ಪತ್ನಿಯ ಜೊತೆ ಮಾತನಾಡಿದಕ್ಕೆ ಯುವಕನ ಮೇಲೆ ಅಟ್ಯಾಕ್!
– ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಘಟನೆ
– ಉಡುಪಿ: ಗ್ರಾಹಕರ ವೇಷದಲ್ಲಿ ಬಂದು ಚಿನ್ನಾಭರಣ ಎಗರಿಸಿ ಪರಾರಿಯಾದ ಬುರ್ಖಾಧಾರಿ ಮಹಿಳೆಯರು
– ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿ ಬಳಿ ಕಾಡ್ಗಿಚ್ಚು: 5 ಎಕರೆ ಹುಲ್ಲುಗಾವಲು ಭಸ್ಮ
NAMMUR EXPRESS NEWS
ಶಿವಮೊಗ್ಗ: ನನ್ನ ಹೆಂಡ್ತಿ ಜತೆ ನಿಂಗೇನೋ ಕೆಲಸ ಎಂದು ಕೇಳಿ ವ್ಯಕ್ತಿಯೊಬ್ಬ ಇಬ್ಬರು ಯುವಕರ ಮೇಲೆ ದಾಳಿ ಮಾಡಿದ್ದಾನೆ. ಕತ್ತಿ ಮತ್ತು ರಾಡ್ನಿಂದ ಮೊದಲು ಯುವಕನ ಕಾರಿನ ಮೇಲೆ ದಾಳಿ ಮಾಡಿದ ವ್ಯಕ್ತಿ, ಯುವಕ ಮನೆಯಿಂದ ಹೊರಬರುತ್ತಿದ್ದಂತೆಯೇ ಆತನ ಮೇಲೂ ಎರಗಿದ್ದಾನೆ. ಈ ಘಟನೆ ನಡೆದಿರುವುದು ಶಿವಮೊಗ್ಗ ಜಿಲ್ಲೆಯ ಸಾಗರದ ಬೆಳಲಮಕ್ಕಿಯಲ್ಲಿ ನಡೆದಿದೆ. ರವಿ ಕುಮಾರ್ ಎಂಬಾತ ಪತ್ನಿ ಜತೆ ಒಂದು ಮನೆಯಲ್ಲಿ ವಾಸವಾಗಿದ್ದ. ಅಲ್ಲೇ ಪಕ್ಕದ ಮನೆಯಲ್ಲಿ ನವೀನ್ ಎಂಬಾತ ವಾಸವಾಗಿದ್ದ. ನವೀನ್ ತನ್ನ ಪತ್ನಿ ಜತೆ ಮಾತನಾಡುತ್ತಿರುವುದು ರವಿ ಕುಮಾರ್ ಗಮನಕ್ಕೆ ಬಂದಿತ್ತು. ಈ ವಿಚಾರದಲ್ಲಿ ಮನೆಯಲ್ಲೂ ಮಾತು, ಚಕಮಕಿ ನಡೆದಿತ್ತು.
ಈ ನಡುವೆ ರವಿ ಕುಮಾರ್ ಸಿಟ್ಟಿನಿಂದ ನವೀನ್ ಕುಮಾರ್ ಮನೆಯ ಬಳಿ ಹೋಗಿದ್ದಾನೆ. ಮೊದಲು ಮನೆಯ ಹೊರಗಿದ್ದ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದಾನೆ. ಕತ್ತಿ ಹಾಗೂ ರಾಡ್ನಿಂದ ನವೀನ್ ಕಾರಿಗೆ ಹಾನಿ ಮಾಡಿದ್ದಾರೆ. ಕಾರಿನ ಗಾಜು ಒಡೆಯುತ್ತಿರುವುದನ್ನು ತಿಳಿದ ನವೀನ್ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ರವಿ ಕುಮಾರ್ ಆತನ ಮೇಲೆ ನೇರ ದಾಳಿ ಮಾಡಿದ. ರವಿ ಕುಮಾರ್ ದಾಳಿ ಮಾಡುತ್ತಿರುವುದನ್ನು ನೋಡಿ ನವೀನ್ನ ಸ್ನೇಹಿತ ಧರೇಶ್ ಅಲ್ಲಿಗೆ ಓಡಿ ಬಂದ. ಆಗ ರವಿ ಕುಮಾರ್ ಆತನ ಮೇಲೂ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ನವೀನ್ ಹಾಗೂ ಧರೇಶ್ ಗೆ ಗಾಯಗಳಾಗಿವೆ. ನವೀನ್ಗೆ ಸ್ವಲ್ಪ ಹೆಚ್ಚೇ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೊಬ್ಬ ಗಾಯಾಳು ಧರೇಶ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ರವಿ ಕುಮಾರ್ ವಶಕ್ಕೆ ಪಡೆದ ಪೊಲೀಸರು ಸಾಗರ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಮ್ಮಣ್ಣುಗುಂಡಿ ಬಳಿ ಕಾಡ್ಗಿಚ್ಚು: 5 ಎಕರೆ ಹುಲ್ಲುಗಾವಲು ಭಸ್ಮ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಕೆಮ್ಮಣ್ಣುಗುಂಡಿ ಪ್ರವಾಸಿ ತಾಣದಲ್ಲಿನ ಪರ್ವತ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಬೆಂಕಿಗೆ ಕಿಡಿಗೇಡಿಗಳು ಕಾರಣ ಎನ್ನಲಾಗುತ್ತಿದೆ. ಕಾಡ್ಗಿಚ್ಚಿಗೆ ಶೋಲಾರಣ್ಯ ಗುಡ್ಡದಲ್ಲಿ ನೂರಾರು ಎಕರೆ ಪ್ರದೇಶ ನಾಶವಾಗಿದೆ. ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು. ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಕಾಡಿಚ್ಚು ಕಂಡು ಬರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಅರಣ್ಯ ಪ್ರದೇಶದತ್ತ ತೆರಳುವ ಪ್ರವಾಸಿಗರಲ್ಲಿ ಈ ಸಂಬಂಧ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದೆ.
ಗ್ರಾಹಕರ ವೇಷದಲ್ಲಿ ಬಂದು ಚಿನ್ನಾಭರಣ ಎಗರಿಸಿ ಪರಾರಿಯಾದ ಬುರ್ಖಾಧಾರಿ ಮಹಿಳೆಯರು
ಉಡುಪಿ: ಗ್ರಾಹಕರ ವೇಷದಲ್ಲಿ ಜ್ಯುವೆಲ್ಲರಿಯೊಂದಕ್ಕೆ ಬಂದಿರುವ ಮೂವರು ಬುರ್ಖಾಧಾರಿ ಮಹಿಳೆಯರು ನಕಲಿ ಚಿನ್ನಾಭರಣವನ್ನು ಇಟ್ಟು ಲಕ್ಷಾಂತರ ರೂಪಾಯಿ ಮೌಲ್ಯದ ಅಸಲಿ ಚಿನ್ನಾಭರಣ ಎಗರಿಸಿ ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಕನಕದಾಸ ರಸ್ತೆಯಲ್ಲಿನ ನಿತ್ಯಾನಂದ ಎಂಬವರ ಮಾರುತಿ ಜುವೆಲ್ಲರಿಗೆ ಅಂದಾಜು 35ರಿಂದ 45ವರ್ಷ ಪ್ರಾಯದ ಮೂವರು ಬುರ್ಖಧಾರಿ ಮಹಿಳೆಯರು ಫೆ.18ರಂದು ಗ್ರಾಹಕರಂತೆ ಬಂದಿದ್ದಾರೆ. ಇವರು 15.800 ಗ್ರಾಂ ತೂಕದ ಒಂದು ಚೈನ್ ಹಾಗೂ 10.150 ಗ್ರಾಂ ತೂಕದ ಬ್ರಾಸ್ಟೈಟ್ ಖರೀದಿಸಿದ್ದಾರೆ.
ಅದಕ್ಕೆ ಬದಲಾಗಿ ಮಹಿಳೆಯರು ತಮ್ಮ ಬಳಿಯಿದ್ದ ಹಳೆಯ 31.490 ಗ್ರಾಂ ತೂಕದ ಒಂದು ನೆಕ್ಸಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿದ್ದಾರೆನ್ನಲಾಗಿದೆ. ಇದರಲ್ಲಿ 48,771 ರೂ. ಉಳಿಕೆ ಹಣದೊಂದಿಗೆ 19,000 ರೂ. ಹಣವನ್ನು ನಗದಾಗಿ ಪಡೆದುಕೊಂಡು ಅಂಗಡಿಯಿಂದ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ವ್ಯವಹಾರದ ಸಂದರ್ಭ ಚೌಕಾಸಿ ಮಾಡಿದ ಮಹಿಳೆಯರು ನಿತ್ಯಾನಂದರ ಗಮನವನ್ನು ಬೇರೆಡೆಗೆ ಸೆಳೆದು, ಪರೀಕ್ಷಿಸಲು ನೀಡಿದ್ದ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನಾಭರಣಗಳನ್ನು ನೀಡಿ 1,98,923ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.