ಮೂರು ದಿನ ದೀಪಾವಳಿ ಆಚರಣೆ ಸಂಭ್ರಮ
– ತೈಲಾಭ್ಯಂಗ, ಮನೆಮನೆಗಳಲ್ಲಿ ಸಿದ್ಧತೆ
– ಸಾಲು ರಜೆ, ಊರಿಗೆ ಹೊರಡಲು ಸಿದ್ಧತೆ
– ಪಟಾಕಿ ಬೆಲೆ ಕೈಸುಡುವಂತಿದೆ!: ಬೆಳಕಿನ ಹಬ್ಬದ ಸಡಗರ
NAMMUR EXPRESS NEWS
ಬೆಳಕಿನ ಹಬ್ಬ ದೀಪಾವಳಿ ಎಲ್ಲೆಡೆ ಆರಂಭಗೊಂಡಿದೆ. ಮನೆಮನೆಗಳಲ್ಲಿ ಆಚರಿಸುವ ಹಬ್ಬದಲ್ಲಿಮುಂದಿನ ಮೂರು ದಿನಗಳ ಕಾಲ ವಿಶೇಷ ವಿಧಿಗಳನ್ನು ಆಚರಿಸಲಾಗುತ್ತಿದೆ.
ಗ್ರಾಮೀಣ, ನಗರ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಿದೆ. ಮೂರು ದಿನಗಳಲ್ಲಿ ದೀಪೋತ್ಸವ, ವಿಶೇಷಪೂಜೆಗಳು, ಬಲಿಪಾಡ್ಯಮಿ, ಗೋಪೂಜೆ, ಅಂಗಡಿಪೂಜೆ, ಲಕ್ಷ್ಮೀ ಪೂಜೆ ಇತ್ಯಾದಿಗಳು ಮನೆ ಹಾಗೂ ದೇವಸ್ಥಾನಗಳಲ್ಲಿ ನಡೆಯಲಿದೆ. ಹಬ್ಬದ ಸಾಮಗ್ರಿಗಳು, ಪೂಜಾ ಸಾಮಗ್ರಿ ಸಹಿತ ಮಾರಾಟ, ಖರೀದಿ ಭರ್ಜರಿಯಾಗಿ ನಡೆಯಿತು. ಅಂಗಡಿ, ಮುಂಗಟ್ಟು ಮಳಿಗೆಗಳಲ್ಲಿ ಗ್ರಾಹಕರು ಖರೀದಿಗೆ ಮುಗಿ ಬೀಳುತ್ತಿದ್ದರು. ನಗರದ ಹಳೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ಜಂಕ್ಷನ್ನಲ್ಲಿ ಹೂವು ಮಾರಾಟಗಾರರು ದೊಡ್ಡ ಪ್ರಮಾಣದಲ್ಲಿ ಬೀಡುಬಿಟ್ಟಿದ್ದು ಸಾಲುದ್ದಕ್ಕೂ ಹೂವಿನ ವ್ಯಾಪಾರಿಗಳು ಕಂಡು ಬಂದರು.
– ಸಾಲು ರಜೆ, ಊರಿಗೆ ಹೊರಡಲು ಸಿದ್ಧತೆ
ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ರಜೆ ಸೇರಿ ಸಾಲು ರಜೆ ಹಿನ್ನಲೆಯಲ್ಲಿ ಹಬ್ಬಕ್ಕೆ ಊರಿಗೆ ತೆರಳುವವರು ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಬಸ್ ನಿಲ್ದಾಣದ ವಿಚಾರಣೆ ವಿಭಾಗ, ಟಿಕೆಟ್ ಬುಕ್ಕಿಂಗ್ ಕೇಂದ್ರಗಳ ಮುಂದೆ ವಿಚಾರಣೆ, ಟಿಕೆಟ್ ಕಾಯ್ದಿರಿಸಲು ಕಾಯುತಿದ್ದರು. ಈ ಹಿಂದೆ ನಗರದ ಗಲ್ಲಿ-ಗಲ್ಲಿಗಳು ಸಹಿತ ವಿವಿಧ ಅಂಗಡಿಗಳಲ್ಲಿ ಪಟಾಕಿ ವ್ಯಾಪಾರ ನಡೆಯುತಿತ್ತು. ಆದರೀಗ ಅನುಮತಿ ಪಡೆದ ಸ್ಥಳಗಳಷ್ಟೇ ಮಾರಾಟ ನಡೆಯುತ್ತಿದೆ. ಪಟಾಕಿ ಬೆಲೆ ಕೈಸುಡುವಂತಿದೆ ಎಂದು ಖರೀದಿಗಾರರು ಅಭಿಪ್ರಾಯ ಪಡುತ್ತಿದ್ದರು. ಈ ನಡುವೆ ಬಣ್ಣದ ಲೈಟಿಂಗ್, ಅಲಂಕಾರಿಕ ದೀಪಗಳು ಸಹಿತ ಹಣತೆಗೆ ಉತ್ತಮ ಬೇಡಿಕೆ . ಮನೆಗಳಲ್ಲಿ ಹಣತೆಯ ಬೆಳಕು ಮತ್ತಷ್ಟು ಮೆರುಗು ನೀಡಲು ಸಿದ್ಧತೆಗಳಾಗಿವೆ.