ಟಾಪ್ ನ್ಯೂಸ್ ಕರ್ನಾಟಕ
ದರ್ಶನ್ ಕೈದಿ ನಂಬರ್ ಹಾಕೊಂಡ್ರೆ ಕೇಸ್!
– 6106 ಸ್ಟಿಕ್ಕರ್ಗಳಿಗೆ ಡಿಮ್ಯಾಂಡ್: ಏನಿದು ಪ್ರಕರಣ?
– ಎಣ್ಣೆ ಕುಡ್ಕೊಂಡ್ ದರ್ಶನ್ ನೋಡಲು ಬಂದ ಅಭಿಮಾನಿ!
– ಮರದಡಿ ಕಿವಿಗೆ ಕುಟುಕಿದ ಹಾವು: ವಿಷವೇರಿ ಸಾವು
– ಆಟವಾಡುತ್ತಿದ್ದ 6ರ ಬಾಲಕಿ ಮೇಲೆ 17ರ ಬಾಲಕನಿಂದ ರೇಪ್!
– ಕೋತಿಯ ಹುಚ್ಚಾಟಕ್ಕೆ ಸಂಕಷ್ಟ: 17 ಜನರಿಗೆ ಕಚ್ಚಿದ ಕೋತಿ!
NAMMUR EXPRESS NEWS
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ದರ್ಶನ್ಗೆ ಜೈಲಿನಲ್ಲಿ ಖೈದಿ ನಂಬರ್ 6106 ಅನ್ನು ನೀಡಲಾಗಿದೆ. ಈ ನಂಬರ್ ಅನ್ನೇ ಸ್ಟಿಕರ್ ಮಾಡಿಕೊಂಡಿರುವ ಫ್ಯಾನ್ಸ್ ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ. ಇದೀಗ ನಂಬರ್ ಪ್ಲೇಟ್ ಮರೆಮಾಚಿ ಸ್ಟಿಕ್ಕರ್ ಅಂಟಿಸಿದವರಿಗೆ ಸಂಕಷ್ಟ ಎದುರಾಗಿದೆ.ರೂಲ್ಸ್ ಬ್ರೇಕ್ ಮಾಡಿದರೆ ಕೇಸ್ ಬೀಳುತ್ತೆ ಎಂಬ ಎಚ್ಚರಿಕೆಯನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿದ್ದಾರೆ.
ಯಾವುದೇ ಕಾರಣಕ್ಕೂ ವಾಹನಗಳ ನಂಬರ್ ಪ್ಲೇಟ್ ಮರೆಮಾಚುವಂತಿಲ್ಲ. ನಂಬರ್ ಪ್ಲೇಟ್ ಇರುವ ಕಡೆ ಸ್ಟಿಕ್ಕರ್ಗಳನ್ನು ಅಂಟಿಸುವಂತಿಲ್ಲ. ಈ ರೀತಿ ಮಾಡಿದರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಖೈದಿ ನಂಬರ್ ಸ್ಟಿಕ್ಕರ್ ಅಂಟಿಸಿ ನಂಬರ್ ಪ್ಲೇಟ್ ಮರೆ ಮಾಚಿರುವವರ ವಿರುದ್ಧ ಕೇಸ್ ದಾಖಲಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಡಿಫೆಕ್ಟಿವ್ ನಂಬರ್ ಪ್ಲೇಟ್ ಅಡಿ ಕೇಸ್ ದಾಖಲಾಗುತ್ತದೆ.
ದರ್ಶನ್ ಭೇಟಿಯಾಗಲು ಅಭಿಮಾನಿಯ ರಂಪಾಟ
ದರ್ಶನ್ ಭೇಟಿ ಮಾಡಬೇಕೆಂದು ಅಭಿಮಾನಿಯೊಬ್ಬ ರಂಪಾಟವಾಡಿರುವುದು ಕಂಡುಬಂದಿದೆ. ಜೈಲ್ ಚೆಕ್ ಪೋಸ್ಟ್ ಬಳಿ ರಸ್ತೆಯಲ್ಲಿ ಕುಳಿತ ಅಭಿಮಾನಿ, ದರ್ಶನ್ ನೋಡಬೇಕೆಂದು ಕಣ್ಣೀರು ಹಾಕಿದ್ದಾನೆ. ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿ, ದರ್ಶನ್ ನೋಡಲೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಆತನನ್ನು ಮನವೊಲಿಸಲು ಪೊಲೀಸರು ಹೈರಾಣಾದರು.
ಮರದಡಿ ಕುಳಿತಾಗ ಕಿವಿಗೆ ಕುಟುಕಿದ ಹಾವು, ವಿಷವೇರಿ ಸಾವು
ಕಲಬುರಗಿ: ಕಿವಿಗೆ ಹಾವು ಕಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ವಿಜಯಲಕ್ಷ್ಮಿ ತೆಳಗೇರಿ (44) ಮೃತ ದುರ್ದೈವಿ. ಕಲಬುರಗಿಯ ಸೂಗೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ. ಚಿತ್ತಾಪುರ ತಾಲೂಕಿನ ಸೂಗೂರು(N)ಗ್ರಾಮದ ವಿಜಯಲಕ್ಷ್ಮಿ ಕೂಲಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ದಿಢೀರ್ ಮಳೆ ಶುರುವಾಗಿತ್ತು. ಹೀಗಾಗಿ ಮಳೆ ನಿಂತ ಮೇಲೆ ಮನೆಗೆ ಹೋಗೋಣವೆಂದು ಮರದಡಿ ನಿಂತು ಆಸರೆ ಪಡೆದಿದ್ದರು.
ಆದರೆ ಹಾವು ಮರದಲ್ಲಿ ಇರುವುದನ್ನು ಗಮನಿಸಿದೇ ಮರದ ಕೆಳಗೆ ಆಸರೆ ಪಡೆದಿದ್ದಾರೆ. ಈ ವೇಳೆ ಮಹಿಳೆಯ ಕಿವಿಗೆ ಹಾವು ಕಚ್ಚಿದ್ದು, ಅಸ್ವಸ್ಥಗೊಂಡ ವಿಜಯಲಕ್ಷ್ಮಿ ಕುಸಿದು ಬಿದ್ದಿದ್ದಾರೆ. ಅಲ್ಲಿದ್ದವರು ವಿಜಯಲಕ್ಷ್ಮಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆದಾಗಲೇ ಹಾವಿನ ವಿಷವೇರಿದ್ದರಿಂದ ಆಕೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
6 ವರ್ಷದ ಬಾಲಕಿ ಮೇಲೆ 17 ವರ್ಷದ ಬಾಲಕನಿಂದ ಅತ್ಯಾಚಾರ
ಚಿಕ್ಕಬಳ್ಳಾಪುರ: ಮನೆ ಮುಂದೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯನ್ನು ಕರೆದೊಯ್ದ 17 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕಿ ಒಬ್ಬಳೇ ಆಟವಾಡುತ್ತಿದ್ದನ್ನು ಗಮನಿಸಿದ 17ರ ಪೋರ ತಿಂಡಿ ಕೊಡಿಸುವುದಾಗಿ ಪುಸಲಾಯಿಸಿದ್ದಾನೆ. ತಿಂಡಿ ಆಸೆಗೆ ಆತನೊಂದಿಗೆ ಬಾಲಕಿ ಹೋಗಿದ್ದಾಳೆ. ಆದರೆ ಅಂಗಡಿ ಕರೆದುಕೊಂಡು ಹೋಗದೇ ಬಾಲಕಿಯನ್ನು ತನ್ನ ಮನೆಯೊಳಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಬಳಿಕ ಈ ವಿಚಾರವನ್ನು ಯಾರಿಗೂ ಹೇಳದಂತೆ ವಾಪಸ್ ಬಾಲಕಿಯನ್ನು ಕಳಿಸಿದ್ದಾನೆ. ಆದರೆ ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಗಮನಿಸಿದ ಪೋಷಕರು ವಿಚಾರಿಸಿದ್ದಾರೆ. ಆಗ ಈ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬಾಲಕಿ ಪೋಷಕರು ದೂರು ನೀಡಿದ್ದು, ಅತ್ಯಾಚಾರವೆಸಗಿದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
– ಕೊಪ್ಪಳ: ಕೋತಿಯ ಹುಚ್ಚಾಟಕ್ಕೆ ಜನರಿಗೆ ಸಂಕಷ್ಟ
ಕೊಪ್ಪಳ: ಕೋತಿಯ ಹುಚ್ಚಾಟಕ್ಕೆ ಜನರಿಗೆ ಸಂಕಷ್ಟ ಎದುರಾಗಿದೆ. 15ಕ್ಕೂ ಹೆಚ್ಚು ಜನರಿಗೆ ಕೋತಿ ದಾಳಿ ಮಾಡಿದ್ದು, ಗಾಯಗೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಾಬುಸಾಬ ಪಿಂಜಾರ, ದೇವಪ್ಪ ಕಂಬಾರ, ಮಲ್ಲಪ್ಪ ಅಗಸಿಮುಂದಿನ, ಅಡಿವೆಪ್ಪ ಚಳ್ಳಾರಿ, ಶಂಕ್ರಮ್ಮ ಬೆಣಕಲ್ ಸೇರಿದಂತೆ 15 ಕ್ಕೂ ಹೆಚ್ಚು ಜನರಿಗೆ ಕೋತಿ ಕಡಿದಿದೆ. ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಬೋನು ಇರಿಸಿ ಕೋತಿಗೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.