ಟಾಪ್ 9 ನ್ಯೂಸ್
– ಕಟ್ಟಡ ಕುಸಿತಕ್ಕೆ 8 ಬಲಿ: ಪರಿಹಾರ ಘೋಷಿಸಿದ ಸಿಎಂ!
– ಬಳ್ಳಾರಿ: ದರ್ಶನ್ಗೆ ಡಿಸ್ಕ್ ಸಮಸ್ಯೆ ಚಿಕಿತ್ಸೆಗೆ ಸೂಚನೆ
– ವೇಶ್ಯಾವಾಟಿಕೆ ಅಡ್ಡೆ: 12 ಅಪ್ರಾಪ್ತೆಯರ ರಕ್ಷಣೆ!
– ಅಕ್ರಮ ಪೊಲೀಸ್ ಆಯ್ತು, ಈಗ ನಕಲಿ ಕೋರ್ಟ್!
– ಆಭರಣ ಪ್ರಿಯರಿಗೆ ಬಿಗ್ ಶಾಕ್: ಬೆಲೆ ಏರಿಕೆ
– ಕೆರೆಗೆ ಇಳಿದ ಆನೆ, ಮೇಲೆ ಕುಳಿತಿದ್ದ ಕಾವಾಡಿಗ ಸಾವು
– ಮಂಗಳೂರು: ಶಾಲಾ ಮಕ್ಕಳಿದ್ದ ವಾಹನ ಅಪಘಾತ: ಸಾವು
– ಬೆಂಗಳೂರು : ತಿಮಿಂಗಿಲದ ವಾಂತಿ ಸಾಗಣೆ: ಅರೆಸ್ಟ್
– ವಿಜಯಪುರ: ರೇಂಜರ್ ಸ್ವಿಂಗ್ನಿಂದ ಬಿದ್ದು ಯುವತಿ ಸಾವು
NAMMUR EXPRESS NEWS
ಬೆಂಗಳೂರು: ಹೆಗಡೆ ನಗರದ ಬಾಬುಸಪಾಳ್ಯದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವನ್ನಪ್ಪಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಅವರು ಮೃತರ ಪ್ರತಿ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಘಟನೆಯಲ್ಲಿ ಗಾಯಗೊಂಡವರಿಗೆ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಒಂದು ವಾರಗಳಿಂದ ಸುರಿಯುತ್ತಿರೋ ಧಾರಾಕಾರ ಮಳೆಯ ಜೊತೆ, ಜೊತೆಗೆ ಸಿಲಿಕಾನ್ ಸಿಟಿ ಒಂದಾದ ಮೇಲೊಂದು ಆಘಾತವನ್ನು ಎದುರಿಸುತ್ತಿದೆ. ನೋಡ ನೋಡ್ತಿದ್ದಂತೆ ಕ್ಷಣಾರ್ಧದಲ್ಲೇ ಕುಸಿದ ಆರು ಅಂತಸ್ತಿನ ಕಟ್ಟಡ ನೆಲಸಮವಾಗಿತ್ತು. ಒಳಗಿದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಕಟ್ಟಡ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
* ದರ್ಶನ್ಗೆ ಡಿಸ್ಕ್ ಸಮಸ್ಯೆ ಚಿಕಿತ್ಸೆಗೆ ಸೂಚನೆ
ಬಳ್ಳಾರಿ: ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಬೆನ್ನು ನೋವಿನ ಎಂಆರ್ಐ, ಸಿಟಿ ಸ್ಕ್ಯಾನಿಂಗ್ ವರದಿ ಬುಧವಾರ ಜೈಲು ಅಧಿಕಾರಿಗಳಿಗೆ ವೈದ್ಯರು ತಲುಪಿಸಿದ್ದಾರೆ. ದರ್ಶನ್ಗೆ ಇತ್ತೀಚೆಗೆ ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ತಜ್ಞ ವೈದ್ಯರು ತಪಾಸಣೆ ಮಾಡಿ ನೀಡಿದ್ದ ವರದಿಯಂತೆ ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ ಎನ್. ಬಸಾರೆಡ್ಡಿ, ನ್ಯೂರೋ ಸರ್ಜನ್ ಡಾ ವಿಶ್ವನಾಥ್ ಅವರ ನೇತೃತ್ವದಲ್ಲಿ ಮಂಗಳವಾರ ಎಂಆರ್ಐ, ಸಿಟಿ ಸ್ಕ್ಯಾನಿಂಗ್ಗೆ ಒಳಪಡಿಸಲಾಗಿತ್ತು. ದರ್ಶನ್ಗೆ ಬೆನ್ನು ನೋವಿನ ಡಿಸ್ಕ್ (ಸಯಾಟಿಕ್) ಎಂಬ ಗಂಭೀರ ಸಮಸ್ಯೆಯಿದ್ದು, ಕೂಡಲೇ ಚಿಕಿತ್ಸೆಗೆ ಒಳಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ವರದಿಯಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಜತೆ ಚರ್ಚಿಸಿ, ವರದಿ ಆಧರಿಸಿ ಸರ್ಜರಿ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
* ವೇಶ್ಯಾವಾಟಿಕೆ ಅಡ್ಡೆ: 12 ಅಪ್ರಾಪ್ತೆಯರ ರಕ್ಷಣೆ
ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯ ವಿವಿಧೆಡೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ, ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 12 ಮಂದಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದಾರೆ. ಐದು ತಿಂಗಳ ಆವಧಿಯಲ್ಲಿ ನಗರ ವ್ಯಾಪ್ತಿ 11 ಕಡೆಯಲ್ಲಿ ಈ ಜಂಟಿ ದಾಳಿ ನಡೆದಿದ್ದು, ಈ ವೇಳೆ 14 ರಿಂದ 17 ವರ್ಷ ವಯಸ್ಸಿನ 12 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ. ಸಂತ್ರಸ್ತ ಬಾಲಕಿಯರಲ್ಲಿ ವಿದೇಶದ ಮಕ್ಕಳು ಸೇರಿದ್ದಾರೆ.
ಅಲ್ಲದೆ 26 ಮಂದಿ ಪಿಂಪ್ಗಳು ಹಾಗೂ ಐವರು ಗ್ರಾಹಕರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಅಪ್ರಾಪ್ತ ಬಾಲಕಿಯರನ್ನು ಸಮಾಜ ಕಲ್ಯಾಣ ಇಲಾಖೆಯ ಪುನರ್ವಸತಿ ಕೇಂದ್ರದ ಸುಪರ್ದಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ನಕಲಿ ಪೊಲೀಸ್ ಆಯ್ತು, ಈಗ ನಕಲಿ ಕೋರ್ಟ್!
ಅಹಮದಾಬಾದ್: ಗಾಂಧಿನಗರದ 37 ವರ್ಷದ ಮೊರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ಎಂಬಾತ ವಾಜ್ಯ ಇತ್ಯರ್ಥಕ್ಕೆ ನಕಲಿ ನ್ಯಾಯಾಧಿಕರಣ ನಡೆಸುತ್ತಿದ್ದ ಆರೋಪದ ಮೇರೆಗೆ ಬಂಧಿತನಾಗಿದ್ದಾನೆ. ಕಾರಂಜ್ ಪೊಂಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 2019 ರಿಂದ 2024ರವರೆಗೆ ನಕಲಿ ಕೋರ್ಟ್ವೊಂದು ನಡೆಸಿ, ತಾನೇ ಜಡ್ಜ್ ಮಾದರಿಯಲ್ಲಿ ವಾದ-ಪ್ರತಿವಾದ ಆಲಿಸಿ ತೀರ್ಪು ನೀಡಿದ ಆರೋಪ ಸ್ಯಾಮ್ಯುಯೆಲ್ ವಿರುದ್ಧ ದಾಖಲಾಗಿದೆ. ಈ ನಕಲಿ
ಕೋರ್ಟ್ ಅನ್ನು ಅಹಮದಾಬಾದ್ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಮೊದಲು ಪತ್ತೆ ಮಾಡಿದ್ದಾರೆ.
ಕೋರ್ಟ್ ಪರಿಸರವನ್ನೇ ಹೋಲುವ ರೀತಿಯಲ್ಲಿ ಸೆಟ್ ನಿರ್ಮಿಸಿದ್ದ ನಕಲಿ ಜಡ್ಜ್ ಸ್ಯಾಮ್ಯುಯೆಲ್ ತನ್ನ ಸುತ್ತಲೂ ವಕೀಲರು, ಕೋರ್ಟ್ ಸಿಬ್ಬಂದಿಯ ಮಾದರಿಯಲ್ಲಿ ಉಡುಪು ಧರಿಸಿದವರನ್ನು ಇರಿಸಿಕೊಂಡಿದ್ದ. ಜನಸಾಮಾನ್ಯರು ಈತನ ನಕಲಿ ಕೋರ್ಟ್ ಪ್ರವೇಶಿಸಿದ ಕೂಡಲೇ ನೈಜ ಕೋರ್ಟ್ನಲ್ಲಿ ಇರುವಂತೆ ಭಾವನೆ ಮೂಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
* ಆಭರಣ ಪ್ರಿಯರಿಗೆ ಬಿಗ್ ಶಾಕ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರ ಭಾರಿ ಏರಿಕೆ ಕಂಡಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ನಡೆದ ವಹಿವಾಟಿನಲ್ಲಿ ಚಿನ್ನದ ದರ ಹತ್ತು ಗ್ರಾಂ ಗೆ 350 ರೂಪಾಯಿಗೆ ಏರಿಕೆಯಾಗಿದ್ದು, 81,000 ರೂ.ಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 1500 ರೂಪಾಯಿ ಹೆಚ್ಚಳವಾಗಿದ್ದು, 1.01 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಸರ್ಕಿಟ್ ಬೋರ್ಡ್, ಎಲೆಕ್ಟ್ರಾನಿಕ್ಸ್, ಸೌರಫಲಕ ತಯಾರಿಕೆಯಲ್ಲಿ ಬಳಕೆ ಮಾಡುವುದರಿಂದ ಬೆಳ್ಳಿಗೆ ಬೇಡಿಕೆ ಇದೆ. ಕೈಗಾರಿಕಾ ವಲಯಗಳಿಂದ ಬೇಡಿಕೆ ಹೆಚ್ಚಾದ ಕಾರಣ ಬೆಳ್ಳಿ ದರದಲ್ಲಿ ಭಾರಿ ಏರಿಕೆ ಕಂಡಿದೆ.
* ಕೆರೆಗೆ ಇಳಿದ ಆನೆ, ಮೇಲೆ ಕುಳಿತಿದ್ದ ಕಾವಾಡಿಗ ಸಾವು
ಬೆಂಗಳೂರು: ಆನೆ ಮೇಲೆ ಕುಳಿತು ಮೈತೊಳೆಯುವ ಸಂದರ್ಭದಲ್ಲಿ ಏಕಾಏಕಿ ಆನೆ ಆಳದ ನೀರಿನೊಳಗೆ ಇಳಿದ ಕಾರಣ ಮೇಲೆ ಕುಳಿತಿದ್ದ ಯುವಕ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ಮಾರ್ಗದ ಸೀಗೆಕಟ್ಟೆ ಕೆರೆಯಲ್ಲಿ ನಡೆದಿದೆ.
ಜೇನುಕುರುಬ ಸಮುದಾಯಕ್ಕೆ ಸೇರಿದ ಮೈಸೂರು ಜಿಲ್ಲೆಯ ಹುಣ ಸೂರು ಮೂಲದ ಗೋಪಾಲ್ (20) ನೀರಿನಲ್ಲಿ ಮುಳುಗಿ ಮೃತಪಟ್ಟ ಕಾವಾಡಿಗ. 10 ವರ್ಷದ ಸಂಪತ್ ಹೆಸರಿನ ಆನೆಯನ್ನು 2 ವರ್ಷದಿಂದ ಗೋಪಾಲ್ ನೋಡಿಕೊಳ್ಳುತ್ತಿದ್ದ.
* ಮಂಗಳೂರು: ಶಾಲಾ ಮಕ್ಕಳಿದ್ದ ರಿಕ್ಷಾ ಮತ್ತು ಪಿಕಪ್ ಡಿಕ್ಕಿ: ಸಾವು
ಮಂಗಳೂರು : ಶಾಲಾ ಮಕ್ಕಳನ್ನು ಕೊಂಡೊಯ್ಯುವ ರಿಕ್ಷಾ ಮತ್ತು ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ 4ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳ್ಮ ಗ್ರಾಮದ ಕಲ್ಪಾದೆ ಎಂಬಲ್ಲಿ ಗುರುವಾರ ಸಂಭವಿಸಿದೆ. ಬಡಕಬೈಲು ನಿವಾಸಿ ಮಹಮ್ಮದ್ ಬಿ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿ ಆಯಿಷಾ ವಹಿಬಾ (11 ) ಮೃತ ವಿದ್ಯಾರ್ಥಿನಿ. ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ಆಟೋ ರಿಕ್ಷಾಗೆ ಕಲ್ಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ ದಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾ ಪಲ್ಟಿಯಾಗಿ ಆಯಿಷಾ ವಹಿಬಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾಳೆ. ರಿಕ್ಷಾದಲ್ಲಿದ್ದ ಇತರ ಮೂವರು ವಿದ್ಯಾರ್ಥಿಗಳು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ.
– ಬೆಂಗಳೂರು : ತಿಮಿಂಗಿಲದ ವಾಂತಿ ಸಾಗಣೆ: ಅರೆಸ್ಟ್
ಬೆಂಗಳೂರಿನಿಂದ ತಮಿಳುನಾಡಿಗೆ ಕಾರಿನಲ್ಲಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ಪೊಲೀಸರು ಕೊಳ್ಳೇಗಾಲದ ಹೊಸ ಅಣಗಳ್ಳಿ ಸಮೀಪ ಬಂಧಿಸಿದ್ದಾರೆ. ಮೈಸೂರು ಆಶೋಕಪುರಂ ನಿವಾಸಿ ವಸಂತ ಕುಮಾರ್ (50), ರಾಮನಗರ ಜಿಲ್ಲೆಯ ಮೂಲದ ವೈರಮುಡಿ (40) ಬಂಧಿತ ಆರೋಪಿಗಳಾಗಿದ್ದಾರೆ. ಸಾಗಾಟದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ವಿಚಾರಣೆಗಿಳಿದಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿ 4.386 ಕೆಜಿ ತಿಮಿಂಗಿಲ ವಾಂತಿ ಅಂದರೆ ಅಂಬರ್ ಗ್ರೀಸ್ ಪತ್ತೆಯಾಗಿದೆ. ಪೊಲೀಸರು ತಿಮಿಂಗಿಲ ವಾಂತಿಯನ್ನು ವಶಪಡಿಸಿಕೊಂಡಿದ್ದು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ವಿಜಯಪುರ: ರೇಂಜರ್ ಸ್ವಿಂಗ್ನಿಂದ ಬಿದ್ದು ಯುವತಿ ಸಾವು!
ವಿಜಯಪುರ: ರೇಂಜರ್ ಸ್ವಿಂಗ್ ಬೆಲ್ಟ್ ಕಟ್ ಆದ ಪರಿಣಾಮ ಯುವತಿಯಿಬ್ಬಳು ಅದರಿಂದ ಕೆಳಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನವಭಾಗ್ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಫಿಶ್ ಟನಲ್ ಎಕ್ಸ್ಪೋದಲ್ಲಿ ಅವಘಡ ಸಂಭವಿಸಿದೆ. ಮೃತ ಯುವತಿಯನ್ನು ನಿಖಿತಾ ಬಿರಾದಾರ್ (21) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ರೇಂಜರ್ ಸ್ವಿಂಗ್ ಆರಂಭವಾಗುತ್ತಿದ್ದಂತೆ ನಿಖಿತಾ ಕುಟುಂಬದವರು ಹಾಗು ಆಕೆ ಗೆಳತಿ ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದವರ ವಿಡಿಯೋ ಮಾಡುತ್ತಿದ್ದರು. ರೇಂಜರ್ ಸ್ವಿಂಗ್ ಆನ್ ಆಗಿ ತೆಲೆ ಕೆಳಗಾಗಿ ಮಾಡುತ್ತಿದ್ದಂತೆ ಅದರಲ್ಲಿದ್ದವರು ಭಯದಿಂದ ಕಿರುಚಾಡಲು ಶುರು ಮಾಡಿದರು.
ರೇಂಜರ್ ಸ್ವಿಂಗ್ನಲ್ಲಿದ್ದವರು ಕೂಗಿಕೊಳ್ಳಲು ಶುರು ಮಾಡುತ್ತಿದ್ದಂತೆ ನಿಖಿತಾ ತಾಯಿ ಗೀತಾ ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ, ಗೀತಾ ಅವರ ಮಾತಿಗೆ ಆಪರೇಟರ್ ಯಾವುದೇ ಬೆಲೆ ಕೊಟ್ಟಿಲ್ಲ. ಈ ವೇಳೆ ನಿಖಿತಾಗೆ ಹಾಕಿದ್ದ ಸೇಪ್ಟಿ ಬೆಲ್ಟ್ ಸಡಿಲಾಗಿ ಕಟ್ ಆಗಿದೆ. ಕೂಡಲೇ ಆಕೆ ಮೇಲಿಂದ ಕೆಳಗೆ ಬಿದ್ದಿದ್ದು, ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.