7ನೇ ವೇತನ ಆಯೋಗ ವರದಿ ಅಗಸ್ಟ್ನಿಂದ ಜಾರಿ..!
– ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ನ್ಯೂಸ್
– ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ?
NAMMUR EXPRESS NEWS
ಬೆಂಗಳೂರು: ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ರಾಜ್ಯ ಸರಕಾರ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. 7ನೇ ವೇತನ ಆಯೋಗ ವರದಿ ಸರಕಾರದ ಕೈ ಸೇರಿ 3 ತಿಂಗಳೇ ಕಳೆದಿದ್ದು, ಅಗಸ್ಟ್ನಿಂದ ವೇತನ ಆಯೋಗದ ವರದಿಯಲ್ಲಿನ ಶಿಫಾರಸ್ಸುಗಳು ಜಾರಿಗೆ ಬರಲಿದೆ.
ಮಾರ್ಚ್ ತಿಂಗಳಿನಲ್ಲೇ ಕೆ.ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿತ್ತು. ಸರಕಾರಿ ನೌಕರರ ವೇತನ, ಕೆಲಸದ ಅವಧಿ ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಮಾಡಲಾಗಿತ್ತು. ಆದರೆ ರಾಜ್ಯ ಸರಕಾರ ವೇತನ ಆಯೋಗದ ವರದಿಯನ್ನು ಜಾರಿಗೆ ತಂದಿರಲಿಲ್ಲ. ಜೂನ್ ತಿಂಗಳಿನಲ್ಲಿ ನಡೆದ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಸಚಿವ ಸಂಪುಟ ಸಭೆಯಲ್ಲಿ ವೇತನ ಆಯೋಗ ವರದಿಯ ವಿಚಾರ ಚರ್ಚೆಯೇ ನಡೆದಿರಲಿಲ್ಲ. ಆದ್ರೀಗ ರಾಜ್ಯದಲ್ಲಿನ ಸರಕಾರಿ ನೌಕರರ ಒತ್ತಡಕ್ಕೆ ಮಣಿದಿರುವ ರಾಜ್ಯ ಸರಕಾರ ಕೊನೆಗೂ ಗುಡ್ನ್ಯೂಸ್ ಕೊಟ್ಟಿದೆ.
ಏಳನೇ ವೇತನ ಆಯೋಗದಲ್ಲಿ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಸಲುವಾಗಿ ಹಣಕಾಸು ಹೊಂದಾಣಿಕೆಯ ಕುರಿತು ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಗೆ ಸೂಚನೆಯನ್ನು ನೀಡಿದ್ದರು. ಇದೀಗ ಆರ್ಥಿಕ ಇಲಾಖೆ ಕೂಡ ವೇತನ ಹೆಚ್ಚಳಕ್ಕೆ ಒಪ್ಪಿಗೆಯನ್ನು ಸೂಚಿಸಿದೆ ಎನ್ನಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜುಲೈ 15ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗೆ ತರುವ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸಿ, ನಂತರ ಆದೇಶ ಹೊರಡಿಸುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಸರಕಾರಿ ನೌಕರರು ಕಳೆದ ಎರಡು ಮೂರು ವರ್ಷಗಳಿಂದ ಕಾಯುತ್ತಿರುವ ವೇತನ ಹೆಚ್ಚಳ ಮುಂದಿನ ತಿಂಗಳಿನಿಂದಲೇ ಸರಕಾರ ಅಧಿಕೃತ ಆದೇಶ ಹೊರಡಿಸಲಿದೆ.
ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ?
ರಾಜ್ಯ ಸರಕಾರಿ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕಳೆದ ಬಜೆಟ್ನಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಮೀಸಲು ಇರಿಸಲಾಗಿದೆ. ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಸರಕಾರಿ ನೌಕರರ ವೇತನದಲ್ಲಿ ಶೇ.27.5 ರಷ್ಟು ಹೆಚ್ಚಳವಾಗಲಿದೆ. ಆದರೆ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಶೇ.17 ಮಧ್ಯಂತರ ಪರಿಹಾರ ನೀಡಿತ್ತು. ಹೀಗಾಗಿ ಉಳಿದ ಶೇ.10.5ರಷ್ಟು ವೇತನ ಹೆಚ್ಚಳಕ್ಕೆ ರಾಜ್ಯ ಸರಕಾರ ನಿರ್ಧಾರ ಮಾಡಿದೆ.