ರಾಜ್ಯದಲ್ಲಿ ಮತ್ತೆ ನಕ್ಸಲರ ಜಾಡು!?
– ಪಶ್ಚಿಮ ಘಟ್ಟದಲ್ಲಿ ನಕ್ಸಲರು ಕಾಣಿಸಿಕೊಂಡಿರುವ ಸುದ್ದಿ ಚರ್ಚೆ
– ನಕ್ಸಲರ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪೊಲೀಸರು!
NAMMUR EXPRESS NEWS
ರಾಜ್ಯದಲ್ಲಿ ಮತ್ತೆ ನಕ್ಸಲರ ಪ್ರತ್ಯಕ್ಷವಾಗಿರುವ ಸುದ್ದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕರಾವಳಿ ಹಾಗೂ ಮಲೆನಾಡ ಗಡಿ ಭಾಗದಲ್ಲಿ ನಕ್ಸಲರ ಓಡಾಟ ನಡೆಯುತ್ತಿದೆ ಎಂಬ ವದಂತಿ ಕೇಳಿ ಬಂದಿದೆ. ಕೇರಳದಿಂದ ನಕ್ಸಲರು ಮತ್ತೆ ಕರ್ನಾಟಕ ಕಡೆ ಮುಖ ಮಾಡಿದ್ದಾರೆ ಎಂಬ ವರದಿಗಳ ನಡುವೆ ಈ ಸುದ್ದಿ ಆತಂಕಕ್ಕೆ ಕಾರಣವಾಗಿದೆ.
ಮೊದಲು ಎನ್ ಕೌಂಟರ್ ನಡೆದ ಸ್ಥಳದಲ್ಲಿ ಪ್ರತ್ಯಕ್ಷ!
ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ ಎಂದು ಕಳೆದ ಮೂರು ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡವು ಕಾರ್ಕಳ ತಾಲೂಕಿನ ಈದು ಗ್ರಾಮದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಸೋಮವಾರ ಹಾಡುಹಗಲೇ ಕಾಣಿಸಿಕೊಂಡಿದ್ದು, ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ ಸ್ಥಳೀಯರು ಭಯಬೀತರಾಗಿದ್ದಾರೆ. ಸುಮಾರು 30ರಿಂದ 40 ವರ್ಷ ವಯಸ್ಸಿನ ಯುವಕರು ತಂಡದಲ್ಲಿದ್ದು, ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಸ್ಥಳ ಈದು ಬೊಲ್ಲೊಟ್ಟುನಿಂದ ಸುಮಾರು 1 ಕಿ.ಮೀ.ದೂರದಲ್ಲಿಯೇ ಈ ಬಾರಿ ನಕ್ಸಲರು ಕಾಣಿಸುವ ಮೂಲಕ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಮತ್ತೆ ಸುದ್ದಿಯಾಗಿದ್ದಾರೆ.
ನಕ್ಸಲರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ. ನಕ್ಸಲರ ಬಗ್ಗೆ ಮಾಹಿತಿಯುಳ್ಳ ಬಿತ್ತಿಪತ್ರ ಹಾಗೂ ಜಾಗೃತಿ ಪತ್ರಗಳು ಕೂಡಾ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಹಂಚಲಾಗುತ್ತಿದೆ.