ಟಾಪ್ ನ್ಯೂಸ್ ಕರ್ನಾಟಕ
– ಸಂಸದ ತೇಜಸ್ವಿ ಸೂರ್ಯ, ಸುದ್ದಿತಾಣಗಳ ವಿರುದ್ಧ ಕೇಸ್!
– ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿಯನ್ನು ಜೀವಂತ ಹೂತುಹಾಕಿದರು!
– ಬೆಂಗಳೂರು: ಅಪಹರಣಗೊಂಡ ಹೆಣ್ಣುಮಗು ಪತ್ತೆ
NAMMUR EXPRESS NEWS
ಹಾವೇರಿ: ವಕ್ಫ್ ವಿವಾದಕ್ಕೆ ಸಂಭಂಧಿಸಿದಂತೆ ಸುಳ್ಳು ಸುದ್ದಿ ಹಂಚಿಕೊಂಡ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಎರಡು ಸುದ್ದಿ ತಾಣಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಹಾವೇರಿಯ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನ್ಯೂಸ್ ಮಾನಿಟರಿಂಗ್ ಸೆಲ್ಲಿನಲ್ಲಿ ಕೆಲಸ ಮಾಡುವ ಸುನಿಲ್ ಎನ್ನುವವರು ನೀಡಿದ ದೂರನ್ನು ಆಧರಿಸಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. E-Paper ಕನ್ನಡ ದುನಿಯಾ ಹೆಸರಿನ ಸುದ್ದಿ ತಾಣದಲ್ಲಿ, “”ಬ್ರೇಕಿಂಗ್ : ಜಮೀನಿನ ಪಹಣಿಯಲ್ಲಿ ವಕ್ಷ ಹೆಸರು ನಮೂದು ಹಾವೇರಿಯಲ್ಲಿ ರೈತ ಆತ್ಮಹತ್ಯೆ ಎಂಬ ಶಿರ್ಷಿಕೆ ಅಡಿಯಲ್ಲಿ ಹಾವೇರಿ: ಜಮೀನಿನ ಪಹಣಿಯಲ್ಲಿ ಪಕ್ಷ ಹೆಸರು ನಮೂದಾಗಿದ್ದಕ್ಕೆ ಹಾವೇರಿಯಲ್ಲಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎನ್ನುವ ಸುದ್ದಿ ಪ್ರಕಟವಾಗಿತ್ತು. ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ಚನ್ನಪ್ಪ ಎಂಬುವವರ ಪುತ್ರ ರುದ್ರಪ್ಪ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. 4 ಎಕರೆ ಹೊಲದ ಪಹಣಿಯಲ್ಲಿ ವಕ್ಷ ಹೆಸರು ನಮೂದಾಗಿದ್ದಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಹಿನ್ನಲೆ ಗ್ರಾಮದ ಜನರು ಆಕ್ರೋಶ ಹೊರ ಹಾಕಿದ್ದಾರೆ” ಎಂದು ಸುದ್ದಿ ಮಾಡಲಾಗಿತ್ತು.
ನಂತರ ಇದರ ಸ್ಕ್ರೀನ್ ಶಾಟ್ ಲಗತ್ತಿಸಿ ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದ್ದರು. ಅವರು ತಮ್ಮ ಪೋಸ್ಟಿನಲ್ಲಿ “ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಅವರ ನಿರ್ಧಾರದಿಂದಾಗಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎನ್ನುವ ಅರ್ಥ ಬರುವಂತೆ ಪೋಸ್ಟ್ ಮಾಡಿದ್ದರು. ನಂತರ ಹಾವೇರಿಯ ಪೊಲೀಸ್ ಇಲಾಖೆ ಇದನ್ನು ಸುಳ್ಳು ಎಂದು ಸ್ಪಷ್ಟಪಡಿಸಿತ್ತು. ಇದಾದ ನಂತರ ಸಂಸದ ತಮ್ಮ ಟ್ವೀಟ್ ಅಳಿಸಿದ್ದಾರೆ. ಇದೀಗ ಹಾವೇರಿಯ ಸೆನ್ (CEN) ಠಾಣೆಯಲ್ಲಿ ಸಂಸದ ಹಾಗೂ ಸುದ್ದಿ ಪ್ರಕಟಿಸಿದ ಸುದ್ದಿ ತಾಣಗಳ ವಿರುದ್ಧ BNS 353 (2) ರ ಅಡಿ ಪ್ರಕರಣ ದಾಖಲಿಸಲಾಗಿದೆ.
– ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿಯನ್ನು ಜೀವಂತವಾಗಿ ಹೂತುಹಾಕಿದ ದುರುಳರು
ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿಯನ್ನು ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್ರೆಡ್ಡಿ, ರಮಣ, ಸಲ್ಮಾನ್, ರವಿ ಎಂಬುವವರನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಅಪಹರಣಕ್ಕೊಳಗಾಗಿದ್ದ ಯೋಗ ಶಿಕ್ಷಕಿ ಮೂಲತಃ ದೇವನಹಳ್ಳಿ ತಾಲೂಕಿನವರು. ಮದುವೆಯಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸವಿದ್ದರು. ಶಿಕ್ಷಕಿ ಬಳಿ ಸತೀಶ್ರೆಡ್ಡಿ ಯೋಗ ಕಲಿಯುವುದಕ್ಕೆ ಹೋಗುತ್ತಿದ್ದ. ನಂತರ ಗನ್ ತರಬೇತಿ ನೀಡುವುದಾಗಿ ಮನೆಗೆ ಬಂದಿದ್ದ. ಸತೀಶ್ರೆಡ್ಡಿ ಮಾಜಿ ಸೈನಿಕ ಎನ್ನಲಾಗಿದೆ. ಕೊಪ್ಪಳದಲ್ಲಿ ಕಾರು ಕದ್ದು ಕಿಡ್ನ್ಯಾಪ್ಗೆ ಬಳಸಲಾಗಿತ್ತು. ಯೋಗ ಶಿಕ್ಷಕಿಯ ಕೊಲೆಗೆ ಆಕೆಯ ಪ್ರಿಯಕರ ಸಂತೋಷ್ಕುಮಾರ್ ಪತ್ನಿ ಸುಪಾರಿ ನೀಡಿದ್ದ ಆರೋಪ ಕೇಳಿಬಂದಿದೆ. ಸುಪಾರಿ ಪಡೆದಿದ್ದ ಸತೀಶ್ರೆಡ್ಡಿ & ಗ್ಯಾಂಗ್ನಿಂದ ಅ.23ರಂದು ಡಿಎಸ್ ಮ್ಯಾಕ್ಸ್ ಸನ್ವರ್ತ್ ಅಪಾರ್ಟ್ಮೆಂಟ್ನಿಂದ ಯೋಗ ಶಿಕ್ಷಕಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ. ಸತ್ತಂತೆ ನಟಿಸಿ ಗುಂಡಿಯಿಂದ ಎದ್ದು ಬಂದ ಯೋಗ ಶಿಕ್ಷಕಿ
ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಆದರೆ ಶಿಕ್ಷಕಿ ಒಪ್ಪದಿದ್ದಾಗ ಸ್ನೇಹಿತರ ಕರೆಸಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಶಿಕ್ಷಕಿ ಸತ್ತು ಹೋಗಿದ್ದಾಳೆಂದು ಭಾವಿಸಿ ಗುಂಡಿ ತೋಡಿ ಆಕೆಯ ಮೇಲೆ ಮರದ ಕೊಂಬೆಗಳನ್ನು ಹಾಕಿ ಹೋಗಿದ್ದರು. ಅದುವರೆಗೂ ಸತ್ತಂತೆ ನಟಿಸಿ, ದುಷ್ಕರ್ಮಿಗಳು ಹೋದ ಬಳಿಕ ಗುಂಡಿಯಿಂದ ಎದ್ದು ಹೊರಬಂದಿದ್ದರು. ಬಳಿಕ ಸ್ಥಳೀಯರಿಂದ ಬಟ್ಟೆ ಪಡೆದು ದಿಬ್ಬೂರಹಳ್ಳಿ ಠಾಣೆಗೆ ಆಗಮಿಸಿದ್ದಾರೆ. ಕೊಲೆಗೆ ಯತ್ನ, ಅಪಹರಣ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ದೂರು ನೀಡಿದ್ದಾರೆ. ಮಹಿಳೆ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಬಳಿಕ ವಿಶೇಷ ತನಿಖಾ ತಂಡ ರಚಿಸಿ ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ.
– ಬೆಂಗಳೂರು: ಅಪಹರಣಗೊಂಡ ಹೆಣ್ಣುಮಗುವನ್ನು ಪತ್ತೆ ಹಚ್ಚಿದ ಪೊಲೀಸರು
ಬೆಂಗಳೂರು: ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಹೆಣ್ಣು ಮಗುವನ್ನು ದೇವಯ್ಯ ಪಾರ್ಕ್ ಬಳಿ ಪೊಲೀಸರು ಪತ್ತೆ ಹಚ್ಚಿದ್ದು, ಪೋಷಕರಿಗೆ ಒಪ್ಪಿಸಿದ್ದಾರೆ. ಮಗುವನ್ನು ಕರೆದೊಯ್ದಿದ್ದ ಮಹಿಳೆ ಸುಜಾತ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಎರಡೂವರೆ ವರ್ಷದ ಮಗು ನವ್ಯಳನ್ನು ಈ ಮಹಿಳೆ ಕರೆದೊಯ್ದ ಘಟನೆ ಗುರುವಾರ ಮಲ್ಲೇಶ್ವರಂನ ಪೈಪ್ಲೈನ್ ರಸ್ತೆಯಲ್ಲಿ ನಡೆದಿತ್ತು. ಬೆಳಗ್ಗೆ 9.20ರ ಸುಮಾರಿಗೆ ಪೋಷಕರು ತಮ್ಮ ಮೊದಲ ಮಗುವನ್ನು ಶಾಲೆಗೆ ಕಳುಹಿಸಲು ತಯಾರಿ ನಡೆಸುತ್ತಿದ್ದಾಗ ಹೆಣ್ಣುಮಗು ನಾಪತ್ತೆಯಾಗಿತ್ತು. ಮನೆಯ ಹೊರಗೆ ಆಟವಾಡುತ್ತಿದ್ದ ಮಗುವನ್ನು ಅಪರಿಚಿತ ಮಹಿಳೆಯೊಬ್ಬಳು ಮಾತನಾಡಿಸುತ್ತಾ ಕರೆದೊಯ್ದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೋಷಕರು ನೀಡಿದ ದೂರಿನನ್ವಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.