ಕರ್ನಾಟಕ ಟಾಪ್ ನ್ಯೂಸ್
– ದೀಪಾವಳಿ ನೆಪದಲ್ಲಿ ಪೆಟ್ರೋಲ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ!!
– ಮಡಿಕೇರಿ: ಪತ್ನಿ ಜೊತೆ ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ!
– ಅಪ್ರಾಪ್ತ ಬಾಲಕಿಗೆ ಮದುವೆಯಾಗುವಂತೆ ಕಾಟ, ಆತ್ಮಹತ್ಯೆ!
NAMMUR EXPRESS NEWS
ಹಾಸನ: ಏಕಾಏಕಿ ಖ್ಯಾತಿ ಪಡೆಯಬೇಕೆಂದು ರೀಲ್ಸ್ ಗೀಳಿಗೆ ಬಿದ್ದು ಹಲವರು ತಮ್ಮ ಭವಿಷ್ಯವನ್ನೇ ಕತ್ತಲೆ ಕಡೆಗೆ ನೂಕಿದ್ದಾರೆ. ಕಾಲೇಜಿನ ವಿದ್ಯಾರ್ಥಿಯೊಬ್ಬ ದೀಪಾವಳಿ ನೆಪದಲ್ಲಿ ಪೆಟ್ರೋಲ್ ಸಿಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಸನದ ರಾಜೀವ್ ಆಯುರ್ವೇದ ಕಾಲೇಜಿನ ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿ ಪದವಿ ವ್ಯಾಸಂಗ ಮಾಡುತ್ತಿರುವ ಲೋಕಕಿರಣ್ ಹೆಚ್ ಎನ್ನುವ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕಾಲೇಜಿನ ಪಕ್ಕದ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿದ್ದಾನೆ. ವಿಡಿಯೋವನ್ನು ಲೋಕಕಿರಣ್ ಸ್ನೇಹಿತ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಯು ತನ್ನ ಬೈಕ್ನಲ್ಲಿದ್ದ ಪೆಟ್ರೋಲ್ ತೆಗೆದು ಕವರ್ಗೆ ತುಂಬಿ, ಅದಕ್ಕೆ ಬತ್ತಿ ಹಾಕಿ, ಬೆಂಕಿ ಕೊಟ್ಟಿದ್ದಾರೆ. ಕವರ್ ಸ್ಫೋಟಗೊಳ್ಳುತ್ತಿದ್ದಂತೆ ಸುಮಾರು 10 ಅಡಿ ಎತ್ತರದವರೆಗೂ ಬೆಂಕಿ ಹೊರಹೊಮ್ಮಿತ್ತು. ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಡಿಕೇರಿ: ಪತ್ನಿ ಜೊತೆ ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ
ಮಡಿಕೇರಿ: ಪತ್ನಿ ಜೊತೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ನೇಣಿಗೆ ಶರಣಾದ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಕೊಪ್ಪ ನಿವಾಸಿ ಜಯಣ್ಣ ಅವರ ಪುತ್ರ ಸುರೇಶ್ (40) ಹಾಗೂ ಅವರ ಪತ್ನಿ ಪಲ್ಲವಿ (28) ಮೃತ ದಂಪತಿ.
ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹೊನ್ನೂರು ಕಾವಲ್ನಲ್ಲಿರುವ ಜಮೀನಿನ ಹಳೆಯ ಖಾಲಿ ಮನೆಯೊಂದರಲ್ಲಿ ದಂಪತಿ ನೇಣಿಗೆ ಶರಣಾಗಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡ, ಉದ್ಯಮದಲ್ಲಿ ನಷ್ಟ, ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
16 ವರ್ಷದ ಅಪ್ರಾಪ್ತ ಬಾಲಕಿಗೆ ಮದುವೆಯಾಗುವಂತೆ ಕಾಟ, ಆತ್ಮಹತ್ಯೆ!
ಬೆಂಗಳೂರು : ಮದುವೆಯಾಗುವಂತೆ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಸೋದರಮಾವನೊಬ್ಬ ಕಿರುಕುಳ ನೀಡುತ್ತಿದ್ದು, ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಗಲಕುಂಟೆಯಲ್ಲಿ ನಡೆದಿದೆ.
28 ವರ್ಷದ ಸೋದರಮಾವ 16 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಸದಾ ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ, ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆಗೂ ಮುನ್ನ ವಾಟ್ಸ್ ಆಯಪ್ ನಲ್ಲಿ ಸ್ಟೇಟಸ್ ಹಾಕಿ ನನ್ನ ಸಾವಿಗೆ ಸೋದರ ಮಾವನೇ ಕಾರಣ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿದ್ದಾನೆ ಎಂದು ಮೃತ ಬಾಲಕಿಯ ತಾಯಿ ದೂರು ನೀಡಿದ್ದು, ಈ ಹಿನ್ನಲೆ ಆರೋಪಿ ಸೋದರಮಾವನನ್ನು ಸ್ಥಳೀಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬಾಗಲಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.