಯೇ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಪ್ಪನೇ ತನ್ನ ಅಣ್ಣನ ಮಗನನ್ನು ಪಿಸ್ತೂಲ್ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ನಜೀರ್ ಅಹ್ಮದ್ (46) ಕೊಲೆಯಾದ ದುರ್ದೈವಿ. ಕೊಲೆ ಮಾಡಿದವನನ್ನು ಬಶೀರ್ ಅಹ್ಮದ್ (66) ಎಂದು ಗುರುತಿಸಲಾಗಿದೆ.
ಆರೋಪಿ ಬಶೀರ್ ಅಹ್ಮದ್ ತನ್ನ ಅಣ್ಣ ಮಾಬೂಸಾಬಿ ಮೇಲೆಯೂ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಮಾಬೂಸಾಬಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೌದಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಶೀರ್ ಅಹ್ಮದ್ ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ಸದ್ಯ ಪೊಲೀಸರು ಬಶೀರ್ ಅಹ್ಮದ್ನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲಿಸುತ್ತಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಬೆಂಗಳೂರಿನ ಕೋರ್ಟ್ ಆವರಣದಲ್ಲೇ ಹರಿದ ನೆತ್ತರು
ಬೆಂಗಳೂರು: ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ವಕೀಲೆಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ಮಂಗಳವಾರ ನಡೆದಿದೆ. ವಿಮಲ ಎಂಬುವವರ ಪರಿಸ್ಥಿತಿ ಚಿಂತಾಜನಕವಾಗಿದೆ. ಜಯರಾಮರೆಡ್ಡಿ ಎಂಬಾತನಿಂದ ಈ ಕೃತ್ಯ ನಡೆದಿದೆ. ವಕೀಲೆಯಾಗಿರುವ ವಿಮಲ ಜತೆ ಆತ್ಮೀಯವಾಗಿದ್ದ ಜಯರಾಮ ಹಂತ ಹಂತವಾಗಿ ಸುಮಾರು ಒಂದೂವರೆ ಕೋಟಿ ರೂ.ಗಿಂತಲೂ ಹೆಚ್ಚು ಹಣ ನೀಡಿದ್ದ. ಆದರೆ ಆನಂತರ ಇವರಿಬ್ಬರಿಗೂ ಮನಸ್ತಾಪ ಎದುರಾಗಿತ್ತು. ಹೆಜ್ಜಾಲ ಬಳಿ ಇರುವ ಪ್ರಾಪರ್ಟಿ ವಿಚಾರವಾಗಿ ಇಬ್ಬರು ಕಿರಿಕ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಮಲಾ ದೌರ್ಜನ್ಯದ ಜತೆಗೆ ಪ್ರಾಪರ್ಟಿ ವಿಚಾರವಾಗಿಯೂ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಇಬ್ಬರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಏಕಾಏಕಿ ಕೋರ್ಟ್ ಹಾಲ್ನ ಒಂದನೇ ಎಸಿಎಂಎಂ ಬಳಿ ಚಾಕುವಿನಿಂದ ಇರಿದಿದ್ದಾನೆ. ವಿಮಲಾ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಲಸೂರುಗೇಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಧಾರವಾಡದಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ!
ಧಾರವಾಡ: ಧಾರವಾಡದ ಹುಬ್ಬಳ್ಳಿ ರಸ್ತೆಯ ಗೋವನಕೊಪ್ಪ ಕ್ರಾಸ್ ಬಳಿ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ ಮಾಡಲಾಗಿದೆ. ಹರೀಶ್ ಶಿಂಧೆ (30)ಹತ್ಯೆಗೀಡಾದವನು. ಹರೀಶ್ಗೆ ಚಾಕುವಿನಿಂದ ಇರಿದು ಬಳಿಕ ಕಲ್ಲಿನಿಂದ ಜಜ್ಜಿ ಹತ್ಯೆ ನಡೆಸಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಸದ್ಯ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ!
ರಾಮನಗರ: ರಾಮನಗರದಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ಐಸ್ ಕ್ರೀಮ್ ಕೊಡಿಸುವ ನೆಪದಲ್ಲಿ 4 ವರ್ಷದ ಬಾಲಕಿಯನ್ನು ಕರೆದೊಯ್ದು ಕಾಮುಕನೊಬ್ಬ ಅತ್ಯಾಚಾರವೇಸಗಿ ಬಳಿಕ ಕೊಂದು ಹಾಕಿದ್ದಾನೆ. ರಾಮನಗರದ ಮಾಗಡಿ ಪಟ್ಟಣದಲ್ಲಿ ಈ ಹೇಯ ಕೃತ್ಯ ನಡೆದಿದೆ. ಬೆಂಗಳೂರಿನ ಗೌರಿಪಾಳ್ಯದ ನಿವಾಸಿ ಇಮ್ರಾನ್ ಖಾನ್ ಎಂಬಾತನಿಂದ ಈ ಕೃತ್ಯ ನಡೆದಿದೆ.
ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆ!
ಬೆಂಗಳೂರು: ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ರಕ್ತದ ಕೋಡಿಯೇ ಹರಿದಿದ್ದು ನಗರವೇ ಬೆಚ್ಚಿ ಬಿದ್ದಿದೆ. ಲೇಡಿಸ್ ಪಿಜಿಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೋರಮಂಗಲದಲ್ಲಿರುವ ಲೇಡಿಸ್ ಪಿಜಿಯಲ್ಲಿ ಈ ಬರ್ಬರ ಘಟನೆ ನಡೆದಿದ್ದು, ಮೃತ ಯುವತಿಯನ್ನು ಕೃತಿ ಕುಮಾರಿ (24) ಎಂದು ಗುರುತಿಸಲಾಗಿದೆ.
ರಾತ್ರಿ 11.10ರಿಂದ 11.30ರ ಸುಮಾರಿಗೆ ಈ ಹತ್ಯೆ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೋರಮಂಗಲದ ವಿಆರ್ ಲೇಔಟ್ನ ಪಿಜಿಯಲ್ಲಿ ವಾಸವಾಗಿದ್ದರು.ಘಟನೆ ಹಿನ್ನೆಲೆ: ರಾತ್ರಿ ಸುಮಾರು 11.10ಕ್ಕೆ ಯುವಕನೋರ್ವ ಚಾಕು ಇಟ್ಟುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೃತಿ ಕುಮಾರಿ ಅವರ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಕೃತಿ ಕುಮಾರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಳಿಕ ಯುವಕ ಪರಾರಿಯಾಗಿದ್ದಾನೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದೆ ಪಿಜಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಆಗ್ನೆಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯುವಕನ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕ ಸಾವು.!
ಚಿತ್ರದುರ್ಗ: ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕನೋರ್ವ ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಕೂರು ತಾಲೂಕಿನ ಹನುಮಾಪುರ ಗ್ರಾಮದ ಓಬಳಸ್ವಾಮಿ ಎಂಬವರ ಪುತ್ರ ರಾಮಚಂದ್ರ (12) ಮೃತ ಬಾಲಕ.ಗ್ರಾಮದ ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳ ಕಂಡು ಜೀವ ಉಳಿಸಲು ಕಂಬ ಏರಿದ್ದ ಬಾಲಕ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಪಾರಿವಾಳದ ಜೀವ ಉಳಿಸಿ ಕಂಬದ ಮೇಲೆಯೇ ಜೀವ ಕಳೆದುಕೊಂಡ ಬಾಲಕನನ್ನು ನೋಡಿ ಪೋಷಕರು ನೋವು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ರಾಂಪುರ ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಮಾಸ್ಟರ್ ಪ್ಲಾನ್
ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ನಕಲಿ ವೈದ್ಯರೆಂದು ಕಂಡುಬಂದರೆ ₹25 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ವಿಧಾನ ಮಂಡಲ ಕಲಾಪದಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಕನಿಷ್ಠ 3 ವರ್ಷ ಜೈಲು ಶಿಕ್ಷೆಯಾಗುವಂತೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿದೆ.
ನಕಲಿ ವೈದ್ಯರ ಹಾವಳಿ ತಡೆಗೆ ಅಲೋಪತಿ ಆಸ್ಪತ್ರೆಗಳು ನೀಲಿ ಬಣ್ಣ ಮತ್ತು ಆಯುರ್ವೇದಿಕ್ ಆಸ್ಪತ್ರೆಗಳು ಹಸಿರು ಬಣ್ಣದ ಬೋರ್ಡ್ ಹಾಕುವುದು ಕಡ್ಡಾಯಗೊಳಿಸಲಾಗಿದೆ. ನಕಲಿ ವೈದ್ಯರೆಂದು ಕಂಡುಬಂದರೆ ₹25 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.