3 ಎಕರೆ ಒಳಗಿನ ಭೂಮಿ ಒತ್ತುವರಿ ತೆರವು ಇಲ್ಲ!
– ಕೊಪ್ಪ ತಾಲೂಕಿನಲ್ಲಿ ಒತ್ತುವರಿ ತೆರವು ಶುರು
– ಅರಣ್ಯ ಸಚಿವರು ಹೇಳಿದ್ದೇನು..? ಯಾವ ಭೂಮಿ ತೆರವು ಇಲ್ಲ?
– ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ
NAMMUR EXPRESS NEWS
ಬೆಂಗಳೂರು: ರಾಜ್ಯ ಸರಕಾರ 2015ರಲ್ಲಿ ಆದೇಶ ಮಾಡಿದ್ದು, ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ಪಟ್ಟಾ ಭೂಮಿ ಮತ್ತು ಒತ್ತುವರಿ ಭೂಮಿ ಎರಡೂ ಸೇರಿ 3 ಎಕರೆ ಮೀರದಿದ್ದರೆ ಅಂತಹ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಹೇಳಿದೆ. ಸರಕಾರ ಈಗಲೂ ಅದಕ್ಕೆ ಬದ್ಧವಾಗಿದೆ.
ಅದೇ ರೀತಿ ಅರಣ್ಯ ಹಕ್ಕು ಕಾಯಿದೆ ಅಡಿ ಈಗಾಗಲೇ ಅರ್ಜಿ ಸಲ್ಲಿಸಿರುವವರ ಯಾವುದೇ ಮನೆ, ಜಮೀನು ತೆರವು ಮಾಡುವುದಿಲ್ಲ. ಆದರೆ 2015ರ ಅನಂತರದ ಹೊಸ ಒತ್ತುವರಿ ವಿಚಾರದಲ್ಲಿ ಕ್ರಮ ಜರಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವಯನಾಡು ಭೂ ಕುಸಿತದ ಬೆನ್ನಲ್ಲೇ ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಆತಂಕದ ಛಾಯೆ ಮನೆ ಮಾಡಿದ್ದು, ಒತ್ತುವರಿ ತೆರವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ಪಷ್ಟ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ 69 ಎಕರೆ ಒತ್ತುವರಿ ತೆರವುಗೊಳಿಸಿದೆ.
69 ಎಕರೆ ಒತ್ತುವರಿ ತೆರವು
ರಾಜ್ಯದ 10 ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿನ ಒತ್ತುವರಿಯನ್ನು ತತ್ ಕ್ಷಣದಿಂದಲೇ ತೆರವುಗೊಳಿಸುವಂತೆ ಖಂಡ್ರೆ ಸೂಚನೆ ನೀಡಿದ 24 ಗಂಟೆಯಲ್ಲಿ ನೂತನ ಕಾರ್ಯಪಡೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಹೋಬಳಿಯ ಮಾಗುಂಡಿಯಲ್ಲಿ 17.17 ಎಕರೆ, ಹಲಸೂರಿನಲ್ಲಿ 13.38 ಎಕರೆ ಹಾಗೂ ತನುಡಿಯಲ್ಲಿ 36 ಎಕರೆ ಸೇರಿ ಒಟ್ಟು 69 ಎಕರೆ ಅರಣ್ಯ ಭೂಮಿ ತೆರವು ಮಾಡಿಸಲಾಗಿದೆ. ಪಶ್ಚಿಮಘಟ್ಟ ಮತ್ತು ಅರಣ್ಯ ಒತ್ತುವರಿ ತೆರವು ಕಾರ್ಯಪಡೆಯ ಅಧ್ಯಕ್ಷರಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ದೀಕ್ಷಿತ್ ಅವರ ಆದೇಶದಂತೆ ಈ ಕ್ರಮ ಜರುಗಿಸಲಾಗಿದೆ.
ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ
ಇದೆಲ್ಲ ವಿಚಾರಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಈಗ ಮತ್ತೂಂದು ಅಧಿಸೂಚನೆ ಹೊರಡಿಸಿದೆ. ರಾಜ್ಯದ 20,668 ಚದರ ಕಿಲೋ ಮೀಟರ್ಗೂ ಹೆಚ್ಚು ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಹೇಳಿದೆ. ರಾಜ್ಯದ 10 ಜಿಲ್ಲೆ ಅಂದರೆ
ಚಾಮರಾಜನಗರ, ಕೊಡಗು, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಳಗಾವಿಯ 33 (ತಾಲೂಕು ಪುನರ್ ವಿಂಗಡಣೆಯ ಅನಂತರ 39) ತಾಲೂಕುಗಳ 1,533 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.
ಸಾಧಕ-ಬಾಧಕ ಅರಿಯಲು ಸಮಿತಿ ರಾಜ್ಯ ಸರಕಾರ ಈಗಾಗಲೇ ಈ ವರದಿ ತಿರಸ್ಕರಿಸುವ ತೀರ್ಮಾನ ಕೈಗೊಂಡಿದ್ದು, ಈಗ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಚಿವ ಸಂಪುಟದಲ್ಲಿ ಸಮಾಲೋಚಿಸಿ, ಸರ್ವ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಬಾಧ್ಯಸ್ಥರೊಂದಿಗೆ ಅಂದರೆ 1,533 ಗ್ರಾಮಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ನಿವಾಸಿಗಳೊಂದಿಗೆ ಚರ್ಚಿಸಿ, ಸಾಧಕ ಬಾಧಕ ಅರಿತು ವರದಿ ನೀಡಲು ನಿವೃತ್ತ ಐಎಫ್ಎಸ್ ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಸದಸ್ಯರು ತಮ್ಮನ್ನು ಔಪಚಾರಿಕವಾಗಿ ಭೇಟಿ ಮಾಡಿದರು. ಆದರೆ ಯಾವುದೇ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಜನರೊಂದಿಗೆ ಮಾತುಕತೆ ನಡೆಸಲಿಲ್ಲ ಎಂದು ಹೇಳಿದರು.