ಶಬರಿಮಲೆ ಮಕರ ಜ್ಯೋತಿ ನೋಡಲು 5000 ಜನರಿಗೆ ಮಾತ್ರ ಅವಕಾಶ!
– ಯಾತ್ರಾರ್ಥಿಗಳಿಗೆ ಮಾತ್ರ ಮಕರ ಜ್ಯೋತಿ ದರ್ಶನ
– ಜನಸಂದಣಿ ನಿರ್ವಹಣೆಗೆ ಕೋರ್ಟ್ ಮಹತ್ವದ ನಿರ್ಧಾರ
NAMMUR EXPRESS NEWS
ಶಬರಿಮಲೆ: ಮಕರ ಸಂಕ್ರಾಂತಿಯ ದಿನದಂದು ಮಕರ ಜ್ಯೋತಿಯನ್ನು ಕಣ್ಣುಂಬಿಕೊಳ್ಳಲು ಭಕ್ತ ಸಾಗರವೇ ಹರಿದು ಬರುತ್ತದೆ. ಪ್ರತೀ ವರ್ಷ ಭಕ್ತ ಸಾಗರ ಮಕರ ಜ್ಯೋತಿಯನ್ನು ಕಂಡು ಪುನೀತರಾಗುತ್ತಾರೆ. ಆದರೆ ಈ ಭಾರಿ ಮಕರ ಜ್ಯೋತಿ ವೀಕ್ಷಣೆಗೆ ಸ್ಪಾಟ್ ಬುಕಿಂಗ್ ಸೌಲಭ್ಯವನ್ನು ಕೇವಲ 5,000ಕ್ಕೆ ಮಿತಿಗೊಳಿಸಲಾಗಿದೆ.
ಅಂದರೆ ಜನವರಿ 8ರಿಂದ ಜನವರಿ 15ರವರೆಗೆ ದಿನಕ್ಕೆ 5,000 ಯಾತ್ರಾರ್ಥಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಶಬರಿಮಲೆಗೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರು ಕೂಡ ಈ ಬಗ್ಗೆ ಅರಿತಿರುವುದು ಉತ್ತಮ. ಜನವರಿ 14ರಂದು ಮಕರವಿಳಕ್ಕು ಉತ್ಸವ / ಮಕರ ಜ್ಯೋತಿ ನಡೆಯಲಿದ್ದು, ಕೇರಳ ಹೈಕೋರ್ಟ್ನ ನಿರ್ದೇಶನದ ಆಧಾರದ ಮೇಲೆ 5,000 ಯಾತ್ರಾರ್ಥಿಗಳಿಗೆ ಮಾತ್ರ ಮಕರ ಜ್ಯೋತಿ ದರ್ಶನಕ್ಕೆ ಅವಕಾಶ ಕಲ್ಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಜನದಟ್ಟಣೆಯನ್ನು ತಡೆಯುವ ಗುರಿಯನ್ನು ಹೊಂದಿದ್ದು ಮಕರ ಜ್ಯೋತಿ ವೀಕ್ಷಣೆಯ ಸಮಯದಲ್ಲಿ ಜನಸಂದಣಿ ನಿರ್ವಹಣೆಗಾಗಿ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕೇರಳ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇವಸ್ವಂ ಬೋರ್ಡ್ ವೆಬ್ಸೈಟ್ನಲ್ಲಿ ದೇವರ ದರ್ಶನಕ್ಕೆ ಜನವರಿ 12ರಂದು 60,000, ಜನವರಿ 13ರಂದು 50,000 ಮತ್ತು ಜನವರಿ 14ರಂದು 40,000ಕ್ಕೆ ವರ್ಚುವಲ್ ಕ್ಯೂ ಬುಕ್ಕಿಂಗ್ಗಳನ್ನು ನಿಗದಿಪಡಿಸಲಾಗಿದೆ. ಜೊತೆಗೆ ದಟ್ಟಣೆಯನ್ನು ತಪ್ಪಿಸಲು ಭಕ್ತರು ಬೆಟ್ಟದ ಮೇಲೆ ಕ್ಯಾಂಪ್ ಮಾಡದಂತೆ ಸೂಚಿಸಲಾಗಿದೆ.