ಯುವ ನಿಧಿ ಯೋಜನೆಗೆ ನೋಂದಣಿ: ಜನವರಿ ತಿಂಗಳಿಗೆ ಬರುತ್ತೆ ಹಣ…!
– ಏನೇನು ಮಾನದಂಡ?: ಯುವನಿಧಿ ಯೋಜನೆಗೆ ಯಾರು ಅರ್ಹರು..?
– ಯುವನಿಧಿ ಟೋಲ್ ಫ್ರೀ ಸಂಖ್ಯೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ!
NAMMUR EXPRESS NEWS
ರಾಜ್ಯ ಸರಕಾರ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಯುವನಿಧಿ ಯೋಜನೆಯನ್ನು ಜಾರಿ ಮಾಡಿದೆ. ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಯುವ ನಿಧಿ ಯೋಜನೆಯ ಮೂಲಕ ಯುವಜನತೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯನ್ನು ಡಿಸೆಂಬರ್ 26ರಿಂದಲೇ ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಯುವನಿಧಿ ಯೋಜನೆಗೆ ಸೇರ್ಪಡೆ ಆಗಲು ನಿರ್ದಿಷ್ಟ ಮಾನದಂಡವನ್ನು ನೀಡಲಾಗಿದೆ. ಪ್ರಮುಖವಾಗಿ 2022-23ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮೋ ಶಿಕ್ಷಣ ಪಡೆದುಕೊಂಡವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತೀರ್ಣರಾದ ನಂತರ 6 ತಿಂಗಳ ಕಾಲ ಉದ್ಯೋಗ ಸಿಗದೇ ಇರುವ ಯುವತಿ, ಯುವತಿಯರಿಗೆ ದೊರಕದ ಯುವಕ, ಯುವತಿಯರು ಗರಿಷ್ಠ 2 ವರ್ಷಗಳ ಅವಧಿಗೆ ಈ ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದಾಗಿದೆ. ಪದವೀಧರರಿಗೆ ಪ್ರತೀ ತಿಂಗಳು 3 ಸಾವಿರ ಹಾಗೂ ಡಿಪ್ಲೊಮಾ ಶಿಕ್ಷಣ ಪಡೆದವರಿಗೆ ಪ್ರತೀ ತಿಂಗಳು 1,500 ರೂ.ಗಳ ನಿರುದ್ಯೋಗ ಭತ್ಯೆ ದೊರೆಯಲಿದೆ.
ಜನವರಿ ತಿಂಗಳಿಗೆ ಬರುತ್ತೆ ಹಣ…!
2024 ಜನವರಿ ಮಾಹೆಯಿಂದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇರವಾಗಿ ಡಿಬಿಟಿ ಮುಖಾಂತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರದಲ್ಲಿ ಉದ್ಯೋಗ ದೊರೆತರೆ ಅಂತಹ ಸಂದರ್ಭದಲ್ಲಿ ಈ ಯೋಜನೆಯ ಹಣ ಸ್ಥಗಿತವಾಗಲಿದೆ. ಅಲ್ಲದೇ ಗರಿಷ್ಠ 2 ವರ್ಷಗಳ ಅವಧಿಗೆ ಮಾತ್ರವೇ ಈ ಯೋಜನೆಯ ಲಾಭ ದೊರೆಯಲಿದೆ. ಯೋಜನೆಗೆ ಸೇರ್ಪಡೆಯಾಗಿ ಸುಳ್ಳು ಮಾಹಿತಿಯನ್ನು ನೀಡುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸರಕಾರ ತಿಳಿಸಿದೆ.
ಸುಮಾರು 5 ಲಕ್ಷ ಮಂದಿಗೆ ಸೌಲಭ್ಯ
ಕರ್ನಾಟಕ ರಾಜ್ಯದಲ್ಲಿ ಒಟ್ಟು 5 ಲಕ್ಷ 29 ಸಾವಿರ ಯುವಕ ಹಾಗೂ ಯುವತಿಯರು ಇದ್ದಾರೆ. ಈ ಪೈಕಿ 4 ಲಕ್ಷ 21 ಸಾವಿರ ಮಂದಿ ಪದವೀಧರರು ಹಾಗೂ 48 ಸಾವಿರ ಮಂದಿ ಡಿಪ್ಲೊಮೊ ಪದವೀಧರರಿದ್ದಾರೆ. ಈಗಾಗಲೇ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಯುವನಿಧಿ ಯೋಜನೆಯ ಜಾರಿಯ ಬೆನ್ನಲ್ಲೇ ಕರ್ನಾಟಕ ಸರಕಾರ ಉದ್ಯೋಗ ಮೇಳ ಆಯೋಜನೆಗೆ ಸಜ್ಜಾಗಿದೆ. ನಿರುದ್ಯೋಗಿಗಳಿಗ ನಿರುದ್ಯೋಗ ಭತ್ಯೆಯ ಜೊತೆಗೆ ಅವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉದ್ಯೋಗಳಿಗೆ ಕೌಶಲ್ಯ ತರಬೇತಿಯನ್ನು ನೀಡಿ, ಉದ್ಯೋಗ ದೊರಕಿಸಿ ಕೊಡುವ ಉದ್ದೇಶವನ್ನು ರಾಜ್ಯ ಸರಕಾರ ಹೊಂದಿದೆ.
ಯುವನಿಧಿ ಯೋಜನೆಗೆ ಯಾರು ಅರ್ಹರು?
ಯುವ ನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು 2023 ರಲ್ಲಿ ಪದವಿ / ಡಿಪ್ಲೋಮಾ ಉತ್ತೀರ್ಣರಾಗಿರಬೇಕು. ಶಿಕ್ಷಣವನ್ನು ಪೂರೈಸಿ ಕನಿಷ್ಠ 6 ತಿಂಗಳ ಅವಧಿಯಲ್ಲಿ ಸರಕಾರಿ ಅಥವಾ ಖಾಸಗಿ ಉದ್ಯೋಗವನ್ನು ಪಡೆದುಕೊಳ್ಳದೇ ಇರುವವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉದ್ಯೋಗ ಪಡೆದವರು ಮಾತ್ರವಲ್ಲದೇ ಉನ್ನತ ಶಿಕ್ಷಣವನ್ನು ಮುಂದುವರಿಸಿರುವವರಿಗೆ ಕೂಡ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಉನ್ನತ ವಿದ್ಯಾಭ್ಯಾಸ ಮುಂದುವರೆಸದೇ ಇರುವವರು. ಅಷ್ಟೇ ಅಲ್ಲಾ ಕರ್ನಾಟಕದಲ್ಲಿ ಶಿಕ್ಷಣವನ್ನು ಪಡೆದವರಿಗೆ ಮಾತ್ರವೇ ಯುವನಿಧಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಯುವನಿಧಿ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಲು ಕಡ್ಡಾಯವಾಗಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ, ಪದವಿ ಹಾಗೂ ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಸಲ್ಲಿಕೆ ಮಾಡಬೇಕಾಗಿದೆ. ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮುಖಾಂತರ ಯುವ ನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯುವನಿಧಿ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ಅವಕಾಶವನ್ನು ಕಲ್ಪಿಸಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯೋಜನೆಗೆ ಅರ್ಜಿ ಸಲ್ಲಿಸುವ ಕುರಿತ ಯಾವುದೇ ಗೊಂದಲಗಳಿದ್ದರೂ ಕೂಡ ಟೋಲ್ ಫ್ರೀ ಸಂಖ್ಯೆ 1800 599 9918 ಸಂಪರ್ಕಿಸಬಹುದಾಗಿದೆ