ಟಾಪ್ 6 ನ್ಯೂಸ್ ಕರ್ನಾಟಕ
– ಬೆಂಗಳೂರು : ಹೋಂ ಗಾರ್ಡ್ನಿಂದ ತ್ರಿವಳಿ ಕೊಲೆ
– ಚಿತ್ರದುರ್ಗ :ವರದಕ್ಷಿಣೆ ಕಿರುಕುಳಯಿಂದ ಗೃಹಿಣಿ ನೇಣಿಗೆ ಶರಣು
– ಬೀದರ್ : ಬೇರೆ ಜಾತಿಯ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನಿಗೆ ಚಿತ್ರಹಿಂಸೆ ನೀಡಿ ಕೊಲೆ
– ಬಳ್ಳಾರಿ : ತಿರುಪತಿ ಕಾಲ್ತುಳಿತ ಪ್ರಕರಣದಲ್ಲಿ ಬಳ್ಳಾರಿಯ ಮಹಿಳೆ ಸಾವು
– ತುಮಕೂರು : ಕೆಎಸ್ಆರ್ಟಿಸಿಬಸ್ ಡಿಕ್ಕಿಯಿಂದ ಬೈಕ್ ಸವಾರ ಸಾವು
– ಆನೇಕಲ್ : ಕಾಡುಪ್ರಾಣಿ ಮಾಂಸ ಮಾರಾಟದಿಂದ ಇಬ್ಬರ ಬಂಧನ
NAMMUR EXPRESS NEWS
ಬೆಂಗಳೂರು: ಜಾಲಹಳ್ಳಿ ಕ್ರಾಸ್ ಸಮೀಪದ ಚೊಕ್ಕಸಂದ್ರದ ಬಾಡಿಗೆ ಮನೆಯೊಂದರಲ್ಲಿ ಬುಧವಾರ ಸಂಜೆ ಪತ್ನಿ, ಪುತ್ರಿ ಹಾಗೂ ಅತ್ತಿಗೆಯ ಮಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ತ್ರಿವಳಿ ಕೊಲೆಯಿಂದ ಕೃತ್ಯ ನಡೆದ ಮನೆಯ ಸುತ್ತಮುತ್ತಲ ನಿವಾಸಿಗಳು ಆತಂಕಗೊಂಡಿದ್ದಾರೆ. ಪತ್ನಿ ಭಾಗ್ಯಮ್ಮ(38), ಪುತ್ರಿ ನವ್ಯಾ(19) ಹಾಗೂ ಭಾಗ್ಯಮ್ಮ ಅವರ ಅಕ್ಕನ ಮಗಳಾದ ಹೇಮಾವತಿ (22) ಎಂಬವರನ್ನು ಗಂಗರಾಜು ಎಂಬಾತ ಕೊಲೆ ಮಾಡಿದ್ದಾನೆ. ಆರೋಪಿ ಗಂಗರಾಜುನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗರಾಜು, ಪತ್ನಿ ಭಾಗ್ಯಮ್ಮ ಮತ್ತು ಪುತ್ರಿ ನವ್ಯಾ ಜತೆಗೆ ಕಳೆದ ಆರು ವರ್ಷಗಳಿಂದ ಚೊಕ್ಕಸಂದ್ರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಈತ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಪತ್ನಿ ಗೃಹಿಣಿಯಾಗಿದ್ದು, ಪುತ್ರಿ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇನ್ನು ಕೊಲೆಯಾದ ಹೇಮಾವತಿ ಅವರು ಭಾಗ್ಯಮ್ಮ ಅವರ ಅಕ್ಕನ ಮಗಳು. ಇತ್ತೀಚೆಗೆ ವಿಚ್ಛೇದನ ಪಡೆದಿದ್ದ ಹೇಮಾವತಿ ಕೆಲವು ತಿಂಗಳಿಂದ ಚಿಕ್ಕಮ್ಮ ಭಾಗ್ಯಮ್ಮ ಅವರ ಮನೆಯಲ್ಲೇ ನೆಲೆಸಿದ್ದರು. ಜತೆಗೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
– 112ಗೆ ಕರೆ ಮಾಡಿದ್ದ ಆರೋಪಿ:
‘ಮೂವರು ಸತ್ತಿರುವುದು ಖಚಿತವಾದ ಬಳಿಕ ಆರೋಪಿ ಗಂಗರಾಜು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದ. ನಂತರ, ಪೊಲೀಸರಿಗೆ ಶರಣಾಗಲು ಸಿದ್ಧ ಇರುವುದಾಗಿ ಹೇಳಿದ್ದ. ಸಹಾಯವಾಣಿ ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳದ ವ್ಯಾಪ್ತಿ ಹಾಗೂ ಮಾಹಿತಿಯನ್ನು ಹೊಯ್ಸಳ ಗಸ್ತು ಸಿಬ್ಬಂದಿಗೆ ನೀಡಿದ್ದರು. ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ರಕ್ತದ ಮಡುವಿನಲ್ಲಿ ಮೃತದೇಹಗಳು ಬಿದ್ದಿದ್ದವು’ ಎಂದು ಮೂಲಗಳು ತಿಳಿಸಿವೆ.
ಮಚ್ಚು ಹಿಡಿದು ಠಾಣೆಗೆ ಬಂದು ಶರಣು: ಹೊಯ್ಸಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿಯೇ ಆರೋಪಿ ಗಂಗರಾಜು ರಕ್ತದ ಕಲೆ ಅಂಟಿದ್ದ ಮಚ್ಚು ಹಿಡಿದು ಸುಮಾರು 800 ಮೀಟರ್ ದೂರದಲ್ಲಿದ್ದ ಪೀಣ್ಯ ಪೊಲೀಸ್ ಠಾಣೆಗೆ ನಡೆದು ಬಂದಿದ್ದ. ಬಳಿಕ ಮಚ್ಚನ್ನು ಪೊಲೀಸರ ಮುಂದಿಟ್ಟು ಪತ್ನಿ, ಪುತ್ರಿ ಹಾಗೂ ಸಂಬಂಧಿಯನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದ. ಬಳಿಕ, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಂಗರಾಜು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಬುಧವಾರ ಸಂಜೆ ಮಚ್ಚಿನಿಂದ ಮೂವರನ್ನು ಕೊಚ್ಚಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಆರೋಪಿಯ ವಿಚಾರಣೆ ಮುಂದುವರೆದಿದೆ ಎಂದು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದರು.
– ಚಿತ್ರದುರ್ಗ :ವರದಕ್ಷಿಣೆ ಕಿರುಕುಳಯಿಂದ ಗೃಹಿಣಿ ನೇಣಿಗೆ ಶರಣು
ಚಿತ್ರದುರ್ಗ: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿದ್ದು, ಪತ್ನಿ ಸಾವಿನಿಂದ ನೊಂದ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಗಿರಿಜಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ಪ್ರವಲ್ಲಿಕಾ (25) ನೇಣಿಗೆ ಶರಣಾದ ಗೃಹಿಣಿ. ಸುದರ್ಶನ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ ಪತಿ. ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಸುದರ್ಶನ್ ಅಸ್ವಸ್ಥಗೊಂಡಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಪತಿ ಸುದರ್ಶನ್ ರೆಡ್ಡಿ, ಮಾವ ಶಿವಾ ರೆಡ್ಡಿ, ಅತ್ತೆ ರಾಜೇಶ್ವರಿ ಹಾಗೂ ಮತ್ತಿತರೆ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ, ಸಿಪಿಐ ವಸಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಬೀದರ್ : ಬೇರೆ ಜಾತಿಯ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನಿಗೆ ಚಿತ್ರಹಿಂಸೆ ನೀಡಿ ಕೊಲೆ
ಬೀದರ್: ಬೇರೆ ಜಾತಿಯ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ನ ಔರಾದ್ ತಾಲ್ಲೂಕಿನ ಠಾಣಾ ಕುಶನೂರ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಭೇಡಕುಂದಾ ಗ್ರಾಮದ ನಿವಾಸಿ ಸುಮಿತ್ (19) ಜಾತಿ ದ್ವೇಷಿಗಳ ದುಷ್ಕೃತ್ಯದಿಂದ ಪ್ರಾಣ ಕಳೆದುಕೊಂಡ ಯುವಕನಾಗಿದ್ದಾನೆ. ರಕ್ಷಾಳ್ ಗ್ರಾಮದ ಬಾಲಕಿಯನ್ನು ಸುಮಿತ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. “ನಮ್ಮ ಮನೆಗೆ ಬಾ” ಎಂದು ಸುಮಿತ್ ನನ್ನು ಬಾಲಕಿ ಕರೆದಿದ್ದಳು. ಹೀಗಾಗಿ ಸುಮಿತ್ ಆಕೆಯ ಮನೆಗೆ ಹೋಗಿದ್ದ ವೇಳೆ ಹುಡುಗಿಯ ಅಪ್ಪ ಮತ್ತು ಅಣ್ಣ ಹಾಗೂ ಸಂಬಂಧಿಕರು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ.
ಬಳಿಕ ಸುಮಿತ್ ಮನೆಯಿಂದ ಹೊರ ಹೋದ ಬಳಿಕ ಬಾಲಕಿಯ ಅಣ್ಣ ಮತ್ತು ಆತನ ಸ್ನೇಹಿತರು ಮತ್ತೆ ಸುಮಿತ್ ನ ಮೇಲೆ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಸುಮಿತ್ ನ ಮನೆಗೆ ಕರೆ ಮಾಡಿ ಆತನನ್ನು ಕರೆದೊಯ್ಯುವಂತೆ ಹೇಳಿದ್ದಾರೆ ಎಂದು ಮೃತ ಯುವಕ ಕುಟುಂಬಸ್ಥರು ತಿಳಿಸಿದ್ದಾರೆ.
– ಬಳ್ಳಾರಿ : ತಿರುಪತಿ ಕಾಲ್ತುಳಿತ ಪ್ರಕರಣದಲ್ಲಿ ಬಳ್ಳಾರಿಯ ಮಹಿಳೆ ಸಾವು
ಬಳ್ಳಾರಿ : ಆಂಧ್ರ ಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 7 ಮಂದಿಯ ಪೈಕಿ ಒಬ್ಬರು ಬಳ್ಳಾರಿ ಮೂಲದವರಾಗಿದ್ದಾರೆ. ಬಳ್ಳಾರಿ ಮೂಲದ ನಿರ್ಮಲಾ (50) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಉಳಿದ 6 ಮಂದಿ ಮೃತರನ್ನು ವೈಜಾಗ್ನ ರಜನಿ (47), ವೈಜಾಗ್ನ ಲಾವಣ್ಯ (40), ವೈಜಾಗ್ನ ಶಾಂತಿ (30), ಸೇಲಂನ ಮಲ್ಲಿಕಾ (49) ಹಾಗೂ ನರಸಿಪಟ್ಟಣದ ನಾಯ್ಡು ಬಾಬು (59) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರದಿದೆ, ಗುರುವಾರ (ಜ.8) ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ಯೋಜಿಸಿತ್ತು. ಆದರೆ, ಟೋಕನ್ಗಳಿಗಾಗಿ ಬುಧವಾರ ಸಂಜೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಹೊರಗೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದುಬಂದಿದೆ.
– ತುಮಕೂರು : ಕೆಎಸ್ಆರ್ಟಿಸಿಬಸ್ ಡಿಕ್ಕಿಯಿಂದ ಬೈಕ್ ಸವಾರ ಸಾವು
ತುಮಕೂರು : ತಾಲ್ಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ದಬ್ಬೆಘಟ್ಟ ಹೋಬಳಿ ಹಿಂಡುಮಾರನಹಳ್ಳಿ ಗ್ರಾಮದ ನಿವಾಸಿ ದೀಪಕ್ (32) ಮೃತಪಟ್ಟಿದ್ದಾರೆ. ದೀಪಕ್ ಮತ್ತು ಅದೇ ಗ್ರಾಮದ ಪುಟ್ಟಸ್ವಾಮಿ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿರುವ ಸಂಬಂಧ ಮಾಹಿತಿ ನೀಡಲು ಪಟ್ಟಣದ ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಗ್ರಾಮಕ್ಕೆ ಮರಳುವಾಗ ಗೋಣಿ ತುಮಕೂರು ಗ್ರಾಮದ ದೇವಸ್ಥಾನದ ಸಮೀಪ ದಬ್ಬೇಘಟ್ಟದಿಂದ ತುರುವೇಕೆರೆ ಕಡೆಗೆ ಬರುತ್ತಿದ್ದ ಬಸ್ಗೆ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಹಿಂಬದಿ ಸವಾರ ಪಟ್ಟಸ್ವಾಮಿಗೆ ಗಂಭೀರ ಗಾಯಗಳಾಗಿವೆ. ದೀಪಕ್ ವರ್ಷದ ಹಿಂದೆ ವಿವಾಹವಾಗಿದ್ದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ತಿಳಿಸಿದ್ದಾರೆ.
– ಆನೇಕಲ್ : ಕಾಡುಪ್ರಾಣಿ ಮಾಂಸ ಮಾರಾಟದಿಂದ ಇಬ್ಬರ ಬಂಧನ
ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ಕಾಡು ಪ್ರಾಣಿಗಳ ಮಾಂಸ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಡುಪ್ರಾಣಿಗಳ ಮಾಂಸ ಮಾರಾಟ ಮಾಡುತ್ತಿದ್ದ ಬಸವನಪುರದ ಸತ್ಯಪ್ರಕಾಶ್, ವೆಂಕಟೇಶ್ ಅವರನ್ನು ಬನ್ನೇರುಘಟ್ಟ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮತ್ತೊಬ್ಬ ಆರೋಪಿ ಹೊಮ್ಮದೇವನಹಳ್ಳಿ ಜಾನ್ ಪೀಟರ್ ಪರಾರಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹನೂರು ಅರಣ್ಯದಲ್ಲಿ ಜಿಂಕೆ, ಕಾಡುಹಂದಿ, ಮುಳ್ಳುಹಂದಿ ಮಾಂಸ ತಂದು ತಾಲ್ಲೂಕಿನ ಬಸವನಪುರ ಗ್ರಾಮದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಕಾಡುಪ್ರಾಣಿಗಳ ಮಾಂಸವನ್ನು ದುಬಾರಿ ಬೆಲೆಗೆ ಬನ್ನೇರುಘಟ್ಟ ಸುತ್ತಮುತ್ತ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಡಿಆರ್ಎಫ್ಒ ಹರ್ಷವರ್ಧನ್ ಮತ್ತು ಬೀಟ್ ಫಾರೆಸ್ಟರ್ ವಿನಯ್ ಕುಮಾರ್ ಅವರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅರಣ್ಯ ಅತಿಕ್ರಮ ಪ್ರವೇಶ, ಕಾಡು ಪ್ರಾಣಿಗಳ ಅಕ್ರಮ ಬೇಟೆ ಮತ್ತು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.