ಸೌಮ್ಯ ಸ್ವಭಾವದ ಅಪ್ರತಿಮ ನಾಯಕ ಲಾಲ್ ಬಹಾದ್ದೂರ್ ಶಾಸ್ತ್ರಿ
* ಹೋರಾಟದ ಉರಿಯಲ್ಲಿ ಬೆಂದು ಪ್ರೌಢರಾದ ವೀರ
* ಭಾರತೀಯ ಸಂಸ್ಕೃತಿಯ ಪ್ರತೀಕ: ನಮಸ್ತೆ ಶಾಸ್ತ್ರೀಜಿ
NAMMUR EXPRESS NEWS
ಸೌಮ್ಯ ಸ್ವಭಾವದ ಅಪ್ರತಿಮ ನಾಯಕ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ನಮನಗಳು.
ಉತ್ತರ ಪ್ರದೇಶದ ವಾರಾಣಸಿಯಿಂದ ಏಳು ಕಿಲೋಮೀಟರ್ ದೂರದ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1904ರಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರಿಯವರು ಒಂದೂವರೆ ವರ್ಷದವರಾಗಿರುವಾಗಲೇ ಅವರು ತೀರಿಕೊಂದಿದ್ದು, ಇಪ್ಪತ್ತು ವಯಸ್ಸಿನ ಅವರ ತಾಯಿ ತಮ್ಮ ಹದಿಮೂರು ಮಕ್ಕಳ ಜತೆ ತವರು ಮನೆ ಸೇರಿ ಉಳಿದರು.
ಬೆಳೆಯುತ್ತಿದ್ದಂತೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ವಿದೇಶಿಯರ ಹಿಡಿತದಲ್ಲಿರುವ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಆಸಕ್ತಿ ಹೆಚ್ಚತೊಡಗಿತು. ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ ದೇಶದ ರಾಜರುಗಳ ವಿರುದ್ಧ ಮಹಾತ್ಮಾ ಗಾಂಧಿ ಅವರ ಖಂಡನೆಯಿಂದ ಲಾಲ್ ಬಹಾದ್ದೂರ್ ಅತ್ಯಂತ ಪ್ರಭಾವಿತರಾದರು. ಈ ವೇಳೆ ಲಾಲ್ ಬಹಾದ್ದೂರ್ ಕೇವಲ ಹನ್ನೊಂದು ವರುಷ ವಯಸ್ಸಿನವರಾಗಿದ್ದರು.
ಗಾಂಧೀಜಿ ತನ್ನ ದೇಶದ ನಾಗರಿಕರನ್ನು ಅಸಹಕಾರ ಚಳುವಳಿಗೆ ಸೇರಲು ಕರೆ ನೀಡಿದ ಸಂದರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಕೇವಲ ಹದಿನಾರು ವರುಷ ವಯಸ್ಸು. ಮಹಾತ್ಮಾ ಅವರ ಕರೆಗೆ ಪ್ರತಿಕ್ರಿಯೆಯಾಗಿ ತನ್ನ ಓದನ್ನು ಬಿಟ್ಟು ಚಳುವಳಿಗೆ ಸೇರಲು ಶಾಸ್ತ್ರಿ ಅವರು ಒಂದೇ ಬಾರಿಗೆ ನಿರ್ಧರಿಸಿದರು. ಅವರ ನಿರ್ಧಾರ ತಾಯಿಯ ನಿರೀಕ್ಷೆಗಳನ್ನು ನುಚ್ಚುನೂರಾಗಿಸಿತು. ಲಾಲ್ ಬಹಾದ್ದೂರ್ ತನ್ನ ನಿರ್ಣಯವನ್ನು ತೆಗೆದುಕೊಂಡಿದ್ದರು.
ಬ್ರಿಟಷ್ ಆಡಳಿತಕ್ಕೆ ವಿರೋಧವಾಗಿ ಸ್ಥಾಪಿಸಲಾದ ಹಲವಾರು ರಾಷ್ಟ್ರೀಯ ಸಂಸ್ಥೆಗಳಲ್ಲೊಂದಾದ ವಾರಣಾಸಿಯ ಕಾಶಿ ವಿದ್ಯಾ ಪೀಠವನ್ನು ಲಾಲ್ ಬಹಾದ್ದೂರ ಶಾಸ್ತ್ರಿ ಸೇರಿದ್ದು,ದೇಶದ ಶ್ರೇಷ್ಠ ಬುದ್ಧೀಜೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. ಶಾಸ್ತ್ರಿ’ ಎಂಬುದು ವಿದ್ಯಾಪೀಠದಿಂದ ಲಾಲ್ ಬಹದ್ದೂರರಿಗೆ ನೀಡಿದ ಪದವಿ. ಆದರೆ, ಅದು ಅವರ ಹೆಸರಿನ ಭಾಗವಾಗಿ ಜನಮನದಲ್ಲಿ ಉಳಿದುಕೊಂಡಿದೆ.
1930ರಲ್ಲಿ ಮಹಾತ್ಮಾ ಗಾಂಧಿ ದಂಡಿ ಸಮುದ್ರ ತೀರದಲ್ಲಿ ನಡೆದು ಉಪ್ಪಿನ ಸಾರ್ವಭೌಮ ಕಾನೂನನ್ನು ಮುರಿದರು. ಈ ಸಾಂಕೇತಿಕ ಕಾರ್ಯ ಇಡೀ ದೇಶವನ್ನೇ ಬೆರಗುಗೊಳಿಸಿತು. ಲಾಲ್ ಬಹಾದ್ದೂರ್ ಶಾಸ್ತ್ರಿ ತಮ್ಮ ಅಗಾಧ ಶಕ್ತಿಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಹಲವಾರು ಬ್ರಿಟಿಷ್ ವಿರೋಧಿ ಆಂದೋಲನಗಳ ನಾಯಕತ್ವ ವಹಿಸಿ ಒಟ್ಟು ಏಳು ವರುಷಗಳನ್ನು ಬ್ರಿಟಷ್ ಕಾರಾಗೃಹಗಳಲ್ಲಿ ಕಳೆದರು. ಹೋರಾಟದ ಉರಿಯಲ್ಲಿ ಬೆಂದು ಇನ್ನಷ್ಟು ಪ್ರೌಢರಾದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಮಹಾತ್ಮಾ ಗಾಂಧಿ ಅವರ ರಾಜಕೀಯ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು. ‘ ಕಠಿಣ ಪರಿಶ್ರಮ ಪ್ರಾರ್ಥನೆಗೆ ಸಮನಾದುದು’ ಎಂದು ಒಮ್ಮೆ ಅವರು ತಮ್ಮ ಗುರುವನ್ನು ಸ್ಮರಿಸುತ್ತಾ ಹೇಳಿದರು. ಮಹಾತ್ಮಾ ಗಾಂಧಿ ಅವರ ನೇರ ಸಂಪ್ರದಾಯದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸಿದರು.
ಭಾರತ ಕಂಡ ಅಪ್ರತಿಮ ನಾಯಕನಿಗೆ ನಮನಗಳು