ದಕ್ಷಿಣ ಕನ್ನಡದಲ್ಲಿ ವಿಜಯೋತ್ಸವ!
– ಕಾರ್ಯಕರ್ತರು, ಮೋದಿಗೆ ಗೆಲುವು ಅರ್ಪಣೆ ಎಂದ ಚೌಟ
– ಯಾರಿಗೆ ಎಷ್ಟು ಮತ?… ಚೌಟ ಗೆಲುವು ಹೇಗೆ…?
– ಬಿಜೆಪಿ, ಕಾಂಗ್ರೆಸ್, ಪಕ್ಷೇತರರು ಪಡೆದ ಮತ ಎಷ್ಟು?
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡದಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದ್ದು ಎಲ್ಲೆಡೆ ವಿಜಯೋತ್ಸವ ನಡೆಯುತ್ತಿದೆ. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ದ.ಕ ಕ್ಷೇತ್ರದ ಸಂಸದರಾಗಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಆಯ್ಕೆಯಾಗಿದ್ದಾರೆ. ಅವರು 1, 49,208 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ದೆಹಲಿ ಸಂಸತ್ ಭವನ ಪ್ರವೇಶಿಸುವ ಕುಡ್ಲ ಕುವರ ಚೌಟ ಆಗಿದ್ದಾರೆ ಬಿಜೆಪಿ ಅಭ್ಯರ್ಥಿ ಚೌಟ ಅವರ ಪರವಾಗಿ 7,64,132 ಮತದಾರರು ಮತವನ್ನು ಚಲಾಯಿಸಿದ್ದಾರೆ. ಇವರಿಗೆ ನೇರ ಸ್ಪರ್ಧೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ 6,14,924 ಮತ ಪಡೆದಿದ್ದಾರೆ. ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಕಾಂತಪ್ಪ ಅಲಂಗಾರ್ 4232, ಕರುನಾಡ ಸೇವಕರ ಪಾರ್ಟಿ ಅಭ್ಯರ್ಥಿ ದುರ್ಗಾ ಪ್ರಸಾದ್ 2592 ಮತ ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಪ್ರಿತ್ ಕುಮಾರ್ ಪೂಜಾರಿ 1901 ಮತಗಳಿಸಿದ್ದು, ಪಕ್ಷೇತರ ಅಭ್ಯರ್ಥಿ ಮ್ಯಾಕ್ಸಿಮ್ ಪಿಂಟೊ 1690 ಮತ ಗಳಿಸಿದ್ದಾರೆ .
ಪಕ್ಷೇತರ ಅಭ್ಯರ್ಥಿ ದೀಪಕ್ ರಾಜೇಶ್ ಕುವೆಲ್ಲೊ 976, ಉತ್ತಮ ಪ್ರಜಾಕೀಯ ಪಾರ್ಟಿ ಪ್ರಜಾಕೀಯ ಮನೋಹರ್ 971, ಕರ್ನಾಟಕ ರಾಷ್ಟ್ರ ಸಮಿತಿ ರಂಜಿನಿ ಎಂ 776 ಮತಗಳಿಸಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ನೋಟಾಗೆ 23576 ಮತ ಚಲಾವಣೆ ಆಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಹೊಸ ಮುಖವಾಗಿ ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತ್ತು. ಆದರೆ ಅವರಿಂದಲೂ ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಒಡ್ಡಲು ಸಾಧ್ಯವಾಗಿರಲಿಲ್ಲ.ಇದು ಈ ಬಾರಿ ಪುನಾರವರ್ತನೆ ಆಗಿದೆ. ದ.ಕ. ಬಿಜೆಪಿಯ ಭದ್ರಕೋಟೆ ಎಂಬುವುದನ್ನು ಈ ಫಲಿತಾಂಶವೂ ಸಾಬೀತುಪಡಿಸಿದೆ.
ಕಳೆದ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ 7,74,285 ಮತ ಗಳಿಸಿದ್ರೆ, ಮಿಥುನ್ ರೈ 4,99,664 ಮತಗಳಿಸಿ 2,74,621 ಮತಗಳ ಭಾರೀ ಅಂತರದಿಂದ ಸೋಲು ಕಂಡಿದ್ದರು. ಹೊಸ ಮುಖವಾಗಿ ಸೇನೆಯಲ್ಲಿ ಅಧಿಕಾರಿಯಾಗಿ ದೇಶ ಸೇವೆ ಸಲ್ಲಿಸಿದ್ದ ಶೈಕ್ಷಣಿಕವಾಗಿ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿದ್ದು ಇದೀಗ ಅವರು ಗೆಲುವನ್ನು ದಾಖಲಿಸಿದ್ದಾರೆ.
ಈ ಮೂಲಕ ಕರಾವಳಿಯಲ್ಲಿ ಕಮಲ ಮತ್ತೆ ತನ್ನ ಪಾರುಪತ್ಯ ಸಾಧನೆ ಮಾಡಿದೆ.
ಬ್ರಿಜೇಶ್ ಚೌಟ ಅವರಿಗೆ ಪ್ರಮಾಣ ಪತ್ರ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಮುಲ್ಲೈ ಮುಗಿಲನ್ ಎಂಪಿ ಅವರು ಬಿಜೆಪಿ ಪಕ್ಷದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರಾದ ಆಕಾಂಕ್ಷ ರಂಜನ್, ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಪುತ್ತೂರು ಉಪ ವಿಭಾಗ ಅಧಿಕಾರಿ ಜುಬಿನ್ ಮೋಹ ಪಾತ್ರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಪಿ. ಶ್ರವಣ್ ಕುಮಾರ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ನನ್ನ ಗೆಲುವು ಕಾರ್ಯಕರ್ತರ ಗೆಲುವು: ಬ್ರಿಜೇಶ್ ಚೌಟ
ಪುತ್ತೂರು: ಇದು ನನ್ನ ಗೆಲುವಲ್ಲ ದಕ್ಷಿಣ ಕನ್ನಡ ಜಿಲ್ಲೆ ಸಂಘಟನೆಯ ಕಾರ್ಯಕರ್ತರ ಗೆಲುವು ಎಂದು ಲೋಕಸಭಾ ಚುನಾವಣೆಯ ಗೆಲುವಿನ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದ್ದಾರೆ. ಅವರು ಲೋಕಸಭಾ ಚುನಾವಣೆಯ ಮತ ಎಣಿಕೆ ಕೇಂದ್ರದಿಂದ ಹೊರ ಬಂದು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಾಲ ಸಹಿತ ಹಲವಾರು ಮುಖಂಡರು ಉಪಸ್ಥಿತರಿದ್ದರು
ಲೋಕಸಭೆ ಚುನಾವಣೆಯಲ್ಲಿನ ಈ ಗೆಲುವು ಮೋದಿಯವರ, ಹಿಂದುತ್ವದ, ಸಂಘಟನೆ ಕಾರ್ಯಕರ್ತರ ಹಾಗೂ ಜಿಲ್ಲಾಧ್ಯಕ್ಷರ ಗೆಲುವು ಎಂಬುದಾಗಿ ದಕ್ಷಿಣ ಕನ್ನಡದಿಂದ ಭರ್ಜರಿ ಜಯಭೇರಿ ಬಾರಿಸಿರುವ ಬ್ರಿಜೇಶ್ ಚೌಟ ಹೇಳಿದ್ದಾರೆ.
ತಮ್ಮ ಗೆಲುವಿನ ಬಳಿಕ ಮಾತನಾಡಿದ ಅವರು, ಸತ್ಯ, ಧರ್ಮ, ನ್ಯಾಯ, ಹಿಂದುತ್ವದ ಆಧಾರದಲ್ಲಿ ನಾವು ಜಿಲ್ಲೆಯಲ್ಲಿ ಸ್ಪರ್ಧೆ ಮಾಡಿದ್ದೆವು. ತುಳುನಾಡಿನ ದೈವ ದೇವರ ಆಶೀರ್ವಾದದ ಬಲದಿಂದ, ಕಾರ್ಯಕರ್ತರ ಪರಿಶ್ರಮ, ಸಂಘಟನೆಯ ಹಿರಿಯರ ಮಾರ್ಗದರ್ಶನದಿಂದ, ರಾಜ್ಯ ಹಾಗೂ ಕೇಂದ್ರದ ನಾಯಕರ ಬೆಂಬಲದೊಂದಿಗೆ ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಪಕ್ಷವು ಒಂದಾಗಿ ಬಿಜೆಪಿಯನ್ನು ಸೋಲಿಸುವುದಕ್ಕೆ ಪ್ರಯತ್ನಿಸಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ನವಯುಗ ನವಪಥದ ಆಧಾರದಲ್ಲಿ ಹಿಂದುತ್ವಕ್ಕೆ ಬದ್ಧತೆಯಿರಿಸುತ್ತೇನೆ. ಅಭಿವೃದ್ಧಿಯನ್ನು ಆದ್ಯತೆಯಾಗಿರಿಸಿ ದ.ಕ. ಜಿಲ್ಲೆಯಲ್ಲಿ ಹೊಸಪರ್ವ, ಹೊಸಕನಸು, ಹೊಸ ಆಶೋತ್ತರಗಳನ್ನು ಜನರ ಮಧ್ಯೆ ಹುಟ್ಟಿಸುತ್ತೇನೆ. ಆ ಮೂಲಕ ಎಲ್ಲರ ಸಹಕಾರದೊಂದಿಗೆ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇನೆ ಎಂದಿದ್ದಾರೆ.