- ಕೊಪ್ಪ ತಾಲೂಕು ಭಂಡಿಗಡಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ
- ಶಾಲಾ ಅಭಿವೃದ್ಧಿಗೆ ಊರವರೇ ಅಂಟಿಗೆ ಪಂಟಿಗೆ ಕಟ್ಟಿ ಹಣ ಕೊಟ್ಟರು!
- 60ಕ್ಕೂ ಹೆಚ್ಚು ಅಂಟಿಗೆ ಪಂಟಿಗೆ ಹಾಡುಗಾರರಿಗೆ ಸನ್ಮಾನ
- ಕ್ರಿಯೇಟಿವ್ ಮೀಡಿಯಾದಿಂದ ಪುಸ್ತಕ, ನಮ್ಮ ಭಂಡಿಗಡಿ ಡಾಕ್ಯುಮೆಂಟ್ರಿ ಬಿಡುಗಡೆ
NAMMUR EXPRESS NEWS
ಕೊಪ್ಪ: ಆ ಪುಟ್ಟ ಹಳ್ಳಿಯ ಸರ್ಕಾರಿ ಪ್ರೌಢ ಶಾಲೆ. ಸುಮಾರು 30 ವರ್ಷಗಳ ದೀರ್ಘ ಪಯಣದಲ್ಲಿ 15 ವರ್ಷದ ಬಳಿಕ ಸರ್ಕಾರದ ಅನುದಾನ, ಸೌಲಭ್ಯ ಪಡೆಯಿತು. 15 ವರ್ಷ ಗ್ರಾಮಸ್ಥರು ಅಂಟಿಗೆ ಪಂಟಿಗೆ ಕಟ್ಟಿ ಹಣ ಸಂಗ್ರಹಿಸಿ ಶಾಲೆ ನಡೆಸಿದ್ದರು, ಶಿಕ್ಷಕರು ಬಿಡಿಗಾಸು ಪಡೆಯದೇ ಸೇವೆ ಮಾಡಿದ್ದರು. ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದರು.
ಸರ್ಕಾರಿ ಶಾಲೆ ಉಳಿಸಲು ಅಂಟಿಗೆ ಪಂಟಿಗೆ ಕಟ್ಟಿ ಊರೂರು ಹಾಡು ಹೇಳಿ ಹಣ ಸಂಗ್ರಹಿಸಿದ ಕೊಪ್ಪ ತಾಲೂಕು ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಇಂದು ಎಲ್ಲದರಲ್ಲೂ ಮುಂದಿದೆ.
ಶಾಲಾ ಮುಖ್ಯ ಉಪಾಧ್ಯಾಯ ಎನ್.ಎಸ್. ಸುರೇಂದ್ರ ಹಾಗೂ ಎಲ್ಲಾ ಶಿಕ್ಷಕರ ಶ್ರಮ, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಶಾಲೆ ಎಲ್ಲರ ಗಮನ ಸೆಳೆದಿದೆ.
ಸುರೇಂದ್ರ ಎನ್.ಎಸ್, ಸುಬ್ರಮಣ್ಯ ಸಿ. ಎಸ್, ಜೆ.ಪಿ ಹರೀಶ್, ರಮೇಶ್ ಉಪಾದ್ಯಾಯ ಜಿ ರುದ್ರಪ್ಪ ಸೀತಾದೇವಿ ಮತ್ತು ಸಹ ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದಾರೆ.
ಮಾ.6ರಂದು ಶಾಲೆಯಲ್ಲಿ ವಾರ್ಷಿಕ ಸಂಭ್ರಮ 2023 ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿಗೆ ಅಂಟಿಗೆ ಪಂಟಿಗೆ ಕಟ್ಟಿ ಸಹಾಯ ಮಾಡಿದ 60ಕ್ಕೂ ಹೆಚ್ಚು ಮಂದಿಯನ್ನು ಹಾಗೂ ಸಹಕಾರ ಮಾಡಿದ ಗ್ರಾಮಸ್ಥರನ್ನು ಗೌರವಿಸಲಾಯಿತು. ಜೊತೆಗೆ ಅಂಟಿಗೆ ಪಂಟಿಗೆ ಕುರಿತು ಕಾಲೇಜಿನ ಹಳೆಯ ವಿದ್ಯಾರ್ಥಿ, ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಲ್ಲಿ ಒಬ್ಬರಾದ ಅಶ್ವಥ್ ಎಸ್.ಎಲ್ ಅವರ ನೇತೃತ್ವದಲ್ಲಿ ತಯಾರಾದ ಅಂಟಿಗೆ ಪಂಟಿಗೆ ಕೃತಿ ಹಾಗೂ ಅಂಟಿಗೆ ಪಂಟಿಗೆ ಕುರಿತ ಎಲ್ಲಾ ಪ್ರಕಾರಗಳ ಹಾಡು ಇರುವ ಕ್ರಿಯೇಟಿವ್ ಮೀಡಿಯಾ ಅರ್ಪಣೆಯ ವಿಶೇಷ ಡಾಕ್ಯುಮೆಂಟರಿ ಚಾನೆಲ್ ಬಿಡುಗಡೆಗೊಳಿಸಲಾಯಿತು.
ಇದೇ ವೇಳೆ ರಾಜ್ಯಮಟ್ಟದ ಕಲೋತ್ಸವದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.
ತನ್ನ ಶಾಲೆಗೆ ಮಿಡಿದ ಕ್ರಿಯೇಟಿವ್ ಮೀಡಿಯಾ!
ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿ ಬಳಿಕ ಉನ್ನತ ವ್ಯಾಸಂಗ ಮಾಡಿ ರಾಜ್ಯಕ್ಕೆ ಮಾದರಿ ಎಂಬಂತೆ ಶಿಕ್ಷಣ ಸಂಸ್ಥೆ ಕಟ್ಟಿರುವ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸಂಸ್ಥಾಪಕ, ಶಾಲೆಯ ಹಳೆಯ ವಿದ್ಯಾರ್ಥಿ ಅಶ್ವಥ್ ಎಸ್ ಎಲ್ ತಮ್ಮ ಶಾಲೆಯ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಾ ಜಾನಪದ ಬೆಳವಣಿಗೆಗೂ ಕೈ ಜೋಡಿಸಿದ್ದಾರೆ.
ತಮ್ಮ ಸಂಸ್ಥೆಯ ಕ್ರಿಯೇಟಿವ್ ಮೀಡಿಯಾ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಅಂಟಿಗೆ ಪಂಟಿಗೆ ಕಲಾವಿದರು, ಕಲಾ ಪ್ರಕಾರ, ಮಲೆನಾಡಿನ ಅಂಟಿಗೆ ಪಂಟಿಗೆ ಕಲೆಯ ಬಗ್ಗೆ ಕೃತಿ ಜೊತೆಗೆ ನಮ್ಮ ಮಲೆನಾಡಿನ ಜಾನಪದ ಕಲೆಯನ್ನು ಒಂದು ಡಾಕ್ಯುಮೆಂಟರಿಯಾಗಿ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಅಂಟಿಗೆ ಪಂಟಿಗೆಯ ಎಲ್ಲಾ ಹಾಡುಗಳ ಪ್ರಕಾರ ದಾಖಲು ಮಾಡಲಾಗಿದೆ.
2000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜ್ಞಾನ ದೇಗುಲ!
ಮೊದಲ 15 ವರ್ಷ ಶಿಕ್ಷಕರಿಗೆ ಬಿಡಿಗಾಸು ಬಂದಿರಲಿಲ್ಲ, ಆಗ ಅಂಟಿಗೆ ಪಂಟಿಗೆ ಮಾಡಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಸಹಕರಿಸಿದ್ದರು. ಅಂದಿನ ಶಿಕ್ಷಕರು ನಿಸ್ವಾರ್ಥ ಸೇವೆ ಮಾಡಿದ್ದರು. ಬಳಿಕ ಸರ್ಕಾರದ ಅನುದಾನಿತ ಶಾಲೆಯಾಗಿ ಈ ಶಾಲೆ ಪರಿವರ್ತನೆ ಆಯಿತು.
ಸರ್ಕಾರ ಶಿಕ್ಷಕರಿಗೆ ಸಂಬಳ ಹಾಗೂ ಶಾಲೆಗೆ ಸೌಲಭ್ಯ ನೀಡಿತು. ಹೆಚ್ಚೇನೂ ಸೌಲಭ್ಯವಿಲ್ಲದ ಭಂಡಿಗಡಿ ಶಾಲೆಗೆ ಶಕಟಪುರಂ ಮಠ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಿತು. ಸರ್ಕಾರದಿಂದ ಹಾಸ್ಟೆಲ್ ಮಂಜೂರಾಯಿತು. ಈಗ ಶಾಲೆ ಅಭಿವೃದ್ಧಿ ಆಗುತ್ತಿದೆ.
30 ವರ್ಷದಲ್ಲಿ ಸುಮಾರು 2000 ಅಧಿಕ ವಿದ್ಯಾರ್ಥಿಗಳು ಇಲ್ಲಿ ಓದಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅದರಲ್ಲಿ ಅನೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅನೇಕರು ಹಳ್ಳಿಯಲ್ಲೇ ಅನೇಕ ಕ್ಷೇತ್ರದಲ್ಲಿದ್ದಾರೆ. ಹಳೆ ವಿದ್ಯಾರ್ಥಿ ಸಂಘವನ್ನು ಕಟ್ಟಿ ಅವರೂ ಶಾಲೆ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ.
ವಾರ್ಷಿಕೋತ್ಸವದ ಸಂಭ್ರಮ: ಮಕ್ಕಳಿಗೆ ಗೌರವ
ಪ್ರೌಢಶಾಲೆಯ ಶೈಕ್ಷಣಿಕ ಸಮಿತಿ ಅಧ್ಯಕ್ಷರಾದ ಕೆ.ಕೆ ಸಾಯಿನಾಥ್ ಉದ್ಘಾಟಿಸಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಶ್ರೀ ಟೈಲರಿಂಗ್ ತರಬೇತಿಯನ್ನು ಉದ್ಘಾಟಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಚ್ ಪಿ ಮಹೇಂದ್ರ ಹೊಸೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿನೇಶ್ ಇರ್ವತ್ತೂರು ಕ್ರಿಯೇಟಿವ್ ಮೀಡಿಯಾ ಕಾರ್ಕಳ ನಿರ್ಮಿತ ‘ನಮ್ಮ ಭಂಡಿಗಡಿ’ ಯೂಟ್ಯೂಬ್ ಚಾನೆಲ್ ಉದ್ಘಾಟಿಸಿದರು. ಆಂಟಿಗೆ ಪಂಟಿಗೆಪದಗಳ ಸಂಗ್ರಹ ಕೃತಿ ಸಾಂಕೇತಿಕ ಬಿಡುಗಡೆಯನ್ನು ಕ್ರಿಯೇಟಿವ್ ಪಿಯು ಕಾಲೇಜಿನ ಸಂಸ್ಥಾಪಕ ನಿರ್ದೇಶಕರಾದ ಅಶ್ವತ್ ಎಸ್ ಎಲ್ ನಡೆಸಲಿದ್ದಾರೆ. ಶ್ರೀ ಕ್ಷೇತ್ರ ಶಕಟಪುರಂ ವ್ಯವಸ್ಥಾಪಕರಾದ ರಾಘವನ್ ಅಂಟಿಗೆ ಪಂಟಿಗೆ ಕಲಾವಿದರಿಗೆ ಗೌರವಾರ್ಪಣೆ ಮಾಡಿದರು
ರಾಜ್ಯಮಟ್ಟದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಕೊಪ್ಪ ಪಿಸಿಎಆರ್ಡಿ ಬ್ಯಾಂಕ್ ಅಧ್ಯಕ್ಷರಾದ ಎಚ್.ಎಸ್ ಇನೇಶ್ ನೆರವೇರಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪ್ರೌಢಶಾಲೆ ಕಟ್ಟಡ ಅಭಿವೃದ್ಧಿ ಸಮಿತಿಯ ಖಜಾಂಚಿ ಬಿ ಎನ್ ಭಿಷೇಜ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಎಚ್.ಎಂ ರವಿಕಾಂತ್ ಅಭಿನಂದನಾ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಮ್ಮದ್ ಹುಸೇನ್ ಗಣಿತ ಮಾದರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಹರಿಹರಪುರ ಕಸಾಪ ಅಧ್ಯಕ್ಷರಾದ ವೈದ್ಯ ಬಿ ಆರ್ ಅಂಬರೀಶ್ ವಿಜ್ಞಾನ ಮಾದರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ರಮೇಶ್ ಇ.ಜಿ ದತ್ತ ನಿಧಿ ವಿತರಣೆ ಮಾಡಿದರು.ಮುಖ್ಯ ಅತಿಥಿಗಳಾಗಿ ಎಸ್ಪಿಎಂಸಿ ಸದಸ್ಯರಾದ ಅನ್ನಪೂರ್ಣ ಮಹೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಮಮತಾ, ಶ್ರೀಧರ್, ಚಂದಮ್ಮ, ರಮೇಶ್, ಜ್ಯೋತಿ, ಎಪಿಎಂ ಸಿ ನಿರ್ದೇಶಕರಾದ ವಿ ಸಿ ರಾಘವೇಂದ್ರ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರೇಮ್ ಕುಮಾರ್, ರಾಜ್ಯಮಟ್ಟದ ಖೋ ಖೋ ಕ್ರೀಡಾಪಟು ಸತ್ಯನಾರಾಯಣ ಎಸ್ ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಎಸ್ಡಿ ಎಂ ಸಿ ಸದಸ್ಯರಾದ ಉಮೇಶ್, ಪ್ರಕಾಶ್, ವನಿತಾ, ಸರಸ್ವತಿ, ರವಿ, ರಾಜಶೇಖರ್, ಚಂದ್ರಹಾಂಡ , ಎಸ್ ಡಿ ಎಂ ಸಿ ನಾಮನಿರ್ದೇಶಿತರಾದ ದಿನೇಶ್ ಈ ಎನ್, ಗೀತಾ, ರಜನಿ, ಶಿಕ್ಷಕರು, ಗ್ರಾಮಸ್ಥರು, ಪೋಷಕರು ಇತರರು ಇದ್ದರು. ಶಾಲೆಯ ಸಾಧಕ ಹಳೆಯ ವಿದ್ಯಾರ್ಥಿಗಳಾದ ರೇಖಾ ಎಸ್ ಎಲ್, ಸುಬ್ರಮಣ್ಯ ಇವರು ಉಪಸ್ಥಿತರಿದ್ದರು.