ಕರ್ನಾಟಕ ಟಾಪ್ ನ್ಯೂಸ್
– ತುಮಕೂರು: ಚಿರತೆ ಹಿಡಿದು ಯುವಕನ ಸಾಹಸ, ಶಾಕ್ ಆದ ಅರಣ್ಯ ಇಲಾಖೆ!
– ಬೆಂಗಳೂರು: ಕಾಣೆಯಾದ ಬೀದಿ ನಾಯಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಎಫ್ಐಆರ್!
– ಹೊಸನಗರ: 60 ಅಡಿ ಆಳದ ಪ್ರಪಾತಕ್ಕೆ ಉರುಳಿದ ಬಸ್: ಹಲವರಿಗೆ ಗಾಯ!
– ತುಮಕೂರು: ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು!
NAMMUR EXPRESS NEWS
ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಯುವಕನೋರ್ವ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಘಟನೆ ನಡೆದಿದೆ.
ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಜ. 7ರಂದು ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಸಕಲ ಸಲಕರಣೆಗಳೊಂದಿಗೆ ಬಂದಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗಲಿಲ್ಲ. ಈ ವೇಳೆ ಗ್ರಾಮದ ಆನಂದ್ ಎಂಬವರು ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ್ದಾರೆ. 5 ವರ್ಷದ ಚಿರತೆಯನ್ನು ಯುವಕ ಸೆರೆಹಿಡಿದಿದ್ದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಆನಂದ್ ಸಾಹಸಕ್ಕೆ ಇಡೀ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
– ಬೆಂಗಳೂರು: ಕಾಣೆಯಾದ ಬೀದಿ ನಾಯಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಎಫ್ಐಆರ್!
ಬೆಂಗಳೂರು: ಕಾಣೆಯಾದ ಬೀದಿ ನಾಯಿಗಾಗಿ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ವರದಿಯಗಿದೆ. ಕಲ್ಯಾಣ ನಗರದ ಹೆಚ್ಆರ್ಬಿಆರ್ ಲೇಔಟ್ ನಿವಾಸಿ ಡಾ. ಪುನೀತಾ ರಂಗಸ್ವಾಮಿಯವರು ಬೀದಿ ನಾಯಿ ಕಾಣೆಯಾಗಿದೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಬೀದಿ ನಾಯಿಗೆ ಹಿಂಸೆ ನೀಡಿ, ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ಪುನೀತಾ ತಮ್ಮದೇ ಲೇಔಟ್ನ ಅನಿಲ್ ಎಂಬವರು ವಿರುದ್ಧ ಆರೋಪ ಮಾಡಿದ್ದಾರೆ.
ನಾಯಿ ಎಲ್ಲಿ ಹೋಯ್ತು ಅಂತ ತಿಳಿಯಲು ಅನಿಲ್ ಅವರ ಬಳಿ ಪುನೀತಾ ಅವರು ಡಿಸೆಂಬರ್ 14ರ ರಾತ್ರಿ 11 ಗಂಟೆಯಿಂದ 15ರ ಮಧ್ಯಾಹ್ನ 12 ಗಂಟೆವರೆಗಿನ ಸಿಸಿಟಿವಿ ದೃಶ್ಯಾವಳಿ ಕೇಳಿದ್ದಾರೆ. ಆದರೆ, ಅನಿಲ್ ಸಿಸಿಟಿವಿ ದೃಶ್ಯ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ, ಅನಿಲ್ ಮೇಲೆ ಅನುಮಾನವಿದೆ. ಅವರೇ ನಾಯಿಗೆ ಹಿಂಸಿಸಿ ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ದೂರಿನಲ್ಲಿ ದಾಖಲಿಸಿದ್ದಾರೆ.
– ಹೊಸನಗರ: 60 ಅಡಿ ಆಳದ ಪ್ರಪಾತಕ್ಕೆ ಉರುಳಿದ ಬಸ್: ಹಲವರಿಗೆ ಗಾಯ!
ಹೊಸನಗರ: ತಾಲೂಕಿನ ಹುಲಿಕಲ್ ಘಾಟ್ ರಸ್ತೆ ತಿರುವಿನಲ್ಲಿ ಸಂಚರಿಸುತ್ತಿದ್ದ ಬಸ್ ಬ್ರೇಕ್ ಫೈಲ್ ಆಗಿ ಸುಮಾರು 60 ಅಡಿ ಆಳದ ಪ್ರಪಾತಕ್ಕೆ ಉರುಳಿರುವ ಘಟನೆ ಸಂಭವಿಸಿದೆ. ದಾವಣಗೆರೆಯಿಂದ ಮಂಗಳೂರು ಮಧ್ಯೆ ಸಂಚರಿಸುತ್ತಿದ್ದ ಖಾಸಗಿ ಬಸ್ ಭಾನುವಾರ ರಾತ್ರಿ 1.45 ಗಂಟೆಗೆ ಘಾಟಿ ರಸ್ತೆಯ ಶಿವಮೊಗ್ಗ ಜಿಲ್ಲೆ ಗಡಿ ಭಾಗದ ತಿರುವಿನಲ್ಲಿ ಬ್ರೇಕ್ ಫೈಲ್ ಆಗಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಪ್ರಪಾತಕ್ಕೆ ಉರುಳಿದೆ. ಬಸ್ನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರಿದ್ದರು. ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
– ತುಮಕೂರಿನಲ್ಲಿ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಒಂದೇ ಕುಟುಂಬದ ಮೂವರು ಸಾವು
ತುಮಕೂರು: ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರು ಘಟನೆ ತುಮಕೂರು ತಾಲೂಕಿನ ಕೋರ ಹತ್ತಿರದ ಓಬಳಾಪುರ ಗೇಟ್ ಬಳಿ ಜ. 7 ರಂದು ಬೆಳಗಿನ ಜಾವ ಸಂಭವಿಸಿದೆ. ಮಧುಗಿರಿ ತಾಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಗ್ರಾಮದ ಮಮ್ತಾಜ್ (38) ಶಾಖೀರ್ ಹುಸೇನ್ (48), ಮಹ್ಮದ್ ಆಸೀಫ್ (12) ಮೃತರು. ತುಮಕೂರಿನಿಂದ ಮಧುಗಿರಿ ಕಡೆಗೆ ಹೋಗುವಾಗ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿವೈಎಸ್ ಪಿ ಕೆ.ಆರ್. ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ದಟ್ಟ ಮಂಜಿನ ಕಾರಣ ದಾರಿ ಕಾಣದೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ.