ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥ
-ಕೊಳೆತ ಆಹಾರ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆ ಸಾವು!
– ಈಜಲು ಹೋಗಿದ್ದ ಇಬ್ಬರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವು
– ಸೂಪರ್ ಸ್ಟಾರ್ ರಜನಿಕಾಂತ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಕಾಸ್ಟಿಂಗ್ ಡೈರೆಕ್ಟರ್
NAMMUR EXPRESS NEWS
ದಾವಣಗೆರೆ: ಪಾನಿಪುರಿ ತಿಂದು 19 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ. ಮಲೆಬೆನ್ನೂರಿನ ಜಾಮಿಯಾ ಮಸೀದಿ ಬಳಿ ಘಟನೆ ನಡೆದಿದ್ದು, ಉಪವಾಸ ಅಂತ್ಯ ಮಾಡಿದ ನಂತರ ಮಸೀದಿ ಮುಂಭಾಗ ಮಾರಾಟ ಮಾಡುತ್ತಿದ್ದ ಪಾನಿಪುರಿ ತಿಂದು 19 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಪಾನಿಪುರಿ ತಿಂದು ಕೆಲವೇ ಹೊತ್ತಿನಲ್ಲಿ ವಾಂತಿಯಾಗಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೂಡಲೇ ಪೋಷಕರು ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 19 ಮಕ್ಕಳ ಪೈಕಿ 4 ಮಕ್ಕಳ ಆರೋಗ್ಯ ಚಿಂತಾಜನಕವಾಗಿದೆ. ಇವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಗುರುಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಳೆತ ಆಹಾರ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆ ಸಾವು!
ಕೊಪ್ಪಳ : ಆನೆಗೊಂದಿ ಉತ್ಸವದಲ್ಲಿ ಉಳಿದ ಆಹಾರ ಪದಾರ್ಥ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆಗಳು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡ ದುರ್ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ಕಡೆಬಾಗಿಲು ಗ್ರಾಮದ ಬಳಿ ನಡೆದಿದೆ. ಆನೆಗೊಂದಿ ಉತ್ಸವಕ್ಕೆ ಬಂದವರಿಗೆ ತಯಾರಿಸಿದ್ದ ಆಹಾರ. ಉತ್ಸವ ಮುಗಿದ ಬಳಿಕ ಉಳಿದ ಆಹಾರ ಪದಾರ್ಥವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಅಲ್ಲೇ ಬಿಸಾಡಿದ್ದಕ್ಕೆ ನಡೆದ ದುರ್ಘಟನೆ. ಕೊಳೆತ ಆಹಾರ ಪದಾರ್ಥ ತಿಂದು ಸಾವನ್ನಪ್ಪಿರುವ ಕುರಿ, ಮೇಕೆಗಳು. ಮೂಕಪ್ರಾಣಿಗಳ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುರಿಗಾಯಿಗಳುಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಜಲು ಹೋಗಿದ್ದ ಇಬ್ಬರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವು
ಬೆಂಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. ದಕ್ಷಿಣ ಬೆಂಗಳೂರಿನ ಕಗ್ಗಲೀಪುರ ಬಳಿಯ ಅಗರ ಕೆರೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ವರದಿಗಳು ತಿಳಿಸಿವೆ. ನವೀನ್ ಮತ್ತು ಪೃಥ್ವಿರಾಜ್ (16) ಮೃತಪಟ್ಟ ವಿದ್ಯಾರ್ಥಿಗಳು. ಒಂಭತ್ತು ಮಂದಿ ಸ್ನೇಹಿತರೊಂದಿಗೆ ಈ ಇಬ್ಬರೂ ಕೆರೆಗೆ ಈಜಲು ತೆರಳಿದ್ದರು. ಮಧ್ಯಾಹ್ನದ ಸುಮಾರಿಗೆ ಈಜಲು ಮುಂದಾದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ನೇಹಿತರು ಇವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು, ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ತುರ್ತು ಸೇವಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಈ ದುರ್ಘಟನೆಯ ನಂತರ ಕಗ್ಗಲಿಪುರ ಪೊಲೀಸರು ಅಸ್ವಾಭಾವಿಕ ಮರಣ ವರದಿ (ಯುಡಿಆರ್) ಪ್ರಕರಣ ದಾಖಲಿಸಿದ್ದಾರೆ. ಎಲ್ಲಾ ಬಾಲಕರು ಕೆಂಗೇರಿ ಸರ್ಕಾರಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಕಾಸ್ಟಿಂಗ್ ಡೈರೆಕ್ಟರ್
ಬೆಂಗಳೂರು: ನಟಿ ಆಗಬೇಕೆಂಬ ಮಹಾದಾಸೆಗೆ ಬಿದ್ದ ಯುವತಿಯೊಬ್ಬಳು ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದಾಳೆ. ಸ್ಟಾರ್ ನಟರ ಹೆಸರೇಳಿಕೊಂಡು ವ್ಯಕ್ತಿಯೊಬ್ಬ ಯುವತಿಯಿಂದ ಹಣ ಸುಲಿಗೆ ಮಾಡಿದ್ದಾನೆ. ರಜನಿಕಾಂತ್ ಅವರ ಹೊಸ ಸಿನಿಮಾ Thalaiver 171- code red ಸಿನಿಮಾ ಹೆಸರು ಬಳಸಿಕೊಂಡು ಮೋಸ ಮಾಡಲಾಗಿದೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂಬಾತ ರಜನಿಕಾಂತ್ ಚಿತ್ರದಲ್ಲಿ ಪಾತ್ರವೊಂದು ಖಾಲಿ ಇದೆ ಎಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಹರಿಬಿಟ್ಟಿದ್ದ. ಇದನ್ನು ನೋಡಿ ಯುವತಿಯೊಬ್ಬಳು ಸುರೇಶ್ ಕುಮಾರ್ನನ್ನು ಸಂಪರ್ಕ ಮಾಡಿದ್ದಳು. ನಂತರ ಕಾಸ್ಟಿಂಗ್ಗೆ ಇಷ್ಟು ಹಣ ಖರ್ಚಾಗುತ್ತೆ ಎಂದು ಸಬೂಬು ಹೇಳಿ, ಹಂತ ಹಂತವಾಗಿ 3,94,000 ರೂ. ಹಣವನ್ನು ದೋಚಿದ್ದಾನೆ.
ಇತ್ತ ಯುವತಿಯಿಂದ ಹಣ ಸುಲಿಗೆ ಮಾಡಿ, ಅವಕಾಶವನ್ನು ಕೊಡದೆ, ಹಣವನ್ನೂ ವಾಪಾಸ್ ಕೊಡದೆ ಪರಾರಿ ಆಗಿದ್ದಾನೆ. ಇತ್ತ ಹಣವೂ ಇಲ್ಲದೆ ಅವಕಾಶವೂ ಇಲ್ಲದೇ ಮೋಸ ಹೋದ ಯುವತಿ ಕಂಗಲಾಗಿದ್ದಾಳೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ವಿರುದ್ಧ ಐಟಿ ಆಕ್ಟ್ ನಡಿ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.