ಟಾಪ್ 4 ನ್ಯೂಸ್ ಕರ್ನಾಟಕ
ಯುವ ಜನತೆ ದುರಂತ ಸಾವು!
– ವಿಜಯಪುರ: ಗುಂಡಿಗೆ ಬಿದ್ದು ಮೂವರ ಸಾವು!
– ತುಮಕೂರು: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ!
– ಕೋಲಾರ: ರೈಲಿಗೆ ಸಿಲುಕಿ ಯುವತಿ ಸಾವು
– ವಿಜಯಪುರ: ಮೀನು ಹಿಡಿಯಲು ಹೋದಾಗ ವಿದ್ಯುತ್ ಪ್ರವಹಿಸಿ ಬಾಲಕರಿಬ್ಬರು ಮೃತ್ಯು
NAMMUR EXPRESS NEWS
ವಿಜಯಪುರ: ಜಮೀನಿನಲ್ಲಿ ನೀರು ತುಂಬಿದ್ದ ಆಳವಾದ ಗುಂಡಿಗೆ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿದೆ. ಗುಂಡಿಗೆ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ ಇನ್ನಿಬ್ಬರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ನೀಲಮ್ಮ ಖಿಲಾರಹಟ್ಟಿ (16), ಮುತ್ತಪ್ಪ ಖಿಲಾರಹಟ್ಟಿ (24) ಹಾಗೂ ಶಿವು ಯಾಳವಾರ (25) ಮೃತರು. ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರ ಜಮೀನಿನಲ್ಲಿ ಎಮ್ಮೆ ಮೇಯಿಸಲು ಬಾಲಕಿ ನೀಲಮ್ಮ ಹೋಗಿದ್ದಳು. ಈ ವೇಳೆ ಎಮ್ಮೆಗೆ ನೀರು ಕುಡಿಸಲು ಗುಂಡಿ ಬಳಿ ಬಂದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಇದನ್ನು ಕಂಡು ಆಕೆಯನ್ನು ರಕ್ಷಣೆ ಮಾಡಲು ಬಂದ ಸಂಬಂಧಿಕ ಮುತ್ತಪ್ಪ ಖಿಲಾರಹಟ್ಟಿ ನೀರಿನಲ್ಲಿ ಸಿಲುಕಿದ್ದಾನೆ. ಅವರಿಬ್ಬರೂ ಹೊರ ಬರಲಾರದೇ ಪರದಾಡುತ್ತಿದ್ದಾಗ ಅವರನ್ನು ಕಾಪಾಡಲು ಹೋದ ಶಿವು ಯಾಳವಾರ ಕೂಡ ನೀರು ಪಾಲಾಗಿದ್ದಾನೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಮೂವರ ಶವಗಳನ್ನು ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
– ಬೆಂಗಳೂರು : ತಿಪಟೂರಿನಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು: ಚಲಿಸುತ್ತಿದ್ದ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಯುವತಿ ಸಾವಿಗೆ ಶರಣಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವರಹಳ್ಳಿ ಗ್ರಾಮದ ಸುರೇಶ್ ಎಂಬುವವರ ಪುತ್ರಿ ವರ್ಷಿಣಿ (19), ಮೃತ ವಿದ್ಯಾರ್ಥಿನಿ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುತ್ತಿದ್ದ ವಿದ್ಯಾರ್ಥಿನಿ, ಕಾಲೇಜಿಗೆ ಪ್ರತಿದಿನ ಊರಿನಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ಇಂದು ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರ್ಷಿಣಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದ್ದು, ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಸೀಕೆರೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ತಿಪಟೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಘಟನೆ ಸಂಬಂಧ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ
– ಕೋಲಾರ: ರೈಲಿಗೆ ಸಿಲುಕಿ ಯುವತಿ ಸಾವು
ಕೋಲಾರ: ರೈಲಿಗೆ ಸಿಲುಕಿ ಯುವತಿ ಮೃತಪಟ್ಟಿ ಘಟನೆ ಜಿಲ್ಲೆಯ ಮಾಲೂರು ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಅರಳೇರಿ ಗ್ರಾಮದ ಸಂಧ್ಯಾ (22) ಮೃತ ದುರ್ದೈವಿ. ಫ್ಲಿಪ್ಕಾರ್ಟ್ನಲ್ಲಿ ಉದ್ಯೋಗಿಯಾಗಿದ್ದ ಸಂಧ್ಯಾ, ಬೆಳಗ್ಗೆ ಗ್ರಾಮದಿಂದ ಕೆಲಸಕ್ಕೆ ಎಂದು ಹೊರಟವಳು ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಮಾಲೂರು ರೈಲ್ವೆ ಪೊಲೀಸರಿಂದ ಪರಿಶೀಲನೆ ನಡೆಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
– ವಿಜಯಪುರ: ಮೀನು ಹಿಡಿಯಲು ಹೋದಾಗ ವಿದ್ಯುತ್ ಪ್ರವಹಿಸಿ ಬಾಲಕರಿಬ್ಬರು ಮೃತ್ಯು
ವಿಜಯಪುರ: ಮೀನು ಹಿಡಿಯಲು ಹೋದ ಬಾಲಕರಿಬ್ಬರು ಕರೆಂಟ್ ಶಾಕ್ನಿಂದ ಮೃತಪಟ್ಟಿದ್ದಾರೆ. ರೋಹಿತ್ ಅನೀಲ್ ಚವ್ಹಾಣ್ (8), ವಿಜಯ ಪಿಂಟು ಚವ್ಹಾಣ್ (16) ಮೃತ ದುರ್ದೈವಿಗಳು. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಇಬ್ಬರು ಬಾಲಕರು ದುರ್ಮರಣ ಹೊಂದಿದ್ದಾರೆ. ವಿಜಯಪುರ ಜಿಲ್ಲೆಯ ದ್ಯಾಬೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಕಟ್ ಆಗಿ ನೀರಿನಲ್ಲಿ ಬಿದ್ದಿತ್ತು. ಇದರ ಅರಿವು ಇರದ ಬಾಲಕರಿಬ್ಬರು ಮೀನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಒಮ್ಮೆಲೆ ಇಬ್ಬರು ಮಕ್ಕಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕರ ಮೃತದೇಹವನ್ನು ತಬ್ಬಿಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.