ಟಾಪ್ 8 ನ್ಯೂಸ್ ಕರ್ನಾಟಕ
ಕೊಪ್ಪಳ : ಬಿಸಿಯೂಟ ಸೇವಿಸಿದ ಮರುಕ್ಷಣವೇ ವಾಂತಿ, ತಲೆನೋವು
– ಆನೇಕಲ್ : ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದವನ ಕೊಚ್ಚಿ ಕೊಲೆ
– ಯಾದಗಿರಿ : ನಡುರಸ್ತೆಯಲ್ಲಿ ಅಕ್ಕನನ್ನು ಅಟ್ಟಾಡಿಸಿ ಸುತ್ತಿಗೆಯಿಂದ ಹೊಡೆದು ಕೊಂದ
– ಗದಗ : ಜಮೀನು ಕೆಲಸ ಮಾಡುತ್ತಿದ್ದ ನರೇಗಾ ಕಾರ್ಮಿಕ ಹೃದಯಾಘಾತದಿಂದ ಸಾವು
– ಕಲಬುರಗಿ: ಕಾರ್ಮಿಕನ ಬಲಿ ಪಡಿಯಿತಾ ರಣ ಬಿಸಿಲು!
– ರಾಯಚೂರು : ಪಾದಯಾತ್ರೆ ವೇಳೆ ನಿಂತು ಹೋಯ್ತು ಯುವಕನ ಹೃದಯದ ಬಡಿತ
– ತುಮಕೂರು : ಬಸ್ಗಳ ಮುಖಾಮುಖಿ ಡಿಕ್ಕಿ, ಗೂಡ್ಸ್ ಲಾರಿ ನಜ್ಜುಗುಜ್ಜು
– ಬಾಗಲಕೋಟೆ :ಹೆದ್ದಾರಿ ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿಯಾಗಿ ವೃದ್ಧೆ ಸಾವು
NAMMUR EXPRESS NEWS
ಗಂಗಾವತಿ: ಬಿಸಿಯೂಟ ಸೇವಿಸಿದ ಬಳಿಕ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ 1 ರಿಂದ 5 ತರಗತಿಯ 32 ಮಕ್ಕಳಲ್ಲಿ ವಾಂತಿ, ತಲೆನೋವು ಕಾಣಿಸಿಕೊಂಡಿದೆ. ಒಬ್ಬರ ನಂತರ ಒಬ್ಬರು ಅಸ್ವಸ್ಥಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ಡಿಎಚ್ಓ ಡಾ. ಲಿಂಗರಾಜ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ನಾಗರಾಜ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತು ಶಾಲೆಯ ಶಿಕ್ಷಕರಿಂದ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಆನೇಕಲ್: ಖಾಕಿ ಪಡೆ ಚುನಾವಣಾ ಕೆಲಸದಲ್ಲಿ ಬ್ಯುಸಿಯಾಗುತ್ತಿದ್ದಂತೆ, ಇತ್ತ ಕ್ರೈಂ ರೇಟು ಹೆಚ್ಚಾಗುತ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಮುತ್ಯಾಲಮ್ಮ ದೇವಾಲಯದ ಬಳಿ ತಡರಾತ್ರಿ ವ್ಯಕ್ತಿಯೊಬ್ಬನ ಬರ್ಬರ ಕೊಲೆಯಾಗಿದೆ. ಒರಿಸ್ಸಾ ಮೂಲದ ದೀಪ್ತಿ ರಂಜನ್ (30) ಹತ್ಯೆಯಾದವನು. ಮಂಗಳವಾರ ರಾತ್ರಿ 1 ಗಂಟೆ ಸುಮಾರಿಗೆ ಕೆಲಸ ಮುಗಿಸಿ ದೀಪ್ತಿ ರಂಜನ್ ವಾಪಸ್ ಆಗುತ್ತಿದ್ದ. ಈ ವೇಳೆ ಎದುರಾದ ಕಿಡಿಗೇಡಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆಗೈದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೃತ್ಯವೆಸಗಿ ಆರೋಪಿಗಳು ಪರಾರಿ ಆಗಿದ್ದಾರೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಕ್ಸ್ಫರ್ಡ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಯಾದಗಿರಿ: ತಮ್ಮನಿಂದಲೇ ಅಕ್ಕನ ಬರ್ಬರ ಕೊಲೆಯಾಗಿದೆ. ಯಾದಗಿರಿ ತಾಲೂಕಿನ ಬೊಮ್ಮರಾಲದೊಡ್ಡಿಯಲ್ಲಿ ಘಟನೆ ನಡೆದಿದೆ. ನರಸಮ್ಮ(65) ಕೊಲೆಯಾದ ಸಹೋದರಿ. ನರಸಮ್ಮಳ ಸಹೋದರ ಸೂಗುರಪ್ಪ ಕೊಲೆ ಆರೋಪಿ ಆಗಿದ್ದಾನೆ. ಮಾನಸಿಕ ಅಸ್ವಸ್ಥನಾಗಿದ್ದ ಸೂಗುರಪ್ಪನನ್ನು ನಸರಮ್ಮಳೇ ನೋಡಿಕೊಳ್ಳುತ್ತಿದ್ದರು. ಇನ್ನೂ ಮನೆಯಲ್ಲಿ ಕೈ-ಕಾಲು ಕಟ್ಟಿ ಕೂರಿಸುತ್ತಿದ್ದರು. ಕೋಪದಲ್ಲಿ ಸರಪಳಿ ಬಿಚ್ಚಿಕೊಂಡು ಕಬ್ಬಿಣ್ಣದ ಸುತ್ತಿಗೆಯಿಂದ ಹೆಂಡತಿಗೆ ಹಾಗೂ ಸಹೋದರಿಗೆ ನರಸಮ್ಮನಿಗೆ ಹೊಡೆದಿದ್ದಾನೆ. ನರಸಮ್ಮ ಈತನಿಂದ ತಪ್ಪಿಸಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಆದರೂ ಬಿಡದ ಸೂಗುರಪ್ಪ ನಡು ರಸ್ತೆಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ. ಇನ್ನೂ ರಸ್ತೆಯಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗದಗ: ನರೇಗಾ ಯೋಜನ ಕಾಮಗಾರಿಗೆ ತೆರಳಿದ್ದ ಕೂಲಿ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಬಸಪ್ಪ ಯಲ್ಲಪ್ಪ ಕುರಹಟ್ಟಿ (55) ಮೃತ ದುರ್ದೈವಿ. ಗ್ರಾಮ ಪಂಚಾಯತ್ನಿಂದ ನೀಡಿದ ನರೇಗಾ ಯೋಜನೆ ಕಾಮಗಾರಿ ಅಡಿ ರೈತರ ಜಮೀನಲ್ಲಿ ಬದು ನಿರ್ಮಾಣದ ವೇಳೆ ಎದೆನೋವು ಕಾಣಿಸಿಕೊಂಡಿದೆ. ಎದೆ ಹಿಡಿದುಕೊಂಡು ಬಸಪ್ಪ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಬಸಪ್ಪನ ಹೃದಯದ ಬಡಿತ ನಿಂತು ಹೋಗಿತ್ತು. ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಗದಗದ ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ನರೇಗಾ ಕೂಲಿ ಕೆಲಸ ಮಾಡುವಾಗ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ನಡೆದಿದೆ. ಶರಣಪ್ಪ ಸಮಗಾರ (42) ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಮೃತಪಟ್ಟವರು.
ಮೇಲ್ನೋಟಕ್ಕೆ ರಣ ಬಿಸಿಲಿಗೆ ಶರಣಪ್ಪ ಸಮಗಾರ ಬಲಿಯಾದರಾ ಎಂಬ ಅನುಮಾನವಿದೆ. ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶರಣಪ್ಪರ ಪತ್ನಿ ಶಂಕಿಸಿದ್ದಾರೆ. ಸದ್ಯ ಶರಣಪ್ಪ ಸಮಗಾರ ಮರಣೋತ್ತರ ಪರೀಕ್ಷೆಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಬಿಸಿಲಿನ ಹೊಡೆತಕ್ಕೆ ಶರಣಪ್ಪನ ಸಾವನ್ನಪ್ಪಿರಬಹುದು ಶಂಕಿಸಲಾಗಿದೆ. ಸದ್ಯ ನರೋಣಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ರಾಯಚೂರು: ಶ್ರೀಶೈಲ ಪಾದಯಾತ್ರೆ ಹೊರಟ್ಟಿದ್ದ ಯುವಕನೊರ್ವ ದಾರಿ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಯಚೂರಿನ ಮಾನ್ವಿ ತಾಲೂಕಿನ ಚಿಕ್ಕ ಕೊಟ್ನೆಕಲ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಮೂಲದ 22 ವರ್ಷದ ಪಾದಯಾತ್ರಾರ್ಥಿ ವಿಶ್ರಾಂತಿಗಾಗಿ ತಂಗಿದ್ದಾಗ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಮ್ಮಡ ಗ್ರಾಮದ ಶ್ರೀಶೈಲ ದಡೂತಿ ಮೃತ ದುರ್ದೈವಿ. ಶ್ರೀಶೈಲ ದಡೂತಿ ಪ್ರತಿ ವರ್ಷದಂತೆ ಗ್ರಾಮಸ್ಥರ ಜತೆಗೂಡಿ ಶ್ರೀಶೈಲಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಕಳೆದ ಸೋಮವಾರದಂದು ಮನೆಯಿಂದ ಪಾದಯಾತ್ರೆ ಹೊರಟ ಶ್ರೀಶೈಲ ದಡೂತಿ ಭಾನುವಾರ ಮಾನ್ವಿ ತಾಲೂಕಿನ ಚಿಕ್ಕಕೊಟ್ನೆಕಲ್ ಗ್ರಾಮಕ್ಕೆ ತಲುಪಿದ್ದರು. ಬಿಸಿಲಿನ ತಾಪಕ್ಕೆ ಸುಸ್ತಾದ ಕಾರಣಕ್ಕೆ ದಾರಿ ಮಧ್ಯೆ ವಿಶ್ರಾಂತಿಗಾಗಿ ಕುಳಿತ್ತಿದ್ದರು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಳಿದ ಪಾದಯಾತ್ರಾರ್ಥಿಗಳಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಾನ್ವಿ ತಾಲೂಕು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತುಮಕೂರು: ಕೆಎಸ್ಆರ್ಟಿಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದಲ್ಲಿ ಅಪಘಾತ ನಡೆದಿದೆ. ಖಾಸಗಿ ಬಸ್ ಪಾವಗಡದಿಂದ ಚಿತ್ರದುರ್ಗದ ಕಡೆ ಹೋಗುತ್ತಿತ್ತು. ಕೆಎಸ್ಆರ್ಟಿಸಿ ಬಸ್ ಚಳ್ಳಕೆರೆಯಿಂದ ಪಾವಗಡ ಕಡೆ ಬರುತ್ತಿತ್ತು. ಕೋಟಗುಡ್ಡ ಗ್ರಾಮದಲ್ಲಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ, ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿ-50ರಲ್ಲಿ ರಸ್ತೆ ದಾಟುತ್ತಿದ್ದಾಗ ಕ್ಯಾಂಟರ್ ಡಿಕ್ಕಿಯಾಗಿ ವೃದ್ಧೆ ಸ್ಥಳದಲ್ಲಿಯೇ ಮೃತಪಟ್ಟಿರುವುದು ಇಳಕಲ್ ಬಳಿ ನಡೆದಿದೆ. ಇಳಕಲ್ ನಿವಾಸಿ ದುರ್ಗಮ್ಮ ಬಾರಿಗಿಡದ (80) ಮೃತರು. ಇತ್ತೀಚೆಗೆ ಇದೇ ಸ್ಥಳದಲ್ಲೇ ಗರ್ಭಿಣಿ ಮೃತಪಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.