– ದುಡ್ಡಿನ ಆಸೆಗೆ ಬಿದ್ದ ಶಿಕ್ಷಕಿ, ದುಡ್ಡು ಪಡೆದವನಿಂದಲೇ ಭೀಕರವಾಗಿ ಹತ್ಯೆ!
– ಗ್ಯಾಸ್ ಏಜೆನ್ಸಿಗೆ ನುಗ್ಗಿ 5 ಲಕ್ಷ ರೂ. ಕಳ್ಳತನ; ಸಿಸಿಟಿಯಲ್ಲಿ ಸೆರಯಾದ ದೃಶ್ಯ
– ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ: ಮಹಿಳೆ ನಾಪತ್ತೆಯ ಎರಡನೇ ಪ್ರಕರಣ!
– ಹುಟ್ಟಿದ ಒಂದೇ ದಿನಕ್ಕೆ ಗಂಡು ಮಗುವಿನ ಮಾರಾಟ!
-21ನೇ ಮಹಡಿಯಿಂದ ಜಿಗಿದು ಧಾರವಾಡದ ಟೆಕ್ಕಿ ಸಾವಿಗೆ ಶರಣು!
NAMMUR EXPRESS NEWS
ಧಾರವಾಡ: ಧಾರವಾಡದ ಓಂ ನಗರ ಬಡಾವಣೆಯಲ್ಲಿರುವ ನೆಮ್ಮದಿ ಎನ್ನುವ ಮನೆಯಲ್ಲಿ ನಿವೃತ್ತ ಶಿಕ್ಷಕಿ ಗಿರಿಜಾ ನಡೂರಮಠ ಏಕಾಂಗಿ ಜೀವನ ನಡೆಸುತ್ತಿದ್ದರು. ಗಿರಿಜಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಇತ್ತೀಚೆಗೆ ನಿವೃತ್ತಿಯಾಗಿ ಜೀವನ ನಡೆಸುತ್ತಿದ್ದರು. ನಿವೃತ್ತಿ ಬಳಿಕ ಬಡ್ಡಿ ವ್ಯವಹಾರದ ಮೂಲಕ ಹಣ ಗಳಿಸುವ ಗೋಜಿಗಿಳಿದ ಗಿರಿಜಾ ಡಿಸೆಂಬರ್ 15ರಂದು ಸಾವನ್ನಪ್ಪಿದರು. ಆ ಸಾವು ಮೊದಲು ಸಹಜ ಅಂತಲೇ ಭಾವಿಸಲಾಗಿತ್ತು. 8 ದಿನಗಳ ಬಳಿಕ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮನೆಯಲ್ಲಿ ದೇಹ ಸಿಕ್ಕಿತ್ತು. ಅಮರಗೋಳ ಬಡಾವಣೆಯ ಮಂಜುನಾಥ್ ದಂಡಿನ ಎನ್ನುವ ವ್ಯಕ್ತಿಗೆ 10 ಲಕ್ಷ ನೀಡಿದ್ದ ಗಿರಿಜಾ ನಿತ್ಯ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಆದ್ರೆ ಅದಕ್ಕೆ ಒಪ್ಪದ ಮಂಜುನಾಥ್ ಮನೆಗೆ ಬಂದು ನೀರು ಕೇಳುವ ನೆಪದಲ್ಲಿ ಗಿರಿಜಾ ಹಾಕಿದ್ದ ವೇಲ್ ನಿಂದಲೆ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ರೇಣುಕಾ ಸುಕುಮಾರ, ಹು-ಧಾ ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಆರೋಪಿ ಮಂಜುನಾಥ್ ಹತ್ಯೆ ಮಾಡಿ ಯಾವುದೇ ಒಂದು ಒಂದು ಕ್ಲೂ ಬಿಡದೆ ಎಸ್ಕೇಪ್ ಆಗಿದ್ದ. ಸಾವನ್ನಪ್ಪಿ 8 ದಿನಗಳ ಬಳಿಕ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಧಾರವಾಡದ ವಿದ್ಯಾಗಿರಿಯ ಪೊಲೀಸರು ಪೋಸ್ಟ್ ಮಾರ್ಟಂಗೆ ದೇಹವನ್ನು ಕಳಿಸುತ್ತಾರೆ.
ಭಟ್ಕಳ: ಗ್ಯಾಸ್ ಏಜೆನ್ಸಿಗೆ ನುಗ್ಗಿ 5 ಲಕ್ಷ ರೂ. ಕಳ್ಳತನ; ಸಿಸಿಟಿವಿಯಲ್ಲಿ ಸೆರಯಾದ ದೃಶ್ಯ!
ಉತ್ತರ ಕನ್ನಡ : ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಮಣ್ಕುಳಿ ಪುಷ್ಪಾಂಜಲಿ ಕ್ರಾಸ್ ಸಮೀಪದಲ್ಲಿರುವ ಶ್ರೀ ಮೂಕಾಂಬಿಕಾ ಭಾರತ್ ಗ್ಯಾಸ್ ಏಜೆನ್ಸಿಗೆ ಜನವರಿ 3 ರಂದು, ಮೂವರು ಮುಸುಕುಧಾರಿಗಳು ನುಗ್ಗಿ ಕಳ್ಳತನ ಮಾಡಿದ್ದಾರೆ. ಇಂದು ನಸುಕಿನ ಜಾವ ಮೂವರು ಕಳ್ಳರು ಮುಸುಕು ಹಾಗೂ ಕೈಗೆ ಗ್ಲೌಸ್ ಧರಿಸಿ ಗ್ಯಾಸ್ ಏಜೆನ್ಸಿಯ ಬೀಗ ಮುರಿದು ಒಳ ನುಗ್ಗಿದ್ದರು. ಓರ್ವ ಹೊರಗಡೆ ನಿಂತು ಕಾಯುತ್ತಿದ್ದರೆ, ಇನ್ನಿಬ್ಬರು ಏಜೆನ್ಸಿ ಒಳಗೆ ನುಗ್ಗಿದ್ದರು. ಗ್ಲಾಸ್ ಒಡೆದು ಚೇಂಬರ್ ನಲ್ಲಿದ್ದ ಸುಮಾರು 5 ಲಕ್ಷಕ್ಕೂ ಹೆಚ್ಚು ನಗದು ದೋಚಿ ಪರಾರಿಯಾಗಿದ್ದು, ಗ್ಯಾಸ್ ಏಜೆನ್ಸಿಯನ್ನು ದೋಚಿದ ಕಳ್ಳರ ಕೈಚಳಕದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಕಳೆದ ತಿಂಗಳು ಇದೇ ಭಾಗದಲ್ಲಿ ಗ್ಯಾರೇಜ್ ಒಂದರಲ್ಲಿ ಕಳ್ಳತನವಾಗಿತ್ತು.
ಇದೀಗ ಮತ್ತೊಂದು ಘಟನೆ ನಡೆದಿದ್ದು, ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಎಂದಿನಂತೆ ಏಜೆನ್ಸಿ ಮಾಲೀಕರು ತಮ್ಮ ದಿನನಿತ್ಯದ ವ್ಯವಹಾರದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ನಿನ್ನೆ ಕೆಲಸದ ಒತ್ತಡದಿಂದ ಹಣವನ್ನು ತಮ್ಮ ಗ್ಯಾಸ್ ಏಜೆನ್ಸಿ ಅಂಗಡಿಯಲ್ಲೇ ಇಟ್ಟು ಬಾಗಿಲು ಹಾಕಿ ತೆರಳಿದ್ದರು. ಮುಂಜಾನೆ ಗ್ಯಾಸ್ ಏಜೆನ್ಸಿಗೆ ಬಂದ ಮಾಲೀಕರಿಗೆ ಕಳ್ಳತನವಾಗಿರುವುದು ತಿಳಿದುಬಂದಿದೆ. ಕೂಡಲೇ ಭಟ್ಕಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ!
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಕ್ಯಾಬ್ ಕಂಪನಿಯೊಂದರಲ್ಲಿ ಬುಕಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಮಹಿಳೆ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಆಕೆಯ ಸಹೋದರ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ಪೊಲೀಸರು ಇದೀಗ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಒಂದು ತಿಂಗಳಿನಲ್ಲಿ ಮಹಿಳೆ ನಾಪತ್ತೆಯ ಎರಡನೇ ಪ್ರಕರಣ ಇದಾಗಿದ್ದು ತುಮಕೂರು ಮೂಲದ ನೇತ್ರಾ ಅವರು ಡಬ್ಲ್ಯೂಐಟಿ ಕ್ಯಾಬ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ವಿಮಾನ ನಿಲ್ದಾಣದ ಸಮೀಪದ ಹುಣಸಮಾರನಹಳ್ಳಿಯ ‘ಯಮುನಾ’ ಪಿಜಿಯಲ್ಲಿ ವಾಸಿಸುತ್ತಿದ್ದರು. ಆಕೆ ಪ್ರತಿದಿನ ತನ್ನ ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದರು. ಡಿಸೆಂಬರ್ 29 ರಂದು ಮಧ್ಯಾಹ್ನ ಕರೆ ಮಾಡಿ, ಆ ದಿನ ರಾತ್ರಿ ಡ್ಯೂಟಿಯಲ್ಲಿರುವುದಾಗಿ ತಿಳಿಸಿದ್ದರು.
ಡಿಸೆಂಬರ್ 30 ರಿಂದ, ಕುಟುಂಬದವರು ಆಕೆಯಿಂದ ಯಾವುದೇ ಕರೆಗಳನ್ನು ಸ್ವೀಕರಿಸಲಿಲ್ಲ. ಮನೆಯವರು ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಮುಗಿದಿರಬಹುದು ಎಂದು ಅವರು ಭಾವಿಸಿದ್ದರು. ಅವರು ಡಿಸೆಂಬರ್ 31 ರಂದು ಕರೆ ಮಾಡಿದಾಗಲೂ ಸ್ವಿಚ್ ಆಫ್ ಆಗಿತ್ತು. ಇದು ಅವರನ್ನು ಚಿಂತೆಗೀಡು ಮಾಡಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೋನ್ ಕರೆಗೆ ಸಿಗದ ಕಾರಣ ಏನಾಯಿತು ಎಂದು ಪರಿಶೀಲಿಸಲು ನೇತ್ರಾ ಸಹೋದರ ಮಹೇಶ್ ಕುಮಾರ್ ಜನವರಿ 2 ರಂದು ಕ್ಯಾಬ್ ಸಂಸ್ಥೆಯ ಕಚೇರಿಗೆ ಭೇಟಿ ನೀಡಿ ವಿಚಾರಿಸಿದ್ದರು. ಈ ವೇಳೆ, ನೇತ್ರಾ ರಾತ್ರಿ ಡ್ಯೂಟಿ ಮುಗಿಸಿ ಡಿಸೆಂಬರ್ 29 ರಂದು ಬೆಳಿಗ್ಗೆ 6 ಗಂಟೆಗೆ ಹೊರಟಿದ್ದರು ಎಂಬುದು ಅವರಿಗೆ ತಿಳಿಯಿತು.
ಅವನು ನೇತ್ರಾ ಅವರ ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ವಿಚಾರಿಸಿದಾಗ ಯಾರಿಗೂ ಆಕೆ ಎಲ್ಲಿದ್ದಾರೆ ಎಂಬ ಮಾಹಿತಿ ಇರಲಿಲ್ಲ. ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ನಾಪತ್ತೆ ಎಫ್ಐಆರ್ ದಾಖಲಾಗಿವೆ. ಇಂಡಿಗೋದ ಕಾರ್ಗೋ ವಿಭಾಗದಲ್ಲಿ ಉದ್ಯೋಗಿಯಾಗಿದ್ದ 22 ವರ್ಷದ ಮಹಿಳೆ ನಾಪತ್ತೆಯಾಗಿರುವುದಾಗಿ ಅವರ ತಾಯಿ ನೀಡಿದ ದೂರಿನ ಆಧಾರದಲ್ಲಿ 2023 ರ ಡಿಸೆಂಬರ್ 3ರಂದು ಎಫ್ಐಆರ್ ದಾಖಲಾಗಿತ್ತು. ಡಿಸೆಂಬರ್ 4 ರಂದು, ಕೆಐಎಯಿಂದ ಬಿಹಾರಕ್ಕೆ ತೆರಳಿದ ವ್ಯಕ್ತಿ ಗಮ್ಯಸ್ಥಾನವನ್ನು ತಲುಪಲಿಲ್ಲ. ಮತ್ತು ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿತ್ತು.
ಹುಟ್ಟಿದ ಒಂದೇ ದಿನಕ್ಕೆ ಗಂಡು ಮಗುವಿನ ಮಾರಾಟ
ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಹುಟ್ಟಿದ ಒಂದೇ ದಿನಕ್ಕೆ ಗಂಡು ಮಗುವನ್ನು ಮಾರಾಟ ಮಾಡಿರುವ ಘಟನೆ ಜನವರಿ 4 ರಂದು ನಡೆದಿದೆ. 2023 ರ ನವೆಂಬರ್ 15 ರಂದು ಸಕಲೇಶಪುರ ತಾಲ್ಲೂಕಿನ ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದ ಮಹಿಳೆ ಗಿರಿಜಾ ಮಾರನೇ ದಿನ ನವೆಂಬರ್ 16 ರಂದು ಚಿಕ್ಕಮಗಳೂರು ಮೂಲದ ಉಷಾ ಎಂಬ ಮಹಿಳೆಗೆ ಮಗು ಹಸ್ತಾಂತರ ಮಾಡಿದ್ದಾರೆ. ತನಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆಂದು ಹೆತ್ತ ತಾಯಿಯೇ ಹುಟ್ಟಿದ ಮಾರನೇ ದಿನ ಗಂಡು ಮಗುವನ್ನು ಅನಧಿಕೃತವಾಗಿ ಚಿಕ್ಕಮಗಳೂರಿನ ಮಹಿಳೆಗೆ ಮಾರಾಟ ಮಾಡಿರುವ ಬಗ್ಗೆ ಮಕ್ಕಳ ರಕ್ಷಣ ಘಟಕಕ್ಕೆ ದೂರು ನೀಡಲಾಗಿತ್ತು.
ದೂರು ಆದರಿಸಿ ಪ್ರಕರಣ ಬಯಲಿಗೆಳೆದ ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ನೇತೃತ್ವದ ತಂಡ ಜನವರಿ 2 ರಂದು ಬಂದ ಅಧಿಕೃತ ಮಾಹಿತಿ ಆದರಿಸಿ ಪೊಲೀಸರಿಗೆ ದೂರು ನೀಡಿದ್ದರು. ತಾಯಿ ಮಗುವಿನ ರಕ್ಷಣೆ ಬಗ್ಗೆ ಗಮನಹರಿಸಬೇಕಿದ್ದ ಆಶಾ ಕಾರ್ಯಕರ್ತೆ ಅನಧಿಕೃತ ಮಗು ಮಾರಾಟಕ್ಕೆ ಬೆಂಬಲ ನೀಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಘಟನೆ ಸಂಬಂಧ ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗುವನ್ನು ಕೊಂಡ ಮಹಿಳೆ ಉಷಾ ಹಾಗು ಮಗು ಕೊಡಲು ಪ್ರೇರಣೆ ನೀಡಿದ ಆರೋಪದಲ್ಲಿ ಶ್ರೀಕಾಂತ್ ಹಾಗು ಸುಬ್ರಹ್ಮಣ್ಯ ಎಂಬುವವರನ್ನು ಬಂಧಿಸಲಾಗಿದೆ. ಮಗುವಿಗೆ ಹಾಸನ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಿರುವ ಅಧಿಕಾರಿಗಳು. ಸಕಲೇಶಪುರ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲು
21ನೇ ಮಹಡಿಯಿಂದ ಜಿಗಿದು ಧಾರವಾಡದ ಟೆಕ್ಕಿ ಸಾವಿಗೆ ಶರಣು
ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಅಪಾರ್ಟ್ಮೆಂಟ್ನ 21ನೇ ಮಹಡಿಯಿಂದ ಸಾಫ್ಟ್ವೇರ್ ಉದ್ಯೋಗಿಯೊಬ್ಬ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಧಾರವಾಡದ 29 ವಯಸ್ಸಿನ ಸಾರಂಗ್ ಕುಲಕರ್ಣಿ, ಬೆಳ್ಳಂದೂರು ಸಮೀಪ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಜೀವನ್ ಭೀಮಾ ನಗರದಲ್ಲಿ ಆತನ ಪೋಷಕರು ನೆಲೆಸಿದ್ದು ಈತ ಸರ್ಜಾಪುರ ರಸ್ತೆಯ ಜೈನ್ ಹೈಟ್ಸ್ ಅಪಾರ್ಟ್ಮೆಂಟ್ ತನ್ನ ಫ್ಲಾಟ್ನ ಕೋಣೆ ಬಾಡಿಗೆ ಪಡೆದು ಆತ ಪ್ರತ್ಯೇಕವಾಗಿ ನೆಲೆಸಿದ್ದ. ಕೋಣೆಯಿಂದ ನಸುಕಿನ 4ಗಂಟೆ ಸುಮಾರಿಗೆ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನ ರಕ್ಷಣೆಗೆ ಭದ್ರತಾ ಸಿಬ್ಬಂದಿ ತೆರಳಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಸಾರಂಗ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ