ಬಿಸಿಲಿನ ಹೊಡೆತಕ್ಕೆ ರಾಜ್ಯದಲ್ಲಿ ಮೊದಲ ಜೀವ ಬಲಿ?
– ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಸಂಭವಿಸಿದ ಘಟನೆ
– ರಾಜ್ಯದಲ್ಲಿ ದಾಖಲೆಯ ತಾಪಮಾನ ದಾಖಲು!
NAMMUR EXPRESS NEWS
ಕಲಬುರಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತಿದ್ದು, ಕಲಬುರಗಿಯಲ್ಲಿ ರಣ ಬಿಸಿಲಿಗೆ ಜೀವವೇ ಬಲಿಯಾಯ್ತಾ ಅನ್ನುವ ಅನುಮಾನ ಸೃಷ್ಟಿಯಾಗಿದೆ. ಹೌದು.. ನರೇಗಾ ಕೂಲಿ ಕೆಲಸ ಮಾಡುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದು, ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ಅವರ ಪತ್ನಿ ಶಂಕೆ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಶರಣಪ್ಪ ಸಮಗಾರ (42) ಎಂಬುವರು ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಿಸಿಲಿನ ಹೊಡೆತಕ್ಕೆ ಶರಣಪ್ಪನ ಸಾವನ್ನಪ್ಪಿದ್ರಾ? ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರೋದಾ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಶರಣಪ್ಪ ಸಮಗಾರ ಮರಣೋತ್ತರ ಪರೀಕ್ಷೆ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಘಟನೆ ಸಂಬಂಧ ಕಲಬುರಗಿ ಜಿಲ್ಲೆಯ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ದಾಖಲೆಯ ತಾಪಮಾನ ದಾಖಲು!
ಈ ಬಾರಿ ರಾಜ್ಯದ ಎರಡು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 40° ದಾಟಿದ್ದು, ಬಾಗಲಕೋಟೆ 40.6° ಹಾಗೂ ಕಲಬುರಗಿಯಲ್ಲಿ 40.9° ತಾಪಮಾನ ದಾಖಲಾಗಿದೆ. ಬೆಂಗಳೂರಲ್ಲಿ 1996ರ ಬಳಿಕ ಅತಿ ಹೆಚ್ಚು ತಾಪಮಾನ ಮಾರ್ಚ್ ನಲ್ಲಿ ದಾಖಲಾಗಿದೆ. 1996ರಲ್ಲಿ ಬೆಂಗಳೂರಲ್ಲಿ 37.3° ನಷ್ಟು ತಾಪಮಾನ ದಾಖಲಾಗಿತ್ತು. ಈ ಬಾರಿ ಬೆಂಗಳೂರಲ್ಲಿ ಮಾಚ್ರ್ನಲ್ಲಿ 36° ಸರಾಸರಿಯಲ್ಲಿ ತಾಪಮಾನ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಉಳಿದಂತೆ ಈ ಬೇಸಿಗೆಯಲ್ಲಿ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. ಕೊಪ್ಪಳ, ರಾಯಚೂರು, ಗದಗ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ಅಧಿಕ ತಾಪಮಾನ ಇದೆ. 1996ರಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ 44.6°ಕ್ಕೆ ಏರಿದ್ದ ಬೇಸಿಗೆಯ ಧಗೆ, ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ 40° ದಾಟಿದೆ.