ರಾಜ್ಯದಲ್ಲಿ ಸುಡು ಬಿಸಿಲು..!
– ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳ
– ಮಳೆ ಕೊರತೆ: ತೇವಾಂಶ ಕುಸಿತ, ಬಿಸಿ ಹವೆ
– ಎಳೆ ನೀರು, ತಂಪು ಪಾನೀಯಗಳಿಗೆ ಡಿಮ್ಯಾಂಡ್
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಗಿಂತ ಗರಿಷ್ಠ ಉಷ್ಣಾಂಶ ಏರಿಕೆಯಾಗಿದೆ. ಇದರಿಂದ ಜನ ಜಾನುವಾರು ತತ್ತರಿಸುವಂತಾಗಿದೆ. ಅಲ್ಲದೆ ನೀರಿಗೆ ಹಾಹಾಕಾರ ಎದುರಾಗುವ ಭೀತಿ ಇದೆ. ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಭಾರಿ ಪ್ರಮಾಣದ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ರಾಜ್ಯದ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತಿದೆ. ಆಕಾಶವು ಶುಭ್ರವಾಗಿರುವುದರಿಂದ ತಾಪ ಹೆಚ್ಚಳವಾಗಿದೆ.
ಗರಿಷ್ಠ ಉಷ್ಣಾಂಶದ ಜೊತೆಗೆ ಕನಿಷ್ಠ ಉಷ್ಣಾಂಶದಲ್ಲಿಯೂ ಬಾರಿ ಏರಿಕೆ ಕಂಡು ಬಂದಿದೆ. ಗರಿಷ್ಠ ಮೂರು ಡಿಗ್ರಿ ಅಧಿಕ : ಹವಾಮಾನ ಇಲಾಖೆಯ ಅಂಕಿ ಅಂಶದ ಪ್ರಕಾರ, ಗುರುವಾರ ಬಾದಾಮಿಯಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚು. ಅದೇ ರೀತಿ ಮಂಡ್ಯ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಡಿಕೆ ಪ್ರಮಾಣಕ್ಕಿಂತ ತಲಾ ಮೂರು ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾದ ಬಗ್ಗೆ ವರದಿಯಾಗಿದೆ. ಉಳಿದಂತೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣ, ಬಾಗಲಕೋಟೆ, ಧಾರವಾಡ,ಹಂಪಿ, ಹೊನ್ನಾವರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶವು ವಾಡಿಕೆ ಪ್ರಮಾಣಕ್ಕಿಂತ ತಲಾ ಎರಡು ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆಯಾಗಿದೆ. ಸದಾ ತಣ್ಣಗಿರುತ್ತಿದ್ದ ಮಲೆನಾಡು ಭಾಗದಲ್ಲಿ ಕೂಡ ಬಿಸಿಲು ಹೆಚ್ಚಾಗಿದೆ. ಇದರಿಂದ ಕೃಷಿ ಚಟುವಟಿಕೆ ಹಿನ್ನಡೆಯಾಗಿದೆ.
ಇನ್ನು ಮುಂದೆ ಎಳನೀರು ಸಿಗುವುದೇ ಕಷ್ಟ
ಬಿಸಿಲು ಹೆಚ್ಚಳ ಹಿನ್ನೆಲೆ ಎಳೆನೀರಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚುತ್ತಿದೆ. ತೋಟಗಳಲ್ಲಿ ಎಳನೀರು ಪ್ರಮಾಣವೂ ಕಡಿಮೆಯಾಗಿರುವುದರಿಂದ ಬೆಲೆ ಹೆಚ್ಚುತ್ತಿದೆ. ಎಳನೀರು ವ್ಯಾಪಾರಿಗಳು ಒಂದು ಸಾವಿರ ಎಳನೀರಿಗೆ ₹15 ಸಾವಿರದಿಂದ ₹17 ಸಾವಿರ ದರದಲ್ಲಿ ಖರೀದಿಸುತ್ತಾರೆ. ರೈತರು ಒಂದು ಸಾವಿರ ಎಳನೀರಿಗೆ 100 ಎಳೆನೀರನ್ನು ಉಚಿತವಾಗಿ ವ್ಯಾಪಾರಿಗಳಿಗೆ ನೀಡಬೇಕು. ರೈತರಿಗೆ ಒಂದು ಸಾವಿರ ಎಳನೀರು ಮಾರಾಟ ಮಾಡಿದಾಗ ₹13,500 ಸಿಗುತ್ತದೆ. ತೆಂಗಿನ ಕಾಯಿಗಿಂತ ಎಳನೀರು ಮಾರಾಟದಲ್ಲೇ ಲಾಭ ಹೆಚ್ಚು ಎನ್ನುತ್ತಾರೆ ರೈತರು.
ಬಿಸಿಲಿನ ತಾಪ ಹೆಚ್ಚಿರುವುದರಿಂದ ಎಳನೀರಿಗೆ ಬೇಡಿಕೆ ಹೆಚ್ಚಿದೆ. ಚಿಲ್ಲರೆ ಮಾರಾಟಗಾರರು ವ್ಯಾಪಾರಿಗಳಿಂದ ಒಂದು ಎಳೆನೀರಿಗೆ ₹23 ರಿಂದ ₹25 ದರದಲ್ಲಿ ಖರೀದಿಸಿ ತಂದು ಮಾರುತ್ತಾರೆ. ಚಿಲ್ಲರೆಯಾಗಿ ಒಂದು ಎಳನೀರಿಗೆ ₹35 ಬೆಲೆ ಇದೆ. ಕೆಲ ವ್ಯಾಪಾರಿಗಳು ಒಮ್ಮೆಗೆ ಸುಮಾರು 6 ಸಾವಿರ ಎಳನೀರನ್ನು ಒಟ್ಟುಗೂಡಿಸಿ ಪಿಕಪ್ ವಾಹನದಲ್ಲಿ ಮಂಗಳೂರಿನ ಕಡೆಗೆ ಕೊಂಡೊಯ್ಯುತ್ತಾರೆ. ಕಾರ್ಕಳ, ಮೂಡಬಿದರೆ, ಮಣಿಪಾಲ ಮುಂತಾದೆಡೆ ಎಳನೀರಿಗೆ ಹೆಚ್ಚಿನ ಬೇಡಿಕೆಯಿದೆ. ಅಲ್ಲಿ ನೂರು ಎಳನೀರಿಗೆ ₹3000 ಬೆಲೆಯಿದೆ. ಎಳನೀರು ಕೆಡವುವ, ವಾಹನದ ಖರ್ಚು ಮುಂತಾದವುಗಳನ್ನು ಕಳೆದು ಒಂದು ಎಳನೀರಿಗೆ ₹4 ರಿಂದ ₹5 ಲಾಭ ದೊರೆಯುತ್ತದೆ. ಮುಂಬೈಗೆ ಎಳನೀರು ಕಳಿಸುವ ವ್ಯಾಪಾರಿಗಳು ಒಂದು ಎಳನೀರಿಗೆ ₹28 ರಿಂದ ₹30 ದರದಲ್ಲಿ ಎಳೆನೀರು ಖರೀದಿಸುತ್ತಿದ್ದಾರೆ. ವ್ಯಾಪಾರಿಗಳು ಅವರಿಗೆ ಎಳೆನೀರು ನೀಡುತ್ತಿರುವುದರಿಂದಲೂ ಚಿಲ್ಲರೆ ವ್ಯಾಪಾರಿಗಳಿಗೆ ಎಳನೀರು ದೊರೆಯುವುದು ತುಸು ಕಷ್ಟವಾಗಿದೆ.