ವೇಣೂರು ಬಾಹುಬಲಿ ಮೂರ್ತಿ ಮಹಾಮಜ್ಜನ ಸಂಭ್ರಮ!
– ಮಾ.1ರವರೆಗೂ ನಡೆಯಲಿರುವ ಮಹಾಮಸ್ತಕಾಭಿಷೇಕ
– ಶತಮಾನದ ಮೂರನೇ ಮಹಾಮಸ್ತಕಾಭಿಷೇಕ!
NAMMUR EXPRESS NEWS
ಬೆಳ್ತಂಗಡಿ : ವೇಣೂರಿನ ತಿಮ್ಮಣ್ಣ ಅಜಿಲರು 1604 ರಲ್ಲಿ ಪ್ರತಿಷ್ಠಾಪಿಸಿದ ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕವು ಗುರುವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ. ಗುರುವಾರ ಸಂಜೆ 7 ಗಂಟೆಗೆ 108 ಕಲಶಗಳ ಅಭಿಷೇಕ ಆರಂಭಗೊಂಡಿತು. ಸರ್ವೇಶ್ ಜೈನ್ ಮತ್ತು ತಂಡದವರ ಸುಮಧುರ ಸಂಗೀತ ಅಭಿಷೇಕದ ಸಿಂಚನಕ್ಕೆ ಸಾಥ್ ನೀಡಿತು.
ಅಭಿಷೇಕದ ನಂತರ ಮೂರ್ತಿಯ ಜಿಡ್ಡು ತೆಗೆಯಲು ಕಷಾಯದಲ್ಲಿ ನೀರಿನ ಜಳಕ ನಡೆಯಿತು. ಪುಷ್ಪವೃಷ್ಟಿ, ಕನಕವೃಷ್ಟಿ ನಡೆದ ಬಳಿಕ ಬೃಹತ್ ಮಾಲೆಯನ್ನು ಮಹಾ ಮೂರ್ತಿಗೆ ತೊಡಿಸಲಾಯಿತು. ಕೊನೆಯಲ್ಲಿ ಮಹಾಮಂಗಳಾರತಿಯೊಂದಿಗೆ ಮೊದಲ ದಿನದ ಮಹಾಭಿಷೇಕ ಸಂಪನ್ನಗೊಂಡಿತು. ಮೂಡುಬಿದರೆ ಡಾ. ಚಾರುಕೀರ್ತಿ ಭಟ್ಟಾರಕ ಶ್ರೀಗಳು ಮಾರ್ಗದರ್ಶನ ನೀಡಿದರು. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಉಪಸ್ಥಿತರಿದ್ದರು. ಸಾವಿರಾರು ಮಂದಿ ಅಭಿಷೇಕವನ್ನು ಕಣ್ತುಂಬಿಸಿಕೊಂಡರು.