ಪ್ರಜ್ವಲ್ ವಿಮಾನ ಟಿಕೆಟ್ ರದ್ದು: ಸಿಗದ ಸುಳಿವು
– ಜೆಡಿಎಸ್ ನಾಯಕ ರೇವಣ್ಣ ಭವಿಷ್ಯ ಇಂದು ನಿರ್ಧಾರ?
– ಪ್ರೀತಂಗೌಡ ಆಪ್ತರು ಎಸ್ಐಟಿ ವಶಕ್ಕೆ: ಹೊಸ ತಿರುವು
NAMMUR EXPRESS NEWS
ಬೆಂಗಳೂರು: ಅಶ್ಲೀಲ ಪೆನ್ಡ್ರೈವ್ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಮೇ 15 ರಂದು ಜರ್ಮನಿಯಿಂದ ಬೆಂಗಳೂರಿಗೆ ಬರಲು ಕಾಯ್ದಿರಿಸಿದ್ದ ವಿಮಾನದ ಟಿಕೆಟನ್ನೂ ರದ್ದುಗೊಳಿಸಿದ್ದಾರೆ. ಹೀಗಾಗಿ ಇನ್ನೇನು 2 ದಿನಗಳಲ್ಲಿ ಅವರು ವಾಪಸ್ ಬರಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದ್ದು, ಸಂಸದನ ಪತ್ತೆಯೇ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ದೊಡ್ಡ ಸವಾಲಾಗಿದೆ. ಎಸ್ಐಟಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಪ್ರಜ್ವಲ್ ವಿದೇಶದಲ್ಲಿ ಇರುವ ಪ್ರದೇಶವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಪ್ರಜ್ವಲ್ ಮೇ 15ರಂದು ಜರ್ಮನಿಯಿಂದ ಬೆಂಗಳೂರಿಗೆ ಬರುವ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದರು ಎನ್ನಲಾಗಿದೆ. ಈಗ ದಿಢೀರ್ ಟಿಕೆಟ್ ರದ್ದುಗೊಳಿಸಿದ್ದಾರೆ. ಈ ಹಿಂದೆ ಮೇ 3ರ ವಿಮಾನದ ಟಿಕೆಟನ್ನು ಮೇ 15ಕ್ಕೆ ಮುಂದೂಡಿದ್ದರು. ಈಗ ಟಿಕೆಟ್ ದಿಢೀರ್ ರದ್ದುಗೊಳಿಸಿದ್ದಾರೆ.
ಎಸ್ಐಟಿಯನ್ನು ದಿಕ್ಕು ತಪ್ಪಿಸಲು ಪ್ರಜ್ವಲ್ ಈ ರೀತಿ ಮಾಡುತ್ತಿದ್ದಾರೆಯೇ ಅಥವಾ ಸದ್ಯದ ಬೆಳವಣಿಗೆ ಗಮನಿಸಿ ಮಾಡಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ತನಿಖಾಧಿಕಾರಿಗಳಲ್ಲಿ ಹುಟ್ಟಿಕೊಂಡಿವೆ. ಪ್ರಜ್ವಲ್ ಸದ್ಯ ಬೆಂಗಳೂರಿಗೆ ವಾಪಸಾಗುವುದು ಅನುಮಾನ ಎನ್ನಲಾಗುತ್ತಿದೆ. ಪ್ರಕರಣವು ಎಸ್ಐಟಿ ಅಂಗಳಕ್ಕೆ ಬರುವ ಮುನ್ನವೇ ಪ್ರಜ್ವಲ್ ಜರ್ಮನಿಗೆ ಹಾರಿದ್ದರು. ಸದ್ಯ ಅವರು ಯಾವ ದೇಶದಲ್ಲಿ ಇದ್ದಾರೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಲು ಎಸ್ಐಟಿಗೆ ಸಾಧ್ಯವಾಗುತ್ತಿಲ್ಲ. ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರೂ ಪ್ರಜ್ವಲ್ ವಿಮಾನ, ಹಡಗಿನಲ್ಲಿ ಪ್ರಯಾಣಿಸದ ಹಿನ್ನೆಲೆಯಲ್ಲಿ ಅವರ ಬಗ್ಗೆ ಸಣ್ಣ ಸುಳಿವು ಕೂಡ ಎಸ್ಐಟಿಗೆ ಸಿಕ್ಕಿಲ್ಲ. ವಿದೇಶದಲ್ಲಿ ಇರುವುದರಿಂದ ಅವರನ್ನು ಪತ್ತೆ ಹಚ್ಚಿ ಬಂಧಿಸುವುದೇ ಎಸ್ಐಟಿಗೆ ಸವಾಲಾಗಿದೆ.
ಇಂದು ರೇವಣ್ಣ ಭವಿಷ್ಯ ನಿರ್ಧಾರ?
ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಶಾಸಕ ಎಚ್.ಡಿ. ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ. ರೇವಣ್ಣ ಅವರಿಗೆ ಜಾಮೀನು ಸಿಗಲಿದೆಯೇ ಅಥವಾ ಅರ್ಜಿ ವಜಾ ಆಗಲಿದೆಯೇ ಕಾದು ನೋಡಬೇಕಿದೆ.
ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ ಹೊಸ ತಿರುವು
ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ವಿಶೇಷ ತನಿಖಾ ಅಧಿಕಾರಿಗಳು ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್ ಮತ್ತು ಕಚೇರಿಯ ಸಿಬ್ಬಂದಿ ಚೇತನ್ನನ್ನು ವಶಕ್ಕೆ ಪಡೆದುಕೊಂಡು ಹಾಸನದ ಸೆನ್ ಠಾಣೆಯಲ್ಲಿ ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ನವೀನ್ ಗೌಡ ಮತ್ತು ಪುಟ್ಟರಾಜು ಎಂಬುವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ್ ವಿಡಿಯೋಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದಂತೆ ಕಳೆದ ತಿಂಗಳು ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚಿಸಿತು. ಬಳಿಕ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಯಿತು. ನಂತರ ಎಸ್ಐಟಿ ಹಲವು ತಂಡಗಳನ್ನು ರಚಿಸಿಕೊಂಡು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ.