ಟಾಪ್ 5 ನ್ಯೂಸ್
– ಶಾಲೆಯಲ್ಲಿ ನಿಂದನೆ: ವಿದ್ಯಾರ್ಥಿ ಆತ್ಮಹತ್ಯೆ!
– ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಘಟನೆ
– ವಿಜಯಪುರ: ಬಸ್ ಹರಿದು ವ್ಯಕ್ತಿ ಸಾವು
– ಹಾಸನ: ಭಾರಿ ಮಳೆ-ಗಾಳಿಗೆ ಮರ ಬಿದ್ದು ಕಾರು ಜಖಂ
– ಮಂಡ್ಯ : ಮರಳೇಕಾಯಿ ತಿಂದು 8 ಮಕ್ಕಳು ಅಸ್ವಸ್ಥ
– ತುಮಕೂರು: 3 ತಿಂಗಳ ಮಗು ಬಿಟ್ಟು ತಾಯಿ ಪರಾರಿ
NAMMUR EXPRESS NEWS
ವಿಜಯಪುರ: ಬಸ್ ಮೈಮೇಲೆ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ದುರ್ಘಟನೆ ವಿಜಯಪುರ ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಮೃತಪಟ್ಟವರನ್ನು ಅಶೋಕ ಪರ್ಜೆನವರ್ (58) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ಖಾಸಗಿ ಬಸ್, ಸರ್ಕಲ್ನಲ್ಲಿ ರಸ್ತೆ ದಾಟುತ್ತಿದ್ದ ಅಶೋಕ ಮೇಲೆ ಹರಿದಿದೆ. ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
– ಚಿತ್ರದುರ್ಗ: ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಹಿರಿಯೂರಿನಲ್ಲಿ ಘಟನೆ
ಚಿತ್ರದುರ್ಗ: ಶಾಲೆಯಲ್ಲೇ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ನವೋದಯ ಶಾಲೆಯಲ್ಲಿ ನಡೆದಿದೆ. 8ನೇ ತರಗತಿ ಓದುತ್ತಿದ್ದ ಪ್ರೇಮ ಸಾಗರ(13) ಮೃತ ವಿದ್ಯಾರ್ಥಿ. ಹೊಳಲ್ಕೆರೆ ತಾಲ್ಲೂಕಿನ ಕೆಂಗುಂಟೆ ಗ್ರಾಮದವನು. ಪ್ರೇಮ ಸಾಗರ ಮೃತದೇಹವನ್ನು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಹಿಯಾಳಿಸುತ್ತಿದ್ದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಹಾಸನ: ಭಾರಿ ಮಳೆ-ಗಾಳಿಗೆ ಬೃಹತ್ ಗಾತ್ರದ ಮರ ಬಿದ್ದು ಕಾರು ಜಖಂ
ಹಾಸನ: ಭಾರಿ ಮಳೆ-ಗಾಳಿಗೆ ಬೃಹತ್ ಗಾತ್ರದ ಮರವೊಂದು ಧರೆಗುರುಳಿದೆ. ಬಿದ್ದ ರಭಸಕ್ಕೆ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಹಾಸನದ ಕುವೆಂಪುನಗರದಲ್ಲಿ ಘಟನೆ ನಡೆದಿದೆ. ರಾಕೇಶ್ ಎಂಬುವವರು ತಮ್ಮ ಕಾರನ್ನು ಮರದ ಕೆಳಗೆ ನಿಲ್ಲಿಸಿದ್ದರು. ನೋಡನೋಡುತ್ತಿದ್ದಂತೆ ಮರವು ಕಾರಿನ ಮೇಲೆ ಬಿದ್ದು ಪೂರ್ತಿ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನೊಳಗೆ ಯಾರು ಇಲ್ಲದೆ ಇರುವುದರಿಂದ ಅನಾಹುತವೊಂದು ತಪ್ಪಿದೆ. ಸ್ಥಳಕ್ಕೆ ನಗರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆಗೆ ಅಡ್ಡಲಾಗಿ, ಕಾರಿನ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು. ಇತ್ತ ಕೊಪ್ಪಳದಲ್ಲಿ ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ, ಸೋಮವಾರ ಮಧ್ಯಾಹ್ನದ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಅಬ್ಬರಿಸಿದ್ದ.
– ಮಂಡ್ಯ : ಮರಳೇಕಾಯಿ ತಿಂದು 8 ಮಕ್ಕಳು ಅಸ್ವಸ್ಥ
ಮಂಡ್ಯ: ಮರಳೇಕಾಯಿ ತಿಂದು 8 ಮಂದಿ ಮಕ್ಕಳು ಅಸ್ವಸ್ಥರಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಉಪ್ಪಾರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮನೆಯೊಂದರ ಹಿಂದೆ ಬೆಳೆದಿದ್ದ ಮರಳೇಕಾಯಿ ಗಿಡದಲ್ಲಿ ಬಿಟ್ಟ ಕಾಯಿಯನ್ನು ನಿನ್ನೆ ಸಂಜೆ ಆಟವಾಡುತ್ತಿರುವಾಗ ಮಕ್ಕಳು ತಿಂದಿದ್ದರು. ಕಾಯಿ ತಿಂದು ಅಸ್ವಸ್ಥಗೊಂಡ ಮಕ್ಕಳ ಪೈಕಿ ಕೆಲವರಿಗೆ ವಾಂತಿಯಾಗಿದೆ. ಕೂಡಲೇ ಮಕ್ಕಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯ ಚಿಕಿತ್ಸೆಗೆ ಮಕ್ಕಳು ಸ್ಪಂದಿಸುತ್ತಿದ್ದಾರೆ.ಸೃಜನ್ (11), ಜ್ಞಾನವಿ (09) , ಸಿಂಚನ (05), ಆಷಿಕಾ (06), ಭುವನೇಶ್ವರಿ (07), ಚರಣ (09), ಧ್ರುವಚರಣ್ (09), ಚಂದ್ರ (07) ಅಸ್ವಸ್ಥಗೊಂಡ ಮಕ್ಕಳು.
– ತುಮಕೂರು : ಮೂರು ತಿಂಗಳ ಮಗು ಬಿಟ್ಟು ತಾಯಿ ಪರಾರಿ
ತುಮಕೂರು: ತಾಯಿಯೊಬ್ಬಳು ರಸ್ತೆ ಬದಿಯಲ್ಲಿ ಮೂರು ತಿಂಗಳ ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಪ್ರಕರಣ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೆಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಗುವಿನ ಅಳುವಿನ ಶಬ್ದ ಕೇಳಿ ಆಶಾ ಕಾರ್ಯಕರ್ತೆಯೊಬ್ಬರು ಮಗುವನ್ನ ರಕ್ಷಿಸಿದ್ದಾರೆ. ರಾತ್ರಿ ಊಟ ಮಾಡಿ ವಾಕಿಂಗ್ ಮಾಡುತ್ತಿದ್ದ ಆಶಾ ಕಾರ್ಯಕರ್ತೆ ಕಲಾವತಿ ಅವರಿಗೆ ರಸ್ತೆ ಬದಿಯಲ್ಲಿ ಅಳುತ್ತಿದ್ದ ಮಗುವಿನ ಶಬ್ದ ಕೇಳಿಸಿತ್ತು. ಸ್ಥಳಕ್ಕೆ ಹೋದಾಗ, ಮೂರು ತಿಂಗಳ ಮಗುವನ್ನು ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ನೊಣವಿನಕೆರೆ ಪೊಲೀಸರಿಗೆ ಆಶಾ ಕಾರ್ಯಕರ್ತೆ ಕಲಾವತಿ ಮಾಹಿತಿ ನೀಡಿದ್ದಾರೆ. ಆಂಬ್ಯುಲೆನ್ಸ್ ಮೂಲಕ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಮಗು ಕರೆದೊಯ್ಯಲಾಗಿದೆ. ವೈದ್ಯರು ಮಗುವಿನ ಆರೋಗ್ಯ ತಪಾಸಣೆ ನಡೆಸಿದ್ದು, ಆರೋಗ್ಯವಾಗಿರುವ ಮಗು 4.5 ಕೆಜಿಯಷ್ಟು ತೂಕವಿದೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.