ಸದಾನಂದ ಗೌಡ ಕಾಂಗ್ರೆಸ್ ಕಡೆಗೆ?!
– ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಇನ್ನೂ ಮೂಡದ ಒಮ್ಮತ
– ಬಿಜೆಪಿ ಟಿಕೆಟ್ ದೊರೆಯದೆ ಅಸಮಾಧಾನಗೊಂಡಿರುವ ಸದಾನಂದ ಗೌಡ
– ಮೈಸೂರು ಅಥವಾ ಬೆಂಗಳೂರಿಂದ ಸ್ಪರ್ಧೆ?
NAMMUR EXPRESS NEWS
ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ದೊರೆಯದೆ ಅಸಮಾಧಾನಗೊಂಡಿರುವ ಮಾಜಿ ಸಿಎಂ ಡಿವಿ ಸದಾನಂದ ಗೌಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ಬಗ್ಗೆ ಬಲವಾದ ಚರ್ಚೆಗಳು ನಡೆಯುತ್ತಿವೆ. ಸದಾನಂದ ಗೌಡರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಕ್ಷದ ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಸದಾನಂದ ಗೌಡರ ಪಕ್ಷ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಭಿನ್ನ ಅಭಿಪ್ರಾಯಗಳಿವೆ ಎಂದು ಮೂಲಗಳು ತಿಳಿಸುವೆ.
ಸದಾನಂದ ಗೌಡರಿಗೆ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಇನ್ನೂ ಒಮ್ಮತದ ಅಭಿಪ್ರಾಯ ಮೂಡಿಬಂದಿಲ್ಲ. ಮತ್ತೊಂದೆಡೆ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಸದಾನಂದ ಗೌಡಗೆ ನೀಡುವ ಬಗ್ಗೆ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ನಡೆದಿದೆ. ಆದರೆ, ಮೈಸೂರು ಕ್ಷೇತ್ರದ ಟಿಕೆಟ್ ನೀಡುವುದನ್ನು ಸಿದ್ದರಾಮಯ್ಯ ಸಾರಾಸಗಟಾಗಿ ತಳಿಹಾಕಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಸಮರ್ಥ ಅಭ್ಯರ್ಥಿ ದೊರಕಿಲ್ಲ. ಈ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಿಯಾ ಕೃಷ್ಣ ಇನ್ನು ಸಮ್ಮತಿ ಸೂಚಿಸಿಲ್ಲ. ಪ್ರಿಯಾ ಕೃಷ್ಣ ಒಪ್ಪದೆ ಹೋದರೆ ಸದಾನಂದ ಗೌಡಗೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಇಂದು ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸುವ ಮೂಲಕ ನಿಲುವು ತಿಳಿಸುವುದಾಗಿ ಹೇಳಿದ ಸದಾನಂದ ಗೌಡ, ಮಾಧ್ಯಮಗೋಷ್ಠಿಯನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದಾರೆ. ಒಂದು ವೇಳೆ ಸದಾನಂದ ಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಬೆಂಗಳೂರು ಉತ್ತರದಿಂದ ಕಣಕ್ಕಿಳಿದರೆ ಶೋಭಾ ಮತ್ತು ಡಿವಿ ನಡುವಣ ಅಖಾಡಕ್ಕೆ ವೇದಿಕೆ ಸಿದ್ಧವಾಗಲಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಿತ್ತು. ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷಕ್ಕೆ ಯಾರನ್ನಾದರೂ ಕರೆತರುವಾಗ ಅವರ ಹಿನ್ನೆಲೆ, ಸಿದ್ಧಾಂತದ ಬಗ್ಗೆ ಗಮನಿಸಬೇಕು. ಪಕ್ಷಕ್ಕೆ ಮುಜುಗರ ಉಂಟುಮಾಡುವಂಥವರನ್ನು ಕರೆದುಕೊಂಡು ಬರಬಾರದು ಎಂದು ಸೂಚನೆ ನೀಡಿದ್ದರು. ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯುಳ್ಳ ಸದಾನಂದ ಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಮಾಲೋಚನೆ ವೇಳೆ ಶೆಟ್ಟರ್ರಿಂದ ಆದಂಥ ಅವಮಾನ ಮರುಕಳಿಸಿದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಕಾಂಗ್ರೆಸ್ ರಾಜ್ಯ ನಾಯಕರ ಮೇಲಿದೆ ಎಂದು ಮೂಲಗಳು ಹೇಳಿವೆ.
ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ‘ಕೈ’ ನಾಯಕರಿಗೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮುಖಂಡರ ಬಗ್ಗೆ ಪ್ರೀತಿ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಸದಾನಂದ ಗೌಡ ಕಾಂಗ್ರೆಸ್ ಸೇರುವುದಿಲ್ಲ. ಅವರ ಮತ್ತು ಈಶ್ವರಪ್ಪರನ್ನು ಮನವೊಲಿಸಲಿದ್ದೇವೆ ಎಂದು ಹೇಳಿದ್ದಾರೆ.