ಟ್ರಕ್ಕಿಂಗ್ ಕೂಡ ಇನ್ನು ಆನ್ಲೈನ್!
– ಚಾರಣಪಥಗಳಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ಗೆ ಶೀಘ್ರ ಚಾಲನೆ
– 5 ವರ್ಷಗಳಲ್ಲಿ 25 ಕೋಟಿ ಸಸಿ ನೆಡುವ ಗುರಿ: ಸಚಿವ ಈಶ್ವರ ಖಂಡ್ರೆ
– ಇರುವ ವೃಕ್ಷ ಸಂರಕ್ಷಣೆ ಮಾಡೋಣ ಎಂದ ಡಾ.ವೀರೇಂದ್ರ ಹೆಗ್ಗಡೆ
NAMMUR EXPRESS NEWS
ಮಂಗಳೂರು: ರಾಜ್ಯದ ವಿವಿಧ ಚಾರಣ ಪಥಗಳಿಗೆ ಜುಲೈ 3ನೇ ವಾರದಲ್ಲಿ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಮಂಗಳೂರಿನ ಪಡೀಲ್ನ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ 26ರಂದು ಕುಮಾರ ಪರ್ವತಕ್ಕೆ ಸಾವಿರಾರು ಚಾರಣಿಗರು ಒಂದೇ ದಿನ ಲಗ್ಗೆ ಇಟ್ಟು ಗೊಂದಲ ಉಂಟಾದ ಹಿನ್ನೆಲೆ ಸ್ಥಗಿತಗೊಳಿಸಲಾದ ಚಾರಣಕ್ಕೆ ಈ ಆಗಸ್ಟ್ ನಿಂದ ಮರು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಾಮಾನ್ಯವಾಗಿ ಮಳೆಗಾಲದಲ್ಲಿ ಯಾವುದೇ ಚಾರಣ ಪಥಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಕಾರಣ ಚಾರಣಿಗರು ಅಪಾಯಕ್ಕೆ ಈಡಾಗುವ ಸಂಭವ ಹೆಚ್ಚಾಗಿರುತ್ತದೆ. ಜೊತೆಗೆ ಇಲ್ಲಿನ ಜೀವರಾಶಿ ಮತ್ತು ಮೊಳಕೆಯೊಡೆಯುವ ಸಸ್ಯರಾಶಿಗೂ ತೊಂದರೆ ಆಗುತ್ತದೆ. ಹೀಗಾಗಿ ಆಗಸ್ಟ್ ನಿಂದ ಚಾರಣಕ್ಕೆ ಮರು ಚಾಲನೆ ನೀಡುವುದಾಗಿ ತಿಳಿಸಿದರು.
ಈಗಾಗಲೇ ರಾಜ್ಯದ ಹಲವು ಚಾರಣ ಪಥಗಳನ್ನು ಪರಿಸರ ಪ್ರವಾಸೋದ್ಯಮ ವಿಭಾಗ ನಿರ್ವಹಿಸುತ್ತಿದ್ದು, ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಅದೇರೀತಿ ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಕೊಡಚಾದ್ರಿ, ಕುರಿಂಜಲ್, ಕಂಗಡಿಕಲ್, ನರಸಿಂಹ ಪರ್ವತಗಳಲ್ಲಿ ಅರಣ್ಯ ಇಲಾಖೆ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಇದಲ್ಲದೆ ಎತ್ತಿನಭುಜ ಸೇರಿದಂತೆ ಕೆಲವು ಕಡೆಗಳಲ್ಲಿ ಆನ್ ಲೈನ್ ಟಿಕೆಟ್ ವ್ಯವಸ್ಥೆ ಇರುವುದಿಲ್ಲ. ಈ ಎಲ್ಲ ಚಾರಣ ಪಥಗಳಿಗೂ ಒಂದೇ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಚಾರಣಿಗರ ಸಂಖ್ಯೆಗೆ ಮಿತಿ ಕೆಲವು ಪ್ರವಾಸಿ ಸಂಸ್ಥೆಗಳು (ಟೂರ್ ಆಪರೇಟರ್ ಗಳು) ಚಾರಣ ಪಥಗಳ ಬಗ್ಗೆ ಯುವಜನರಲ್ಲಿ ಅತಿಯಾದ ಆಸಕ್ತಿ ಕೆರಳಿಸುತ್ತಿದ್ದು, ಇದರ ಪರಿಣಾಮವಾಗಿ ಚಾರಣಪಥಗಳಲ್ಲಿ ವಾರಾಂತ್ಯದಲ್ಲಿ ದಟ್ಟಣೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೂ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕೃತಿ, ಪರಿಸರ ಉಳಿಸಲು ಕೆಲವು ಕಠಿಣ ಕ್ರಮ ಅತ್ಯಗತ್ಯ ಎಂದು ಹೇಳಿದರು.
ಪ್ರತಿಯೊಂದು ಚಾರಣ ಪಥದಲ್ಲೂ ಅದರ ವಿಸ್ತಾರ, ಅಲ್ಲಿರುವ ಗೈಡ್ ಮತ್ತು ಇತರ ಮೂಲಭೂತ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಚಾರಣಿಗರ ಸಂಖ್ಯೆಗೆ ಮಿತಿ ವಿಧಿಸಲಾಗುವುದು. ಯಾವುದೇ ಚಾರಣ ಪಥದಲ್ಲಿ ಸೀಮಿತ ಸಂಖ್ಯೆಗಿಂತ ಹೆಚ್ಚಿನ ಚಾರಣಿಗರಿಗೆ ಅವಕಾಶವಾಗದಂತೆ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಮೂರನೆ ವ್ಯಕ್ತಿ ತಪಾಸಣೆ.
ಒಂದೊಮ್ಮೆ ಯಾವುದೇ ಚಾರಣ ಪಥದಲ್ಲಿ ಹೆಚ್ಚಿನ ಸಂಖ್ಯೆಯ ಚಾರಣಿಗರಿಗೆ ಅವಕಾಶ ನೀಡಲಾಗುತ್ತಿದೆ ಎಂದು ದೂರು ಬಂದರೆ, ಈ ಬಗ್ಗೆ ಮೂರನೇ ವ್ಯಕ್ತಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಂದೇ ವೆಬ್ ಸೈಟ್ ನಲ್ಲಿ ವಿವಿಧ ಚಾರಣ ಪಥಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಇರುವ ಕಾರಣ, ಒಂದು ಚಾರಣ ಪಥದಲ್ಲಿ ಟಿಕೆಟ್ ಸಿಗದಿದ್ದರೆ ಮತ್ತೊಂದಕ್ಕೆ ಟಿಕೆಟ್ ಕಾಯ್ದಿರಿಸುವ ಅವಕಾಶವೂ ಇರುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ವಿವರಿಸಿದರು.ರಾಜ್ಯದಲ್ಲಿ 5 ವರ್ಷಗಳಲ್ಲಿ 25 ಕೋಟಿ ಸಸಿ ನೆಡುವ ಗುರಿ: ಸಚಿವ ಈಶ್ವರ ಖಂಡ್ರೆ
ರಾಜ್ಯದಲ್ಲಿ ಪ್ರತಿವರ್ಷ ತಲಾ ಐದು ಕೋಟಿಯಂತೆ 5 ವರ್ಷಗಳಲ್ಲಿ 25ಕೋಟಿ ಸಸಿ ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಆಲಂಪುರಿ ಕಾವಳ ಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಹಮ್ಮಿಕೊಂಡಿರುವ ಅರಣ್ಯೀಕರಣ ದಶಲಕ್ಷ ಗಿಡಗಳ ನಾಟಿ ಯೋಜನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಳೆದ ಐದು ವರ್ಷದಲ್ಲಿ 5.43 ಕೋಟಿ ಗಿಡಗಳನ್ನು ರಾಜ್ಯದೆಲ್ಲೆಡೆ ನೆಡಲಾಗಿದೆ. ಈ ಪೈಕಿ ಶೇ.85ರಿಂದ ಶೇ.90ರಷ್ಟು ಗಿಡಗಳು ಬದುಕುಳಿದಿವೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ವಾರ್ಷಿಕ 10ಕೋಟಿ ಗಿಡಗಳನ್ನು ನೆಟ್ಟರೂ ಸಾಲದ್ದು. ರಾಜ್ಯದಲ್ಲಿ ಶೇ.21ರಷ್ಟು ಅರಣ್ಯ ಪ್ರದೇಶ ಮಾತ್ರವಿದೆ. ನಮ್ಮ ಉಳಿವಿಗೆ ದೇಶದಲ್ಲಿ ಶೇ.33ರಷ್ಟು ಅರಣ್ಯ ಇರಲೇಬೇಕಾದ ಅಗತ್ಯವಿದೆ. ಸುಸ್ಥಿರ ಅಭಿವೃದ್ಧಿಗೆ ಹಸಿರು ಹೊಡದಿಕೆ ಅಗತ್ಯ ಎಂದರು.ಹೆಚ್ಚುತ್ತಿರುವ ತಾಪಮಾನದಿಂದಾಗಿ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಹೀಗಿರುವಾಗ, ಪ್ರಾಣಿ-ಮಾನವ ಸಂಘರ್ಷದ ನಡುವೆ ಪರಿಸರವನ್ನು ಉಳಿಸಿ ಬೆಳೆಸುವುದಕ್ಕೆ ಸಂಘ-ಸಂಸ್ಥೆಗಳ ಜತೆಗೆ ಕೈಜೋಡಿಸಲಾಗುವುದು ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸರ್ಕಾರ ತಾಲೂಕಿಗೊಂದು ಸಸ್ಯೋದ್ಯಾನ ನಿರ್ಮಿಸುತ್ತಿದ್ದು, ಎಲ್ಲ ಊರಿನಲ್ಲೂ ಶುದ್ಧ ಗಾಳಿಗೆ ಒಂದು ನಿರ್ದಿಷ್ಟ ಸ್ಥಳ ಕಾಯ್ದಿರಿಸುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಹೊಸ ಸಸಿ ನೆಡುವುದರ ಜೊತೆಗೆ ಇರುವ ವೃಕ್ಷಗಳ ಸಂರಕ್ಷಣೆಯನ್ನೂ ನಾವು ಮಾಡಬೇಕು. ಆಗ ಮಾತ್ರ ಹಸಿರು ಉಳಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ನಂತರ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ವೀಕ್ಷಿಸಿ, ಅಲ್ಲಿರುವ ವೃಕ್ಷಗಳ ಮಾಹಿತಿ ಪಡೆದರು. ಸಸ್ಯೋದ್ಯಾನಗಳಿಗೆ ಬರುವ ಮಕ್ಕಳಿಗೆ, ಜನರಿಗೆ ಕನಿಷ್ಠ 10 ಗಿಡ ಮರಗಳನ್ನು ಗುರುತಿಸುವಂತೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು. ಶಾಸಕ ರಾಜೇಶ್ ನಾಯಕ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್ ಮತ್ತಿತರರು ಉಪಸ್ಥಿತರಿದ್ದರು.